ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎರಡನೇ ಅವಧಿಗೆ ಗೋಧೂಳಿ ಸಮಯದಲ್ಲಿ ಪ್ರಮಾಣ ಸ್ವೀಕರಿಸಿದರು. ಐದು ವರ್ಷ ಪೂರ್ಣಗೊಳಿಸಿ ಮತ್ತೊಮ್ಮೆ ಪಟ್ಟಕ್ಕೇರಿದ ಕಾಂಗ್ರೆಸೇತರ ಪ್ರಧಾನಿ ಎಂಬ ಹೆಗ್ಗಳಿಕೆಯೂ ಮೋದಿ ಅವರ ಪಾಲಾಗಿದೆ.
ಇಂದು ಸಂಜೆ 7 ಗಂಟೆ 5 ನಿಮಿಷಕ್ಕೆ ಪ್ರಮಾಣ ವಚನ ಸ್ವೀಕರಿಸಲು ಮೋದಿ ಅವರು ಆಗಮಿಸುತ್ತಿದಂತೆ ರಾಷ್ಟ್ರಪತಿ ಭವನದ ದಶದಿಕ್ಕುಗಳಲ್ಲೂ ಮೋದಿ.. ಮೋದಿ… ಎಂಬ ಜಯಘೋಷ ಮೊಳಗಿತು. ಈ ವೇಳೆ ಈಶ್ವರನ ಹೆಸರಲ್ಲಿ ಗೌಪ್ಯತಾ ವಿಧಿ ಸ್ವೀಕರಿಸಿದ ಮೋದಿ ಅವರು ಶ್ರದ್ಧಾ ಪೂರ್ವಕವಾಗಿ, ಶುದ್ಧ ಅಂತಃಕರಣದಿಂದ ಕರ್ತವ್ಯವಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
Advertisement
Advertisement
ಕಾರ್ಯಕ್ರಮದಲ್ಲಿ 25 ಸಂಪುಟ ದರ್ಜೆ ಸಚಿವರು, 24 ರಾಜ್ಯ ಖಾತೆ ಸಚಿವರು ಹಾಗೂ 9 ಸಂಸದರು ಸ್ವತಂತ್ರ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Advertisement
ಯಾರೆಲ್ಲ ಮಂತ್ರಿಗಳು?
Advertisement
ಸಂಪುಟ ದರ್ಜೆ ಸಚಿವರು: ಲಕ್ನೋದಿಂದ ರಾಜನಾಥ್ ಸಿಂಗ್, ಗಾಂಧಿ ನಗರದಿಂದ ಅಮಿತ್ ಶಾ, ನಾಗ್ಪುರದಿಂದ ನಿತಿನ್ ಗಡ್ಕರಿ, ಬೆಂಗಳೂರು ಉತ್ತರದಿಂದ ಸದಾನಂದ ಗೌಡ, ರಾಜ್ಯ ಸಭಾ ಸದಸ್ಯೆಯಾಗಿರುವ ನಿರ್ಮಲಾ ಸೀತಾರಾಮನ್, ರಾಮವಿಲಾಸ್ ಪಾಸ್ವಾನ್ (ರಾಜ್ಯಸಭಾ ಸದಸ್ಯರಾಗಬೇಕು. ಈ ಬಾರಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಬಿಜೆಪಿಯೇ ಇವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಿದೆ), ಮಧ್ಯ ಪ್ರದೇಶದ ಮುರೈನಾ ಕ್ಷೇತ್ರದಿಂದ ನರೇಂದ್ರ ಸಿಂಗ್ ತೋಮರ್, ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ರವಿಶಂಕರ್ ಪ್ರಸಾದ್ (ಈ ಬಾರಿ ಬಿಜೆಪಿಯಿಂದ ಶತ್ರುಘ್ನ ಸಿನ್ಹಾರನ್ನು ಸೋಲಿಸಿದ್ದರು), ಬಟಿಂಡಾದಿಂದ ಹರ್ಸಿಮ್ರತ್ ಕೌರ್, ರಾಜ್ಯ ಸಭಾ ಸದಸ್ಯರಾದ ತಾವರ್ ಚಂದ್ ಗೆಹ್ಲೋಟ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಆಗಿರುವ ಎಸ್.ಜೈಶಂಕರ್, ಹರಿದ್ವಾರದಿಂದ ರಮೇಶ್ ಪೋಖ್ರಿಯಾಲ್, ಜಮ್ಷೆಡ್ ಪುರದಿಂದ ಅರ್ಜುನ್ ಮುಂಡಾ, ಅಮೇಠಿಯಿಂದ ಸ್ಮೃತಿ ಇರಾನಿ, ಚಾಂದಿನಿ ಚೌಕ್‍ನಿಂದ ಡಾ.ಹರ್ಷವರ್ಧನ್, ದೆಹಲಿಯ ರಾಜ್ಯಸಭಾ ಸದಸ್ಯರಾಗಿರುವ ಪ್ರಕಾಶ್ ಜಾವ್ಡೇಕರ್, ರಾಜ್ಯಸಭಾ ಸದಸ್ಯರಾದ ಪೀಯುಷ್ ಗೋಯಲ್, ರಾಜ್ಯಸಭಾ ಸಂಸದ ಧರ್ಮೇಂದ್ರ ಪ್ರಧಾನ್, ರಾಜ್ಯಸಭಾ ಸಂಸದರಾದ ಮುಖ್ತಾರ್ ಅಬ್ಬಾಸ್ ನಖ್ವಿ. ಧಾರವಾಡದಿಂದ ಪ್ರಹ್ಲಾದ್ ಜೋಷಿ, ಉತ್ತರಪ್ರದೇಶದ ಚಂದೌಲಿಯಿಂದ ಮಹೇಂದ್ರನಾಥ್ ಪಾಂಡೆ, ಮುಂಬೈ ದಕ್ಷಿಣದಿಂದ ಅರವಿಂದ್ ಸಾವಂತ್, ಗಿರಿರಾಜ್ ಸಿಂಗ್, ಗಜೇಂದ್ರ ಸಿಂಗ್ ಶೇಖವಾತ್.
ರಾಜ್ಯ ಖಾತೆ ಸಚಿವರು: ಮಧ್ಯ ಪ್ರದೇಶದ ಮಾಂಡ್ಲಾ ಕ್ಷೇತ್ರದಿಂದ ಫಗನ್ ಸಿಂಗ್ ಕುಲಸ್ತೆ, ಬಿಹಾರದ ಬಕ್ಸರ್ ಕ್ಷೇತ್ರದಿಂದ ಅಶ್ವಿನಿ ಚೌಬೆ, ಬಿಕನೇರ್ ಅರ್ಜುನ್ ರಾಮ್ ಮೇಘವಾಲ್, ಗಾಜಿಯಾಬಾದ್ ವಿ.ಕೆ.ಸಿಂಗ್, ಫರೀದಾಬಾದ್‍ನಿಂದ ಕೃಷ್ಣಪಾಲ್ ಗುರ್ಜರ್, ಮಹಾರಾಷ್ಟ್ರದ ಜಾಲ್ನಾದಿಂದ ರಾವ್ ಸಾಹೇಬ್ ದಾನವೆ ರಾವ್, ತೆಲಂಗಾಣದ ಸಿಕಂದರಾಬಾದ್ ನಿಂದ ಕಿಶಾನ್ ರೆಡ್ಡಿ, ರಾಜ್ಯ ಸಭಾ ಸದಸ್ಯರಾದ ಪುರುಷೋತ್ತಮ ರುಪಾಲಾ, ರಾಜ್ಯಸಭಾ ಸದಸ್ಯರಾದ ರಾಮದಾಸ್ ಅಠಾವಳೆ, ಫತೇಪುರ್ ಕ್ಷೇತ್ರದಿಂದ ಸಾಧ್ವಿ ನಿರಂಜನ್ ಜ್ಯೋತಿ, ಅಸನ್ ಜೋಲ್ ಕ್ಷೇತ್ರದಿಂದ ಬಾಬುಲ್ ಸುಪ್ರಿಯೋ, ಉತ್ತರ ಪ್ರದೇಶದ ಮುಜಾಫರ್ ನಗರದ ಸಂಜೀವ್ ಬಲಿಯಾನ್, ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಿಂದ ಸಂಜಯ್ ಧೋತ್ರೆ, ಹಿಮಾಚಲ ಪ್ರದೇಶದ ಹಮೀರ್ ಪುರ ಕ್ಷೇತ್ರದಿಂದ ಅನುರಾಗ್ ಠಾಕೂರ್, ಬೆಳಗಾವಿಯಿಂದ ಸುರೇಶ್ ಅಂಗಡಿ, ಬಿಹಾರದ ಉಜಿಯಾರ್ ಪುರ ಕ್ಷೇತ್ರದಿಂದ ನಿತ್ಯಾನಂದ್ ರಾಯ್, ಹರ್ಯಾಣದ ಅಂಬಾಲಾದಿಂದ ರತನ್ ಲಾಲ್ ಕಟಾರಿಯಾ, ರಾಜ್ಯ ಸಭಾ ಸಂಸದರಾದ ವಿ.ಮುರಳೀಧರನ್, ಛತ್ತೀಸ್‍ಗಢದ ಸರ್ಗುವಾ ಕ್ಷೇತ್ರದಿಂದ ರೇಣುಕಾ ಸಿಂಗ್, ಪಂಜಾಬ್‍ನ ಹೋಶಿಯಾರ್ ಪುರ ಕ್ಷೇತ್ರದಿಂದ ಸೋಮ್ ಪ್ರಕಾಶ್, ಅಸ್ಸಾಂನ ದಿಬ್ರುಗಢದಿಂದ ರಾಮೇಶ್ವರ್ ತೇಲಿ, ಒಡಿಶಾದ ಪ್ರತಾಪ್ ಸಾರಂಗಿ, ಬಾಡಮೇರ್ ಕ್ಷೇತ್ರದಿಂದ ಕೈಲಾಶ್ ಚೌಧರಿ, ರಾಯಗಂಜ್‍ನಿಂದ ದೆಬೊಶ್ರೀ ಚೌಧರಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಸ್ವತಂತ್ರ ಖಾತೆ ಸಚಿವರು: ಬರೇಲಿಯಿಂದ ಸಂತೋಷ್ ಕುಮಾರ್ ಗಂಗ್ವಾರ್, ಹರ್ಯಾಣದ ಗುಡಗಾಂವ್‍ನಿಂದ ಇಂದ್ರಜಿತ್ ಸಿಂಗ್, ಉತ್ತರ ಗೋವಾದಿಂದ ಶ್ರೀ ಪಾದ್ ಎಸ್ ನಾಯಕ್, ಉಧಂಪುರದಿಂದ ಜಿತೇಂದ್ರ ಸಿಂಗ್, ಅರುಣಾಚಲ ಪಶ್ಚಿಮದಿಂದ ಕಿರಣ್ ರಿಜಿಜು, ಮಧ್ಯ ಪ್ರದೇಶದ ದಮೋಹ್ ಕ್ಷೇತ್ರದಿಂದ ಪ್ರಹ್ಲಾದ್ ಸಿಂಗ್ ಪಟೇಲ್, ಬಿಹಾರದ ಆರಾ ಕ್ಷೇತ್ರದಿಂದ ರಾಜ್‍ಕುಮಾರ್ ಸಿಂಗ್, ರಾಜ್ಯ ಸಭಾ ಸದಸ್ಯರಾದ ಹರ್ದೀಪ್ ಸಿಂಗ್ ಪುರಿ, ರಾಜ್ಯ ಸಭಾ ಸದಸ್ಯರಾದ ಮನಸುಖ್ ಮಾಂಡವ್ಯ ಪ್ರಮಾಣ ವಚನ ಸ್ವೀಕರಿಸಿದರು.
ಈ ಬಾರಿಯ ಸಂಪುಟದಲ್ಲಿ ಸುಷ್ಮಾ ಸ್ವರಾಜ್ ಇರುತ್ತಾರೋ ಇಲ್ಲವೋ ಎನ್ನುವುದು ಕೊನೆ ಕ್ಷಣದವರೆಗೂ ಯಾರಿಗೂ ತಿಳಿದಿರಲಿಲ್ಲ. ಆದರೆ ಕಾರ್ಯಕ್ರಮಕ್ಕೆ ಬಂದ ಅವರು ಅತಿಥಿಗಳ ಸ್ಥಾನದಲ್ಲಿ ಕುಳಿತಾಗ ಈ ಬಾರಿ ಮೋದಿ ಸಂಪುಟದಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎನ್ನುವುದು ಖಚಿತವಾಯಿತು. ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಸುಷ್ಮ ಸ್ವರಾಜ್ ಚುನಾವಣಾ ಕಣದಿಂದಲೇ ಹಿಂದಕ್ಕೆ ಸರಿದಿದ್ದರು.
ಕಾರ್ಯಕ್ರಮದಲ್ಲಿ ಬಿಮ್‍ಸ್ಟೆಕ್‍ನ 8 ರಾಷ್ಟ್ರದ ಅಧ್ಯಕ್ಷರು, ಪ್ರಧಾನಿಗಳು, ಬಿಜೆಪಿ ಹಿರಿಯರಾದ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್, ಕರ್ನಾಟಕ ಸಿಎಂ ಕುಮಾರಸ್ವಾಮಿ, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸೇರಿದಂತೆ ಪೇಜಾವರ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಗಾಯಕಿ ಆಶಾ ಬೋಂಸ್ಲೆ, ನಟರಾದ ರಜನಿಕಾಂತ್ ದಂಪತಿ ಸೇರಿದಂತೆ 8 ಸಾವಿರ ಜನ ಸಾಕ್ಷಿಯಾದರು.