– ಒಗ್ಗಟ್ಟಿನಿಂದ ಹೋರಾಡಿದ್ರೆ ಮಾತ್ರ ಯಶಸ್ಸು
– ಸಿಎಂಗಳ ಜೊತೆ 4 ಗಂಟೆ ಚರ್ಚೆ
– ಪ್ರತಿಯೊಬ್ಬರ ಜೀವವೂ ಮುಖ್ಯ
ನವದೆಹಲಿ: ನಾವು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರವೇ ಯಶಸ್ವಿಯಾಗಲು ಸಾಧ್ಯ. ದೇಶದಲ್ಲಿ ಕೋವಿಡ್ ಪ್ರಕರಣಗಳ ಬೆಳವಣಿಗೆಯ ದರ ಲಾಕ್ ಡೌನ್ ನಂತರ ಶೇ.28 ರಿಂದ ಶೇ.14 ಕ್ಕೆ ಇಳಿದಿರುವುದು ಸಮಾಧಾನದ ಸಂಗತಿ. ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಕುರಿತು ಹೆಚ್ಚು ಗಮನ ಹರಿಸಬೇಕಾಗಿದೆ. ಭಾರತ ಸರ್ಕಾರವು 142 ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಈ ಹಾಟ್ ಸ್ಪಾಟ್ ಗಳಲ್ಲಿ ತೀವ್ರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.
ಇಂದು ಲಾಕ್ ಡೌನ್ ವಿಸ್ತರಣೆ ಸಂಬಂಧ ಎಲ್ಲ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸುಮಾರು ನಾಲ್ಕು ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆಸಿದರು. ಸಭೆ ಬಳಿಕ ಏ.30ರವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡುವುದಾಗಿ ಅವರು ಸಿಎಂಗಳಿಗೆ ತಿಳಿಸಿದರು.
Advertisement
Advertisement
ಸಭೆಯಲ್ಲಿ ಭಾಗಿಯಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ತೆಲಂಗಾಣ ಸಿಎಂ ಕೆಸಿಆರ್, ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ 15ಕ್ಕೂ ಹೆಚ್ಚು ರಾಜ್ಯಗಳ ಸಿಎಂ ಲಾಕ್ ಡೌನ್ ವಿಸ್ತರಿಸುವಂತೆ ಮನವಿ ಮಾಡಿದರು.
Advertisement
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಮತ್ತು ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಎಲ್ಲ ನಗರಗಳಿಗೂ ಲಾಕ್ ಡೌನ್ ಮುಂದುವರಿಕೆ ಬೇಡ ಹಾಟ್ ಸ್ಪಾಟ್ ಪ್ರದೇಶದಲ್ಲಿ ಮಾತ್ರ ಮುಂದುವರಿಸಿ ಎಂದು ಸಲಹೆ ನೀಡಿದರು. ಈ ಮಧ್ಯೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಲಾಕ್ ಡೌನ್ ವಿಸ್ತರಿಸಿ ಆದರೆ ಕೆಲವು ಪ್ರಮುಖ ಉತ್ಪಾದನಾ ವರ್ಗಗಳಿಗೆ ಅವಕಾಶ ನೀಡಬೇಕು ಮತ್ತು ಸಣ್ಣಪುಟ್ಟ ಉದ್ಯಮಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.
Advertisement
ಮುಖ್ಯಮಂತ್ರಿ ಶ್ರೀ @BSYBJP ಅವರು, ಪ್ರಧಾನ ಮಂತ್ರಿ ಶ್ರೀ @narendramodi ಅವರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದರು. #ಮನೆಯಲ್ಲೇಇರಿ #KarnatakaFightsCorona#IndiaFightsCorona#SaluteCOVIDFighters pic.twitter.com/eqMHkQlKQP
— CM of Karnataka (@CMofKarnataka) April 11, 2020
ಎಲ್ಲ ಅಭಿಪ್ರಾಯ ಸಂಗ್ರಹಿಸಿದ ಮೋದಿ ಸಭೆ ಕೊನೆಯಲ್ಲಿ ಮಾತನಾಡಿ, ನಾನು ರಾಷ್ಟ್ರಕ್ಕೆ ಹಿಂದೆ ಸಂದೇಶ ಕಳುಹಿಸಿದಾಗ ಪ್ರತಿಯೊಬ್ಬರ ಜೀವವೂ ಮುಖ್ಯ ಎಂದಿದೆ. ಪ್ರತಿಯೊಬ್ಬ ನಾಗರಿಕನ ಜೀವವನ್ನು ಉಳಿಸಲು, ಲಾಕ್‍ಡೌನ್ ಮತ್ತು ಸಾಮಾಜಿಕ ದೂರವನ್ನು ಅನುಸರಿಸುವುದು ಬಹಳ ಅಗತ್ಯ. ನಾವೆಲ್ಲರೂ ನಮ್ಮ ದೇಶವಾಸಿಗಳ ಪ್ರಾಣ ಉಳಿಸಲು ಪ್ರಯತ್ನಿಸುತ್ತಿದ್ದೇವೆ. ದೇಶದ ಹೆಚ್ಚಿನ ಜನರು ಇದನ್ನು ಅರ್ಥಮಾಡಿಕೊಂಡು ಮನೆಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ತಮ್ಮ ಕರ್ತವ್ಯಗಳನ್ನು ಮನೆಯಲ್ಲೇ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಹಾಗೂ ಸಮುದಾಯದಲ್ಲಿ ಹರಡುವ ಸಾಧ್ಯತೆಗಳ ಕುರಿತು ಕಳವಳ ವ್ಯಕ್ತಪಡಿಸಿದರು. ಹಾಟ್ ಸ್ಪಾಟ್ ಗಳನ್ನು ಗುರುತಿಸಿ, ಸೀಲ್ ಡೌನ್ ಮಾಡುವ ಮೂಲಕ ಹಾಗೂ ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯಗಳು ಮಾಡುತ್ತಿರುವ ನಿಯಂತ್ರಣದ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು.
PM has taken correct decision to extend lockdown. Today, India’s position is better than many developed countries because we started lockdown early. If it is stopped now, all gains would be lost. To consolidate, it is imp to extend it
— Arvind Kejriwal (@ArvindKejriwal) April 11, 2020
ಈ ವರೆಗೆ 2.84 ಲಕ್ಷ ಪಿಪಿಇ ಕಿಟ್ ಗಳನ್ನು ಪೂರೈಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲಾಗುವುದು. ಪ್ರತಿ ಎರಡು ದಿನಗಳಿಗೊಮ್ಮೆ 2 ಲಕ್ಷ ಮಾಸ್ಕ್ ಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ 220 ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ದಿನಕ್ಕೆ 15,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಏಪ್ರಿಲ್ 30ರ ವೇಳೆಗೆ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯನ್ನು 300 ಕ್ಕೆ ಹೆಚ್ಚಿಸಲಾಗುವುದು. ಮೇ31ರ ವೇಳೆಗೆ ಪ್ರತಿ ದಿನ 1 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಪರೀಕ್ಷಾ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಐಸಿಎಂಆರ್ ಗೆ ಅರ್ಜಿ ಸಲ್ಲಿಸುವಂತೆ ಖಾಸಗಿ ಪ್ರಯೋಗಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸಲಹೆ ನೀಡುವಂತೆ ಮೋದಿ ಸೂಚಿಸಿದರು.
ನಗರಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಹಳ್ಳಿಯ ಜನರು ಸ್ವೀಕರಿಸದ ಕಾರಣ ಹಳ್ಳಿಗಳಿಗೆ ಕಳುಹಿಸದಂತೆ ಸಲಹೆ ನೀಡಿದರು. ಮೀನುಗಾರಿಕೆ ಮತ್ತು ಮೀನು ಸಂಸ್ಕರಣಾ ಚಟುವಟಿಕೆಗಳಿಗೆ ಏಪ್ರಿಲ್ 10ರಂದು ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಅಗತ್ಯ ವಸ್ತುಗಳ ಮಾರಾಟವಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳಿದ್ದು, ರಾಜ್ಯ ಸರ್ಕಾರಗಳು ಈ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಭಾರತ ಸರ್ಕಾರ ಅಭಿವೃದ್ಧಿ ಪಡಿಸಿರುವ ‘ಆರೋಗ್ಯ ಸೇತು’ ಮೊಬೈಲ್ ಆ್ಯಪ್ ಅನ್ನು ಜನಪ್ರಿಯಗೊಳಿಸಲು ಸಲಹೆ ನೀಡಿದರು. ಈ ಆಪ್ ನ ಸಹಾಯದಿಂದ ವ್ಯಕ್ತಿಯು ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮೋದಿ ನೇತೃತ್ವದಲ್ಲಿ ಕೋವಿಡ್ 19ರ ವಿರುದ್ಧದ ಸಮರದಲ್ಲಿ ಗೆಲುವು ನಿಶ್ಚಿತ ಎಂಬ ವಿಶ್ವಾಸವನ್ನು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜನ ಸಂದಣಿ ಸೇರದಂತೆ ಎಚ್ಚರಿಕೆ ವಹಿಸಬೇಕು. ಲಾಕ್ ಡೌನ್ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಹಾಗೂ ಗಂಭೀರವಾಗಿ ಕೈಗೊಳ್ಳುವಂತೆಯೂ ಸೂಚಿಸಿದರು.
ಮೋದಿ ಸಲಹೆ ಏನು?
ಮುಂದಿನ 15 ದಿನಗಳಲ್ಲಿ ಲಾಕ್ ಡೌನ್ ಅನುಷ್ಠಾನದ ಕುರಿತು ಇನ್ನು ಒಂದೆರಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಮುಂದಿನ ಎರಡು ವಾರಗಳ ಕಾಲ ಲಾಕ್ ಡೌನ್ ಹಿಂದಿನ 3 ವಾರಗಳಿಗಿಂತ ವಿಭಿನ್ನವಾಗಿರುತ್ತದೆ. ವಿಶೇಷವಾಗಿ ಆರ್ಥಿಕ ಚಟುವಟಿಕೆಗಳಿಗೆ ಸಹಾಯವಾಗುವಂತೆ, ಕೃಷಿ ಮತ್ತು ಕೈಗಾರಿಕೆ ಹಾಗೂ ಕಾರ್ಮಿಕರಿಗೆ ಉದ್ಯೋಗದ ದೃಷ್ಟಿಯಿಂದ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ರೂಪಿಸಲಿದೆ.
ಸರ್ಕಾರಿ ಕಚೇರಿಗಳು ಭಾಗಶಃ ನೌಕರರೊಂದಿಗೆ ಕಾರ್ಯ ನಿರ್ವಹಿಸಲಿದೆ. ಮುಂದಿನ ಮೂರು, ನಾಲ್ಕು ವಾರ 130 ಕೋಟಿ ಜನರಿಗೆ ಬಹಳ ಪ್ರಮುಖ ಅವಧಿ. ಈ ಅವಧಿಯಲ್ಲಿ ನಾವು ಮಾಡಿರುವ ಪ್ರಯತ್ನದ ಪರಿಣಾಮ ಏನಾಗುವುದು ಎಂಬುದರ ಕುರಿತು ಸಿದ್ಧರಾಗಿರಬೇಕು. ಪರಿಸ್ಥಿತಿ ಬಿಗಡಾಯಿಸಿದರೆ ಎದುರಿಸಲು ಸನ್ನದ್ಧರಾಗಿರಬೇಕು.
ಕೇಂದ್ರ ಸರ್ಕಾರ ಸಂಪೂರ್ಣವಾಗಿ ರಾಜ್ಯಗಳ ಜೊತೆ ಕೆಲಸ ಮಾಡುತ್ತಿದೆ. ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳ ದೃಷ್ಟಿಯಿಂದ ಸುಧಾರಣೆ ಆಗಿದೆ. ವೈದ್ಯಕೀಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ಸಹಿಸಲಾಗದು ಎಂದು ಪ್ರಧಾನಿಯವರು ಸೂಚಿಸಿದರು.