– ಪ್ರಧಾನಿ ಮೋದಿ ದೇಶ ಕಂಡ ಮಹಾನ್ ಸುಳ್ಳುಗಾರ
ಕೋಲಾರ: ಪ್ರಧಾನಿ ನರೇಂದ್ರ ಮೋದಿ ಕಮ್ಯುನಲ್ ಪಾಲಿಟಿಕ್ಸ್ ಮಾಡುತ್ತಿದ್ದು, ಹಿಂದುತ್ವದ ಡ್ರಗ್ಸ್ ಅನ್ನು ಜನರಲ್ಲಿ ಬಿತ್ತನೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಂಗಳೂರಿನಲ್ಲಿ ನಿನ್ನೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಕೋಲಾರದಲ್ಲಿ ಇಂದು ಕೂಡ ಬಿಜೆಪಿ ಹಾಗೂ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದ ಮಾಲೂರಿನಲ್ಲಿ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಮತಯಾಚನೆ ಮಾಡಿ, ಪ್ರಚಾರ ಸಭೆಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ದೇಶ ಕಂಡ ಮಹಾನ್ ಸುಳ್ಳುಗಾರನನ್ನು ನಾವು ಮನೆಗೆ ಕಳುಹಿಸಬೇಕು. ಭಾಷಣ ಹಾಗೂ ಮಾರ್ಕೆಟಿಂಗ್ ಮಾಡುವುದರಲ್ಲಿ ಪ್ರಧಾನಿ ಮೋದಿ ಪ್ರಭಾವಿಯಾಗಿದ್ದಾರೆ. ಅವರು ಪ್ರಭಾವಿ ಮಂತ್ರಿಯಲ್ಲ, ಪ್ರಚಾರದ ಮಂತ್ರಿ ಎಂದು ವ್ಯಂಗ್ಯವಾಡಿದರು.
Advertisement
Advertisement
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು ಐದು ವರ್ಷ ಕಳೆದರೂ ವಿದೇಶದಲ್ಲಿರುವ ಕಪ್ಪು ಹಣ ತೆಗೆದುಕೊಂಡು ಬರಲಿಲ್ಲ. ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಗ್ಯಾಸ್ ಬೆಲೆ ಹೆಚ್ಚಳವಾಗಿದೆ. ಜನ್ ಧನ್ ಖಾತೆಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಸಂವಿಧಾನವನ್ನೇ ಬದಲಾಯಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೂರಿದರು.
Advertisement
ಅಧಿಕಾರ ಹಾಗೂ ಮತಕ್ಕಾಗಿ ಹಿಂದೂ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರಾಮಮಂದಿರ ಕಟ್ಟಲು ಮುಂದಾಗಿದ್ದ ಬಿಜೆಪಿ ಹಿರಿಯ ಮುಖಂಡ ಎಚ್.ಕೆ.ಅಡ್ವಾಣಿ ಸೇರಿದಂತೆ ಪಕ್ಷದ ಅನೇಕ ನಾಯಕರಿಗೆ ಟಿಕೆಟ್ ನೀಡದೇ ಪ್ರಧಾನಿ ಮೋದಿ ಮೋಸ ಮಾಡಿದ್ದಾರೆ. ದೇಶವನ್ನು ಒಡೆಯುವ ಕೆಲಸವನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ದೇಶದ ರಕ್ಷಣೆಗಾಗಿ ನಾವೆಲ್ಲರೂ ಒಂದಾಗಬೇಕು. ಸ್ವಾರ್ಥಕ್ಕಾಗಿ ಪಕ್ಷಕ್ಕೆ ದ್ರೋಹ ಬಗೆಯಬೇಡಿ. ಪಕ್ಷಕ್ಕೆ ಮೋಸ ಮಾಡಿದರೆ ಹೆತ್ತ ತಾಯಿಗೆ ಮೋಸ ಮಾಡಿದಂತೆ. ದೇಶದ ಹಿತಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದೆ. ಪಕ್ಷದ ವಿರುದ್ಧ ಕೆಲಸ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.