ಭಾರತದ ಲಸಿಕಾಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್

Public TV
3 Min Read
MODI AND KAMALA HARIS

ವಾಷಿಂಗ್ಟನ್: 4 ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿಯಾಗಿದ್ದರು. ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ, ಭಾರತ-ಅಮೆರಿಕದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದ್ದು, ಭಾರತದ ಲಸಿಕಾಕರಣ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕಮಲಾ ಹ್ಯಾರಿಸ್ ಮೆಚ್ಚುಗೆ ವ್ಯಕ್ತಪಡಿಸಿದರು.

MODI AND KAMALA HARIS 1

ಮೊದಲ ಮುಖಾಮುಖಿ ಭೇಟಿಗಾಗಿ ಉಭಯ ನಾಯಕರು ಸಂತಸ ವ್ಯಕ್ತಪಡಿಸಿದರು. ಅವರು 2021ರ ಜೂನ್ ತಿಂಗಳಲ್ಲಿ ನಡೆಸಿದ ದೂರವಾಣಿ ಸಮಾಲೋಚನೆಯನ್ನು ನೆನೆಪಿಸಿಕೊಂಡರು. ಆಫ್ಘಾನಿಸ್ತಾನ ಸೇರಿದಂತೆ ಇತ್ತೀಚಿನ ಜಾಗತಿಕ ಬೆಳವಣಿಗೆಗಳ ಕುರಿತು ಉಭಯ ನಾಯಕರು ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಮುಕ್ತ, ಸಮಗ್ರ ಮತ್ತು ಎಲ್ಲವನ್ನೂ ಒಳಗೊಂಡ ಇಂಡೋ-ಪೆಸಿಫಿಕ್ ಪ್ರದೇಶ ಸ್ಥಾಪನೆಯತ್ತ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅಲ್ಲದೆ, ಇಬ್ಬರೂ ನಾಯಕರು ತಮ್ಮ ತಮ್ಮ ರಾಷ್ಟ್ರಗಳಲ್ಲಿನ ಕೋವಿಡ್-19 ಸ್ಥಿತಿಗತಿ, ಲಸಿಕೆ ನೀಡಿಕೆಯನ್ನು ತೀವ್ರಗೊಳಿಸುವ ಮೂಲಕ ಸಾಂಕ್ರಾಮಿಕವನ್ನು ನಿಯಂತ್ರಿಸಲು ಕೈಗೊಂಡಿರುವ ಪ್ರಯತ್ನಗಳು ಮತ್ತು ಗಂಭೀರ ವೈದ್ಯಕೀಯ ಸಾಧನಗಳು, ಚಿಕಿತ್ಸೆ ಮತ್ತು ಆರೋಗ್ಯ ರಕ್ಷಣಾ ಸಾಧನಗಳ ಪೂರೈಕೆ ಖಾತ್ರಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

modi and kamala harris

ಭಾರತದ ಲಸಿಕಾಕರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್, ನಿತ್ಯ 1 ಕೋಟಿ ಲಸಿಕೆ ನೀಡೋದು ದೊಡ್ಡ ಸಾಧನೆ. ಕೊರೊನಾ ವಿರುದ್ಧ ನಾವು ಒಟ್ಟಾಗಿ ಹೋರಾಡುತ್ತೇವೆ. ಭಾರತದೊಂದಿಗಿನ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಲು ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿದರು. ಹವಾಮಾನ ವೈಪರೀತ್ಯ ತಡೆಗೆ ಸಹಭಾಗಿತ್ವದ ಕ್ರಮದ ಪ್ರಾಮುಖ್ಯವನ್ನು ಉಭಯ ದೇಶಗಳು ಒಪ್ಪಿಕೊಂಡವು. ಪ್ರಧಾನಮಂತ್ರಿ ಅವರು ಭಾರತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಮತ್ತು ಇತ್ತೀಚೆಗೆ ಆರಂಭಿಸಿರುವ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಕುರಿತು ಮಾತನಾಡಿದರು. ಅಲ್ಲದೆ, ಅವರು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸಲು ಜೀವನಶೈಲಿ ಬದಲಾವಣೆಗೆ ಒತ್ತು ನೀಡುವ ಅಗತ್ಯತೆಯನ್ನು ಪ್ರತಿಪಾದಿಸಿದರು. ಇದನ್ನೂ ಓದಿ: ಭಾರತ ಕೋವಿಡ್ 19 ನಿರ್ವಹಣೆ ಮಾಡಿದಂತೆ ಬೇರೆ ಯಾವ ದೇಶ ಮಾಡಿಲ್ಲ – ಸುಪ್ರೀಂ ಮೆಚ್ಚುಗೆ

ಬಾಹ್ಯಾಕಾಶ ಸಹಕಾರ, ಮಾಹಿತಿ ತಂತ್ರಜ್ಞಾನ ವಿಶೇಷವಾಗಿ ಉದಯೋನ್ಮುಖ ಮತ್ತು ನಿರ್ಣಾಯಕ ತಂತ್ರಜ್ಞಾನಗಳು, ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಭವಿಷ್ಯದ ಸಹಭಾಗಿತ್ವದ ಕ್ಷೇತ್ರಗಳ ಕುರಿತು ಅವರು ಚರ್ಚೆ ನಡೆಸಿದರು. ಉತ್ಸಾಹ ಭರಿತ ಜನರಿಂದ ಜನರು ನಡುವಿನ ಸಂಪರ್ಕ ಪರಸ್ಪರ ಶಿಕ್ಷಣ ಸಂಬಂಧಗಳಿಗೆ ಪ್ರಯೋಜನಕಾರಿ ಮತ್ತು ಎರಡೂ ದೇಶಗಳ ನಡುವೆ ಜ್ಞಾನ, ಹೊಸತನದ ಶೋಧ ಮತ್ತು ಪ್ರತಿಭೆಯ ಹರಿವಿಗೆ ಸಹಕಾರಿ ಎಂಬುದನ್ನು ಉಭಯ ನಾಯಕರು ಒಪ್ಪಿಕೊಂಡರು. ಕೊರೊನಾ 2ನೇ ಅಲೆ ಸಂಕಷ್ಟದಲ್ಲಿ ಸಹಾಯ ನೀಡಿದ ಅಮೆರಿಕಕ್ಕೆ ಮೋದಿ ಧನ್ಯವಾದ ಅರ್ಪಿಸಿದರು. ಇದೇ ವೇಳೆ ಭಾರತಕ್ಕೆ ಆಗಮಿಸುವಂತೆ ಕಮಲಾ ಹ್ಯಾರಿಸ್‍ಗೆ, ಮೋದಿ ಆಮಂತ್ರಣ ನೀಡಿದರು.

MODI MEETING

ಈ ಮೊದಲು ಮೋದಿ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕದ ಉನ್ನತ ತಂತ್ರಜ್ಞಾನ ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಭಾರತವನ್ನು ಜಾಗತಿಕ ಇನ್ನೋವೇಷನ್ ಹಬ್ ಮಾಡುವ ಗುರಿ ಇದೆ ಎಂದು ಅಭಿಪ್ರಾಯವ್ಯಕ್ತಪಡಿಸದರು. ಸೆಮಿಕಂಡಕ್ಟರ್ ಮತ್ತು ವೈರ್‍ಲೆಸ್ ಟೆಕ್ನಾಲಜಿ ತಯಾರಕ ಕ್ವಾಲ್‍ಕಾಮ್ ಸಂಸ್ಥೆ ಭಾರತದಲ್ಲಿ 5ಜಿ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಆಸಕ್ತಿ ತೋರಿದ್ದು, ಸಾಫ್ಟ್ ವೇರ್ ಕಂಪನಿ ಅಡೋಬ್, ಇಂಧನ ಕಂಪನಿ ಫಸ್ಟ್ ಸೋಲಾರ್, ಶಸ್ತ್ರಾಸ್ತ್ರ ತಯಾರಕ ಜನರಲ್ ಅಟೊಮಿಕ್ಸ್ ಮತ್ತು ಹೂಡಿಕೆ ನಿರ್ವಹಣಾ ಕಂಪನಿ ಬ್ಲ್ಯಾಕ್‍ಸ್ಟೋನ್ ಸಿಇಒಗಳೊಂದಿಗೆ ಮೋದಿ ಪರಸ್ಪರ ಮಾತುಕತೆ ನಡೆಸಿದರು.

ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಬಳಿಕ ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಜೊತೆಗಿನ ಮಹತ್ವದ ಕ್ವಾಡ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಇಂದಿನಿಂದ ಪ್ರಧಾನಿ ಮೋದಿ ನಾಲ್ಕು ದಿನ ಅಮೆರಿಕ ಪ್ರವಾಸ

Share This Article
Leave a Comment

Leave a Reply

Your email address will not be published. Required fields are marked *