ಬೆಂಗಳೂರು: 2014 ರ ಲೋಕಸಭಾ ಚುನಾವಣೆ ವೇಳೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸ್ಥಳದಲ್ಲೇ ನಾಳೆಯ ಸಮಾವೇಶದಲ್ಲೂ ಭಾಷಣ ಮಾಡಲಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಸಿದ್ಧತೆ ನಡೆಸುವ ವಿಚಾರವಾಗಿ ಆಡಳಿತ ಪಕ್ಷದ ವೈಫಲ್ಯಗಳನ್ನು ತಿಳಿಸುವ ಸಲುವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಂದಾಳತ್ವದಲ್ಲಿ ಕೈಗೊಂಡಿದ್ದ ಪರಿವರ್ತನಾ ಯಾತ್ರೆ ನಾಳೆ ಮುಕ್ತಾಯವಾಗಲಿದೆ. ಯಾತ್ರೆ ಮುಕ್ತಾಯದ ಭಾಗವಾಗಿ ಅರಮನೆ ಮೈದಾನದಲ್ಲಿ ಸಮಾವೇಶ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಮೋದಿ ಅವರ ಆಗಮಿಸುತ್ತಿರುವುದರಿಂದ ಸಮಾವೇಶದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆಗಳಿವೆ.
Advertisement
Advertisement
2014ರಲ್ಲಿ ಭಾಷಣ ಮಾಡಿದ ಸ್ಥಳ: ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಬೃಹತ್ ಸಮಾವೇಶಕ್ಕೆ ಈಗಾಗಲೇ ವೇದಿಕೆ ಸಿದ್ಧವಾಗಿದ್ದು, ಮೈದಾನ ಪಶ್ಚಿಮ ದಿಕ್ಕಿನಲ್ಲಿ ಪೂರ್ವಕ್ಕೆ ಅಭಿಮುಖವಾಗಿ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರಧಾನಿ ಮೋದಿ ಅವರಿಗೆ ಇದು ಅದೃಷ್ಟದ ಸ್ಥಳ ಎನ್ನಲಾಗಿದ್ದು, 2014 ರ ಚುನಾವಣೆ ವೇಳೆಯೂ ಪ್ರಧಾನಿಗಳು ಇಲ್ಲೇ ಭಾಷಣ ಮಾಡಿದ್ದರು.
Advertisement
ವೇದಿಕೆ ನಿರ್ಮಾಣ ಮಾಡುವ ಜಾಗದಲ್ಲಿ ಭೂಮಿ ಪೂಜೆ ಮಾಡುವಾಗಲೂ ಸುದರ್ಶನ ಹೋಮ, ವಾಸ್ತು ಹೋಮ, ನವಗ್ರಹ ಹೋಮ ಹವನ ಮೊರೆ ಹೋಗಲಾಗಿತ್ತು. ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಆಗಬಾರದೆಂದು ಹೋಮ ನಡೆಸಲಾಗಿದೆ. ನಾಳಿನ ಕಾರ್ಯಕ್ರಮದ ಬೃಹತ್ ವೇದಿಕೆಯಲ್ಲಿ ಮೋದಿ ಜೊತೆ ಹಿರಿಯರಿಗಷ್ಟೇ ಸ್ಥಾನ ಕಲ್ಪಿಸಲಾಗಿದೆ. ಇದರಲ್ಲಿ ಎಸ್.ಎಂ.ಕೃಷ್ಣ, ಶ್ರೀನಿವಾಸ್ ಪ್ರಸಾದ್ ಸೇರಿದಂತೆ 27 ಪ್ರಮುಖ ನಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
Advertisement
3,500 ಬಸ್: ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರಿಗೆ ವೇದಿಕೆಯ ಮುಂಭಾಗದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ 60 ಸಾವಿರ ಜನರನ್ನು ಸೇರಿಸಲು ರಾಜ್ಯ ಬಿಜೆಪಿ ಯೋಜನೆ ನಡೆಸಿದೆ. ರಾಜ್ಯದ ಸಾರಿಗೆ ಇಲಾಖೆಯಿಂದ ರಾಜ್ಯದ ವಿವಿಧಡೆಯಿಂದ ಆಗಮಿಸುವ ಕಾರ್ಯಕರ್ತರಿಗಾಗಿ ಸುಮಾರು 3,500 ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಬೃಹತ್ ಪ್ರಮಾಣದಲ್ಲಿ ಜನರು ಅರಮನೆ ಮೈದಾನಕ್ಕೆ ಆಗಮಿಸುತ್ತಿರುವುದರಿಂದ ನಾಳೆ ಸಮಾವೇಶದ ಸ್ಥಳದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಟ್ರಾಫಿಕ್ ನಿಯಂತ್ರಣಕ್ಕೆ 250 ಮಂದಿ ಬಿಜೆಪಿ ಪ್ರಬಂಧಕರ ನೇಮಕ ಮಾಡಲಾಗಿದೆ. ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಪ್ರಸಾರ ಮಾಡಲು 20 ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿದೆ.
ಸಮಾವೇಶದಲ್ಲಿ ಮಾತನಾಡುವ ಪ್ರಧಾನಿ ಅವರು ಮಹದಾಯಿ ವಿಚಾರವನನ್ನು ಪ್ರಸ್ತಾಪ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯ ಮಾಡಿದ್ದವು. ಆದರೆ ಸಮಾವೇಶದಲ್ಲಿ ಚುನಾವಣಾ ಭಾಷಣ ಮಾತ್ರ ಮೋದಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಭಾಷಣದ ವೇಳೆ ಕೇಂದ್ರದಿಂದ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಪರಿವರ್ತನಾ ಯಾತ್ರೆ ಮುಕ್ತಾಯದ ನಂತರ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಈ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಗುತ್ತದೆ.
ಸಮಾವೇಶದಲ್ಲಿ ಭಾಗವಹಿಸುವ ಕಾರ್ಯಕರ್ತರಿಗಾಗಿ ಟೋಪಿ ಹಾಗೂ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಧ್ಯಾಹ್ನ ಬಾದುಶಾ, ಪಕೋಡಾ, ರೈಸ್ ಬಾತ್, ಮೊಸರನ್ನ 250 ಫುಡ್ ಕೌಂಟರ್ ಗಳಿಂದ ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಸಮಾವೇಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ರಾಜ್ಯ ಬಿಜೆಪಿ ನಾಯಕರಾದ ಸಂಸದ ಅನಂತಕುಮಾರ್, ಮಾಜಿ ಡಿಸಿಎಂ ಆರ್ ಅಶೋಕ್, ಅರವಿಂದ ಲಿಂಬಾವಳಿ ಸೇರಿದಂತೆ 5 ತಂಡಗಳು ಕಾರ್ಯನಿರ್ವಹಿಸುತ್ತಿದೆ.