ಬೆಂಗಳೂರು: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯ ತನಿಖೆಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯ ಎಂದು ಹೇಳಲಾಗಿರುವ ಪಿಸ್ತೂಲ್ ಅನ್ನು ಸಿಬಿಐ ಅಧಿಕಾರಿಗಳು ವಿಭಿನ್ನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಗರ ತೀರದಲ್ಲಿ 40 ಅಡಿ ಆಳದಲ್ಲಿ ಗನ್ ಹುದುಗಿಸಿ ಇಡಲಾಗಿತ್ತು. ದುಬೈ ಮೂಲದ ಕಂಪನಿಯ ಸಹಾಯದೊಂದಿಗೆ ನಾರ್ವೆಯ ಪರಿಕರಗಳನ್ನು ಬಳಸಿ ಮಹಾರಾಷ್ಟ್ರದ ಠಾಣೆ ಬಳಿ ಸಿಬಿಐ ಅಧಿಕಾರಿಗಳು ಗನ್ ವಶಕ್ಕೆ ಪಡೆದಿದ್ದಾರೆ. ಅಂದಹಾಗೆ ಗನ್ ವಶ ಪಡಿಸಿಕೊಳ್ಳುವ ಕಾರ್ಯಾಚರಣೆಗೆ ಒಟ್ಟು 7.5 ಕೋಟಿ ರೂ. ವೆಚ್ಚವಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಜಂಟಿಯಾಗಿ ಇದನ್ನು ಭರಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್, ಗೌರಿ ಲಂಕೇಶ್ ಹಾಗೂ ಎಂ.ಎಂ.ಕಲ್ಬುರ್ಗಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಂತಕರ ಕಾರ್ಯಶೈಲಿ ನಾಲ್ವರ ಕೇಸ್ ನಲ್ಲೂ ಒಂದೇ ರೀತಿಯಾಗಿತ್ತು. 2013ರ ಆಗಸ್ಟ್ 20 ರಲ್ಲಿ ನಡೆದ ದಾಬೋಲ್ಕರ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಡಿಸಿಪಿ ಎಂ.ಎನ್.ಅನುಚೇತ್ ನೇತೃತ್ವದ ಎಸ್‍ಐಟಿ ತಂಡ ಗೌರಿ ಲಂಕೇಶ್ ಹಾಗೂ ಎಂ.ಎಂ ಕಲ್ಬುರ್ಗಿಯವರ ಹತ್ಯೆಯ ತನಿಖೆ ನಡೆಸುತ್ತಿದೆ.