ಬೆಂಗಳೂರು: ಇಂದು ಬೆಳಗ್ಗೆ ದಿ ವಿಲನ್ ಸಿನಿಮಾ ನಿರ್ದೇಶಕ ಪ್ರೇಮ್ ನರ್ತಕಿ ಚಿತ್ರಮಂದಿರದ ಸೌಂಡ್ ಎಂಜಿನಿಯರ್ ವಿರುದ್ಧ ಕೋಪಗೊಂಡಿದ್ದರು. ಈ ಸಂಬಂಧ ಮಾಧ್ಯಮಗಳ ಮುಂದೆಯೂ ಪ್ರೇಮ್ ಅಸಮಾಧಾನ ಹೊರ ಹಾಕಿದ್ದರು. ಸದ್ಯ ಪ್ರೇಮ್ ಹೇಳಿಕೆಗೆ ನರ್ತಕಿ ಚಿತ್ರಮಂದಿರದ ಮ್ಯಾನೇಜರ್ ನರಸಿಂಹ ಯಾದವ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಗರದ ಕೆ.ಜಿ.ರಸ್ತೆಯಲ್ಲಿ ನಮ್ಮದೇ ನಂಬರ್ ಒನ್ ಥಿಯೇಟರ್. ಇಲ್ಲಿ ಯಾವುದೇ ಸೌಂಡ್ ಸಮಸ್ಯೆ ಇಲ್ಲ. ನಮ್ಮಲ್ಲಿ ಎಲ್ಲ ಸಿನಿಮಾಗಳು ಸರಿಯಾಗಿ ಪ್ರದರ್ಶನ ಆಗುತ್ತವೆ. ದಿ ವಿಲನ್ ಚಿತ್ರ ಪ್ರದರ್ಶನ ಆರಂಭದಲ್ಲಿ ಸೌಂಡ್ ಸರಿ ಮಾಡುವಾಗ ಅರೆಕ್ಷಣ ತಾಂತ್ರಿಕ ತೊಂದರೆ ಆಯಿತು. ಪ್ರೇಮ್ ಸಿನಿಮಾವನ್ನು ಕಷ್ಟಪಟ್ಟು ಇಷ್ಟದಿಂದ ಮಾಡಿದಾಗ ಸೌಂಡ್ ಸಮಸ್ಯೆಯಾದಾಗ ಬೇಸರವಾಗುವುದು ಸಹಜ ಎಂದು ನರಸಿಂಹ ಯಾದವ್ ತಿಳಿಸಿದ್ದಾರೆ.
ಪ್ರೇಮ್ ಅವರು ಮೇಲುಗಡೆ ಕ್ಯಾಬಿನ್ ನಲ್ಲಿ ಕುಳಿತು 5 ನಿಮಿಷ ಸಿನಿಮಾ ವೀಕ್ಷಿಸಿದ್ದಾರೆ. ಈವಾಗ ಬಂದು ಕುಳಿತು ನೋಡಲಿ. ಆಗ ನಂಗೂ ಅವರ ಅಭಿಪ್ರಾಯವನ್ನು ಕೇಳಬಹುದು. ಸಡನ್ ಆಗಿ ಅವರು ಆ ತರ ಹೇಳಿರುವುದು ಅವರ ಅಭಿಪ್ರಾಯವಷ್ಟೇ. ಆದ್ರೆ ಇಂದು ಮೆಜೆಸ್ಟಿಕ್, ಕೆ.ಜಿ ರೋಡ್ ಗೆ ನಂಬರ್ 1 ಥಿಯೇಟರ್ ಅಂದ್ರೆ ಅದು ನರ್ತಕಿ. ಇಲ್ಲಿ ರಾತ್ರಿ, ಹಗಲು ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ ಅಂತ ಅವರು ಹೇಳಿದ್ರು.
ನಮ್ಮ ಚಿತ್ರಮಂದಿರಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ. ಜನರಿಗೆ ಯಾವ ರೀತಿ, ಮನರಂಜನೆ ಹಾಗೂ ಖುಷಿ ನೀಡಬೇಕೋ ಅದಕ್ಕೆ ಎಲ್ಲಾ ರೀತಿಯಲ್ಲೂ ಸಿದ್ಧತೆ ನಡೆಸಿದ್ದೇವೆ ಅಂತ ಅವರು ಚಿತ್ರವೀಕ್ಷಕರಲ್ಲಿ ಮನವಿ ಮಾಡಿಕೊಂಡರು.
ನರ್ತಕಿ ಥಿಯೇಟರ್ ನಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗಿತ್ತು. ಚಿತ್ರದ ಆರಂಭದಲ್ಲಿಯೇ ಥಿಯೇಟರ್ ನಲ್ಲಿ ಸೌಂಡ್ ಸಮಸ್ಯೆ ಕಾಣಿಸಿಕೊಂಡಿತು. ಚಿತ್ರ ವೀಕ್ಷಿಸಿಸಲು ಖುಷಿಯಿಂದ ಬಂದ ಅಭಿಮಾನಿಗಳಿಗೆ ಕೆಲ ನಿಮಿಷ ಭಾರೀ ನಿರಾಸೆ ಉಂಟಾಯಿತು. ಇದರಿಂದ ಕೋಪಗೊಂಡು ಹೊರಬಂದ ಪ್ರೇಮ್ ಮಾಧ್ಯಮಗಳ ಮುಂದೆಯೇ ಚಿತ್ರಮಂದಿರದ ಮಾಲೀಕರ ಮೇಲೆ ಕೋಪಗೊಂಡರು.
ಪ್ರಪಂಚದ ದೊಡ್ಡ ದೊಡ್ಡ ಎಂಜಿನಿಯರ್ ಗಳ ಕರೆಸಿ ಸಾಂಗ್ ಮಾಡಿಸಿದ್ದೇನೆ. ಚಿತ್ರದ ಆರಂಭದಲ್ಲಿ ಸಿನಿಮಾ ನಿಲ್ಲಿಸೋಣ ಅಂದುಕೊಂಡಿದ್ದೆ. ಆದರೆ ಅಭಿಮಾನಿಗಳಿಗೆ ನಿರಾಸೆ ಆಗುತ್ತೆ ಅಂತಾ ನಿರ್ಧಾರ ಬದಲಿಸಿ ಹೊರಗೆ ಬಂದಿದ್ದೇನೆ ಎಂದು ನರ್ತಕಿ ಚಿತ್ರಮಂದಿರದ ಸೌಂಡ್ ಎಂಜಿನಿಯರ್ ವಿರುದ್ಧ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv