ಮುಂಬೈ: ಖ್ಯಾತ ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ (Narendra Dabholkar) ಅವರನ್ನು ಹತ್ಯೆಗೈದಿದ್ದ ಇಬ್ಬರಿಗೆ ಪುಣೆಯ ವಿಶೇಷ ಯುಎಪಿಎ ನ್ಯಾಯಾಲಯ (Pune court) ಜೀವಾವಧಿ ಶಿಕ್ಷೆ ವಿಧಿಸಿದೆ. ಇತರ ಮೂವರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಇಬ್ಬರು ಶೂಟರ್‌ಗಳಾದ ಶರದ್ ಕಲಾಸ್ಕರ್ ಮತ್ತು ಸಚಿನ್ ಅಂದುರೆ ತಪ್ಪಿತಸ್ಥರು ಎಂದು ನ್ಯಾಯಾಲಯ ಆದೇಶಿಸಿದೆ. ಹತ್ಯೆ ಪ್ರಕರಣದಲ್ಲಿ ಇತರ ಮೂವರು ಆರೋಪಿಗಳಾದ ವೀರೇಂದ್ರಸಿನ್ಹ ತಾವಡೆ, ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಎಂಬವರ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಕಾರಣ ಮೂವರನ್ನು ಆರೋಪ ಮುಕ್ತಗೊಳಿಸಲಾಗಿದೆ. ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಮಂಜೂರು
2013 ರ ಆ.20 ರಂದು ನರೇಂದ್ರ ದಾಭೋಲ್ಕರ್ ಅವರು ಪುಣೆಯ ಓಂಕಾರೇಶ್ವರ ಸೇತುವೆಯ ಮೇಲೆ ಬೆಳಗ್ಗಿನ ಜಾವ ವಾಯುವಿಹಾರಕ್ಕೆ ತೆರಳಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಐವರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ತನಿಖೆ ನಡೆಸಿದ್ದ ಅಧಿಕಾರಿಗಳು, ದಾಭೋಲ್ಕರ್ ಅವರು ಮೂಢನಂಬಿಕೆ ವಿರುದ್ಧ ಅಭಿಯಾನ ನಡೆಸುತ್ತಿದ್ದ ಕಾರಣ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದರು. ಬಳಿಕ 2014ರಲ್ಲಿ, ಬಾಂಬೆ ಹೈಕೋರ್ಟ್ ನಿರ್ದೇಶನದ ನಂತರ ಸಿಬಿಐ ತನಿಖೆಯನ್ನು ವಹಿಸಿಕೊಂಡಿತ್ತು.
ವಿಚಾರಣೆ ವೇಳೆ, ಹಿಂದೂ ಬಲಪಂಥೀಯ ಸಂಘಟನೆಯಾದ ಸನಾತನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಇಎನ್‍ಟಿ ಶಸ್ತ್ರಚಿಕಿತ್ಸಕ ಡಾ. ವೀರೇಂದ್ರಸಿನ್ಹ್ ತಾವಡೆ ಕೊಲೆಯ ಮಾಸ್ಟರ್ ಮೈಂಡ್ ಎಂದು ಪ್ರಾಸಿಕ್ಯೂಷನ್ ಹೇಳಿಕೊಂಡಿತ್ತು. ಇದನ್ನೂ ಓದಿ: ಪ್ರಜ್ವಲ್ ನನ್ನ ಸಂಪರ್ಕಕ್ಕೆ ಬಂದಿಲ್ಲ: ನಿಖಿಲ್ ಕುಮಾರಸ್ವಾಮಿ