ಕಾಂಗ್ರೆಸ್ ಕಾರ್ಯಕ್ರಮಕ್ಕೆ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದ ಮೋದಿ

Public TV
2 Min Read
MODI CHILD AGE PHOTO

ನವದೆಹಲಿ: ದೇಶದಲ್ಲಿ ಹೆಚ್ಚು ಕಾಲ ಅಧಿಕಾರ ನಡೆಸಿದ ಹೆಗ್ಗಳಿಕೆಯನ್ನು ಕಾಂಗ್ರೆಸ್ ಪಕ್ಷ ಪಡೆದಿದ್ದು, ಆದರೆ ಕಳೆದ 2 ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ ಪಕ್ಷದ ಸೋಲಿಗೆ ಹಲವು ಕಾರಣಗಳಿದ್ದರೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದ್ದ ಬೆಂಬಲ ಇದಕ್ಕೆ ಪ್ರಮುಖ ಕಾರಣ ಎನ್ನಬಹುದು. ಇಂತಹ ನರೇಂದ್ರ ಮೋದಿ ಅವರು ತಮ್ಮ ಬಾಲ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದಕ್ಕೆ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

1956 ರಲ್ಲಿ ಅಂದಿನ ಗುಜರಾತ್ ಕಾಂಗ್ರೆಸ್ ಪಕ್ಷದ ನಾಯಕರಾದ ರಸಿಕ್ ಭಾಯ್ ದವೆ ಅವರ ನೇತೃತ್ವದಲ್ಲಿ ವಡನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೋದಿ ಸ್ವಯಃ ಸೇವಕರಾಗಿ ಕಾರ್ಯ ನಿರ್ವಹಿಸಿದ್ದರು. ಅಂದು 6 ವರ್ಷದ ಬಾಲಕರಾಗಿದ್ದ ಮೋದಿ ಅವರಿಗೆ, ನೀನು ರಾಜಕೀಯ ಕಾರ್ಯಕ್ರಮದಲ್ಲಿ ಏನು ಕೆಲಸ ಮಾಡುತ್ತಿಯಾ ಎಂದು ದವೆ ಅವರು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ್ದ ಮೋದಿ ಅವರು, ಕಾರ್ಯಕ್ರಮಕ್ಕೆ ಬರುವ ಜನರಿಗೆ ಬ್ಯಾಡ್ಜ್ ಹಂಚಿಕೆ ಮಾಡುವುದಾಗಿ ಹೇಳಿದ್ದರು. ಇದಕ್ಕೆ ಸಮ್ಮತಿ ಸೂಚಿಸಿದ್ದ ದವೆ ಅವರು ಸ್ವಯಂ ಸೇವಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು.

‘ದಿ ಮ್ಯಾನ್ ಆಫ್ ಮೂಮೆಂಟ್: ನರೇಂದ್ರ ಮೋದಿ’ ಪುಸ್ತಕವನ್ನು ಬರೆದಿರುವ ಎಂವಿ ಕಾಮತ್ ಹಾಗೂ ಕಾಳಿಂದಿ ರಾಂಡೇರಿ ಅವರು ಈ ವಿಚಾರವನ್ನು ಉಲ್ಲೇಖ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೋದಿ ಬ್ಯಾಡ್ಜ್ ವಿತರಣೆ ಮಾಡಿದ್ದು ನಿಜ ಎಂದು ವಡನಗರ ಕಾಂಗ್ರೆಸ್ ನಾಯಕರಾಗಿದ್ದ ದ್ವಾರಕನಾಥ್ ಅವರು ಸ್ಪಷ್ಟಪಡಿಸಿದ್ದರು. ದವೆ ಅವರ ಬಗ್ಗೆ ಹೆಚ್ಚು ಗೌರವವನ್ನು ಹೊಂದಿರುವ ಮೋದಿ ಅವರು ತಾವು ಓದಿದ್ದ ಶಾಲೆಯ ಗೋಲ್ಡನ್ ಜೂಬ್ಲಿ ಕಾರ್ಯಕ್ರಮದಲ್ಲಿ ದವೆ ಅವರಿಂದ ಆರ್ಶೀವಾದ ಪಡೆದಿದ್ದರು. ಅಲ್ಲದೇ 1999 ರಲ್ಲಿ ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ದವೆರನ್ನು ಆತ್ಮೀಯವಾಗಿ ಮಾತನಾಡಿದ್ದರು. ಇದರಿಂದ ದವೆ ಸಂತೋಷಗೊಂಡಿದ್ದರು. ಈ ವಿಚಾರವನ್ನು ದವೆ ಅವರ ಪತ್ನಿ ಹೇಳಿದ್ದಾಗಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇಂದು ತಮ್ಮ 69ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಿ ಮೋದಿ ಅವರು ಮೊದಲು ತಮ್ಮ ತಾಯಿಯವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *