LatestMain PostNational

ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ – ಕನ್ನಡದಲ್ಲೇ ಟ್ವೀಟ್ ಮಾಡಿದ ಮೋದಿ

ನವದೆಹಲಿ: ನಿನ್ನೆ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾ‌ಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಅವರು ಮಂಗಳೂರಿನ ಜನರ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ. ಪ್ರಮುಖ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದುದು ಸಂತಸ ತಂದಿದೆ ಎಂದು ತಿಳಿಸಿರುವ ಅವರು, ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶುಕ್ರವಾರ ಗೋಲ್ಡ್ ಫಿಂಚ್ ಹೋಟೆಲ್ ಮೈದಾನದಲ್ಲಿ 3 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸ ನಡೆಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಕರಾವಳಿಯ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸುಲಭವಾಗಿ ತಲುಪಬೇಕು. ಡಬಲ್ ಎಂಜಿನ್ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಮಿಷನ್ ಎಲೆಕ್ಷನ್ – ಮಂಗಳೂರಿನಲ್ಲಿ ನಾಯಕರಿಗೆ ಮೋದಿಯಿಂದ ಸ್ಪೆಷಲ್ ಕ್ಲಾಸ್

ಕರ್ನಾಟಕದ ಪಶ್ಚಿಮ ಘಟ್ಟ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಮಂಗಳೂರು ಬಂದರುಗಳಿಗೆ ಕ್ರೂಸ್ ಶಿಪ್ ಬರಬೇಕು. ವಿದೇಶಿ ಪ್ರವಾಸಿಗರು ಆಗಮಿಸಿದರೆ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಪ್ರವಾಸೋದ್ಯಮ ಹೆಚ್ಚಾದರೆ ಗ್ರಾಮದ್ಯೋಗ, ಆಟೋರಿಕ್ಷಾ ಚಾಲಕರಿಗೆ ಎಲ್ಲರಿಗೂ ಲಾಭ ಸಿಗಲಿದೆ ಎಂದು ಭರವಸೆ ನೀಡಿದ್ದರು. ಇದನ್ನೂ ಓದಿ: ಕರಾವಳಿಯ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸುಲಭವಾಗಿ ತಲುಪಬೇಕು: ಮೋದಿ

Live Tv

Leave a Reply

Your email address will not be published.

Back to top button