ನವದೆಹಲಿ: ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಭಾರತದ ಪ್ರಧಾನಿ ಮೋದಿ ಅವರು ತೆಗೆದುಕೊಂಡಿರುವ ನಿರ್ಧಾರ ಕಠಿಣ ಮತ್ತು ಸಮಯೋಚಿತ ಎಂದು ಮೋದಿ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.
ಇಂದು ಬೆಳಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸಿದ್ದರು. ಇದರ ಜೊತೆಗೆ ಏಪ್ರಿಲ್ 20ರವರೆಗೆ ಡಬಲ್ ಲಾಕ್‍ಡೌನ್ ಇರಲಿದ್ದು, ಕಠಿಣ ರೀತಿಯಲ್ಲಿ ಕಾನೂನನ್ನು ಜಾರಿ ಮಡಲಾಗುವುದು ಎಂದು ಹೇಳಿದ್ದರು. ಮೋದಿ ಅವರ ಈ ನಡೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚಿಕೊಂಡಿದೆ.
ಮೋದಿ ಅವರು ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶವನ್ನು ಮೇ 3ರವರೆಗೆ ಲಾಕ್‍ಡೌನ್ ಮಾಡಿರುವುದು ಕಠಿಣ ಮತ್ತು ಸಮಯೋಚಿತ ತೀರ್ಮಾನವಾಗಿದೆ. ಈಗಲೇ ಅಂಕಿ-ಅಂಶಗಳ ಬಗ್ಗೆ ಮಾತನಾಡಬಾರದು. ಆದರೆ 6 ವಾರಗಳು ದೇಶವನ್ನು ಲಾಕ್‍ಡೌನ್ ಮಾಡುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಮಯವಾಗುತ್ತದೆ. ಜೊತೆಗೆ ಹೊಸ ಹೊಸ ಪ್ರಕರಣಗಳನ್ನು ಪತ್ತೆ ಹಚ್ಚಲು, ಅವರನ್ನು ಐಸೊಲೇಷನ್ ಮಾಡಲು ವೈರಸ್ ಅನ್ನು ತಡೆಗಟ್ಟಲು ಬಹಳ ಉಪಯೋಗವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
ದೊಡ್ಡ ದೊಡ್ಡ ಸವಾಲುಗಳ ಹೊರತಾಗಿಯೂ, ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಅಚಲವಾದ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಈ ವೈರಸ್ ಅನ್ನು ಸೋಲಿಸಲು ಪ್ರತಿಯೊಬ್ಬರೂ ಅತ್ಯುತ್ತಮವಾಗಿ ಮತ್ತು ಒಟ್ಟಾಗಿ ಕೆಲಸ ಮಾಡುವ ಸಮಯ ಇದು ಎಂದು ಭಾರತದ ಕಾರ್ಯವನ್ನು ಪೂನಂ ಖೇತ್ರಪಾಲ್ ಸಿಂಗ್ ಮೆಚ್ಚಿಕೊಂಡಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಅನಿವಾರ್ಯವಾಗಿದೆ. ಲಾಕ್‍ಡೌನ್ ಪಾಲನೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮತ್ತಷ್ಟು ನಿಯಂತ್ರಿಸಲು ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸುತ್ತಿದ್ದೇನೆ. ನಾವು ಕೊರೊನಾ ವಿರುದ್ಧ ಹೇಗೆ ಹೋರಾಟ ನಡೆಸಬೇಕು. ಜನರ ಕಷ್ಟಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಬಗ್ಗೆ ಬಗ್ಗೆ ರಾಜ್ಯಗಳ ಜೊತೆ ಚರ್ಚೆ ಮಾಡಿದ್ದೇವೆ. ಎಲ್ಲ ರಾಜ್ಯಗಳು ಲಾಕ್ ಡೌನ್ ವಿಸ್ತರಿಸಲು ಸಲಹೆ ನೀಡಿವೆ. ಕೆಲ ರಾಜ್ಯಗಳು ಈಗಾಗಲೇ ವಿಸ್ತರಣೆ ಮಾಡಿವೆ ಎಂದು ತಿಳಿಸಿದ್ದರು.
ಹಿಂದೆ ಪಾಲಿಸಿದಂತೆ ಮುಂದೆಯೂ ನಿಯಮ ಪಾಲಿಸಬೇಕು. ಹೊಸ ಪ್ರದೇಶದಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳಬೇಕಿದೆ. ಒಂದು ಸಾವು ನಮ್ಮ ಚಿಂತೆಯನ್ನ ಹೆಚ್ಚಿಸುತ್ತದೆ. ಮೊದಲಿಗಿಂತ ಹೆಚ್ಚು ನಿಯಮಗಳು ಹಾಟ್ ಸ್ಪಾಟ್ ಗಳಲ್ಲಿ ಹೆಚ್ಚಲಿದೆ. ಹೊಸ ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗುತ್ತದೆ. ದೇಶಾದ್ಯಂತ ಒಂದು ವಾರ ಡಬ್ಬಲ್ ಲಾಕ್‍ಡೌನ್ ಇರಲಿದೆ ಎಂದು ಹೇಳಿದ್ದರು.