– ಮೂರು ಪಕ್ಷಗಳು ಕಾಶ್ಮೀರದ ಯುವಕರ ಕೈಗೆ ಕಲ್ಲು ಕೊಟ್ಟು ಭವಿಷ್ಯಕ್ಕೆ ಕಲ್ಲು ಹಾಕುತ್ತಿವೆ
ಶ್ರೀನಗರ: ಕಾಂಗ್ರೆಸ್ (Congress), ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ತಮ್ಮ ರಾಜಕೀಯ ಲಾಭಕ್ಕಾಗಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಯುವಕರ ಕೈಗೆ ಕಲ್ಲುಗಳನ್ನು ಕೊಟ್ಟು ಅವರ ಭವಿಷ್ಯಕ್ಕೆ ಕಲ್ಲು ಹಾಕುತ್ತಿವೆ ಎಂದು ಮೂರು ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ.
ಶ್ರೀನಗರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ `ಮೂರು ಕುಟುಂಬಗಳಿಂದ’ ಮತ್ತೊಂದು ಪೀಳಿಗೆಯನ್ನು ನಾಶಮಾಡಲು ಬಿಡುವುದಿಲ್ಲ ಎಂದು ಇದೇ ವೇಳೆ ಮೋದಿ ಪ್ರತಿಜ್ಞೆ ಮಾಡಿದರು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ – ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅರೆಸ್ಟ್
ಕಾಶ್ಮೀರದಲ್ಲಿ ನಮ್ಮ ಯುವಕರು ಶಾಲಾ-ಕಾಲೇಜುಗಳ ವ್ಯಾಸಂಗದಿಂದ ದೂರವಿದ್ದರು. ಈ ಮೂರು ಕುಟುಂಬಗಳು (ಕಾಂಗ್ರೆಸ್, ಎನ್‍ಸಿ ಮತ್ತು ಪಿಡಿಪಿ) ಅವರ ಕೈಗೆ ಕಲ್ಲು ಕೊಟ್ಟು ಸಂತೋಷಪಟ್ಟವು. ತಮ್ಮ ಲಾಭಕ್ಕಾಗಿ ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಪಿತೂರಿ ನಡೆಸುತ್ತಿರುವ ಪ್ರತಿಯೊಂದು ಶಕ್ತಿಯನ್ನೂ ನಾವು ಸೋಲಿಸಬೇಕು. ಇಲ್ಲಿನ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ನನ್ನ ಉದ್ದೇಶ ಎಂದಿದ್ದಾರೆ.
ಕಾಶ್ಮೀರದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಇಂದು ಜಮ್ಮು ಮತ್ತು ಕಾಶ್ಮೀರದಾದ್ಯಂತ ಶಾಲಾ-ಕಾಲೇಜುಗಳು ಸುಗಮವಾಗಿ ನಡೆಯುತ್ತಿವೆ. ಮಕ್ಕಳ ಬಳಿ ಪೆನ್ನುಗಳು, ಪುಸ್ತಕಗಳು ಮತ್ತು ಲ್ಯಾಪ್‍ಟಾಪ್‍ಗಳಿವೆ. ಇಂದು ಅವರ ಕೈಯಲ್ಲಿ ಕಲ್ಲು ಮತ್ತು ಬೆಂಕಿ ಇರುವ ಬಗ್ಗೆ ಯಾವುದೇ ವರದಿಗಳಿಲ್ಲ. ಇಲ್ಲಿ ಹೊಸ ಶಾಲೆಗಳು, ಹೊಸ ಕಾಲೇಜುಗಳು, ಎಐಐಎಂಎಸ್, ವೈದ್ಯಕೀಯ ಕಾಲೇಜುಗಳು ಮತ್ತು ಐಐಟಿಗಳು ನಿರ್ಮಾಣವಾಗುತ್ತಿವೆ ಎಂದು ಹೇಳಿದ್ದಾರೆ.
ಯಾವುದೇ ವಿಧಾನದಿಂದ ಅಧಿಕಾರ ಹಿಡಿಯುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಮೂರು ಪಕ್ಷಗಳು ಭಾವಿಸಿವೆ. ಇದಕ್ಕಾಗಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯ ಮತ್ತು ಅರಾಜಕತೆಯನ್ನು ಹರಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರವು ಇನ್ನು ಮುಂದೆ ಈ `ಮೂರು ಕುಟುಂಬಗಳ’ ಹಿಡಿತದಲ್ಲಿರುವುದಿಲ್ಲ. ಇಲ್ಲಿಯ ಯುವಕರು ಅವರಿಗೆ ಸವಾಲು ಹಾಕುತ್ತಿದ್ದಾರೆ ಎಂದಿದ್ದಾರೆ.
10 ವರ್ಷಗಳ ಭಾರೀ ಅಂತರದ ನಂತರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಮತದಾನ ಸೆಪ್ಟೆಂಬರ್ 18 ರಂದು ನಡೆದಿದ್ದು, ಇನ್ನೆರಡು ಸುತ್ತುಗಳು ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ನಡೆಯಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: J&K ಚುನಾವಣೆಯಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಹೆಚ್ಚಿದೆ: ಪಾಕ್ ರಕ್ಷಣಾ ಸಚಿವ