ಪಣಜಿ: ಉತ್ತರ ಗೋವಾದ ಅರ್ಪೋರಾ ನೈಟ್‌ಕ್ಲಬ್ ಅಗ್ನಿ ದುರಂತದಲ್ಲಿ (Goa Nightclub Fire) 25 ಮಂದಿ ಸಜೀವ ದಹನವಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿ ಹೈದರಾಬಾದ್‌ನ ಪ್ರವಾಸಿ ಫಾತಿಮಾ ಶೇಖ್ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ನೈಟ್‌ಕ್ಲಬ್‌ನಲ್ಲಿ ಅಗ್ನಿ ಸಂಭವಿಸುತ್ತಿದ್ದಂತೆ ಹಠಾತ್ ಗದ್ದಲ ಉಂಟಾಯಿತು. ನಾವು ಕ್ಲಬ್‌ನಿಂದ ಹೊರಗೆ ಓಡಿಹೋದಾಗ ಇಡೀ ಕ್ಲಬ್‌ಗೆ ಬೆಂಕಿ ಹೊತ್ತಿಕೊಂಡಿದೆ. ಅವಘಡ ಸಂಭವಿಸಿದಾಗ ಕೆಲವು ಪ್ರವಾಸಿಗರು ಕೆಳಗೆ ಓಡಲು ಪ್ರಾರಂಭಿಸಿದರು. ಕೆಲವರು ಅಲ್ಲೇ ಸಿಲುಕಿಕೊಂಡಿದ್ದರು. ಅನೇಕರು ಕ್ಲಬ್‌ನಿಂದ ಹೊರಗೆ ಓಡಿಹೋಗುವಲ್ಲಿ ಯಶಸ್ವಿಯಾದರು. ಕ್ಲಬ್‌ನಲ್ಲಿ ತಾಳೆ ಎಲೆಗಳಿಂದ ಮಾಡಿದ ಆಕೃತಿಗಳಿಗೆ ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಅವಘಡದ ತೀವ್ರತೆ ಹೆಚ್ಚಿದೆ ಎಂದಿದ್ದಾರೆ. ಇದನ್ನೂ ಓದಿ: ಅಗ್ನಿ ದುರಂತದಲ್ಲಿ 25 ಮಂದಿ ಬಲಿ – ಗೋವಾ ನೈಟ್‌ಕ್ಲಬ್ ಮ್ಯಾನೇಜರ್ ಅರೆಸ್ಟ್, ಮಾಲೀಕನ ವಿರುದ್ಧ ವಾರಂಟ್
ಅವಘಡದಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಗೋವಾ ವೈದ್ಯಕೀಯ ಕಾಲೇಜು (Goa Medical College) ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ, 3-4 ಮಂದಿ ಮಾತ್ರ ಪ್ರವಾಸಿಗರಾಗಿದ್ದು, (Tourists), ಉಳಿದ 19 ಮಂದಿ ಕ್ಲಬ್‌ನ ಸಿಬ್ಬಂದಿಯೇ ಆಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸರು, ತಡರಾತ್ರಿ 1 ಗಂಟೆ ಸುಮಾರಿಗೆ ಕ್ಲಬ್ ಮುಚ್ಚಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಅಷ್ಟರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಡುಗೆ ಮನೆಯ ಬಳಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಅನ್ನೋ ಶಂಕೆಯಿದೆ. ಸ್ಫೋಟದ ತೀವ್ರತೆಗೆ ಕೆಲವೇ ಸೆಕೆಂಡುಗಳಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ಕೆನ್ನಾಲಿಗೆ ಚಾಚಿಕೊಂಡಿದೆ. ಕ್ಲಬ್‌ನ ಒಳಗಿದ್ದವರಿಗೆ ತಪ್ಪಿಸಿಕೊಳ್ಳಲು ಸಮಯಾವಕಾಶವಿತ್ತು. ಆದಾಗ್ಯೂ ದುರಂತ ಸಂಭವಿಸಿದೆ. ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕು ಎಂದು ತಿಳಿಸಿದ್ದಾರೆ. ಸದ್ಯ ಶವಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಗೋವಾ ನೈಟ್ ಕ್ಲಬ್‌ನಲ್ಲಿ ಅಗ್ನಿ ದುರಂತ – 23 ಪ್ರವಾಸಿಗರು ಸಜೀವ ದಹನ; ಸಿಲಿಂಡರ್ ಸ್ಫೋಟ ಶಂಕೆ

