ಕೊಪ್ಪಳ: ಕೊರೊನಾ ಲಾಕ್‍ಡೌನ್ ಜಾರಿಯಲ್ಲಿರುವ ಸಂಕಷ್ಟದ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ಕೂಲಿಕಾರರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮತ್ತು ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಕೂಲಿ ಆಧಾರಿತ ಕಾಮಗಾರಿಗಳನ್ನು ಗುರುತಿಸಿಸಲಾಗಿದೆ. ಅಲ್ಲದೇ ಕೋವಿಡ್-19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೂಲಿಕಾರರಿಗೆ ಕೆಲಸವನ್ನು ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ಇರಕಲ್ಲಗಡಾ, ಹುಲಿಗಿ, ಅಳವಂಡಿ, ಬೆಟಗೇರಿ, ಹಲಗೇರಿ, ಬಿಸರಳ್ಳಿ, ಗುಳದಳ್ಳಿ, ಕಲ್ತಾವರಗೇರಾ, ಚಿಕ್ಕಬೊಮ್ಮನಾಳ, ಹಿರೇಬೊಮ್ಮನಾಳ, ಗೊಂಡಬಾಳ, ಕುಷ್ಟಗಿ ತಾಲೂಕಿನ ಶಿರಗುಂಪಿ, ಬಿಜಕಲ್, ಹೂಲಗೇರಾ, ಚಳಗೇರಾ, ಹಿರೇಬನ್ನಿಗೊಳ, ತಳುವಗೇರಾ, ಹನುಮನಾಳ, ಬೆನಕನಾಳ, ಮಾಲಗಿತ್ತಿ, ನಿಲೋಗಲ್, ಜುಮಲಾಪುರ, ಕಿಲ್ಲಾರಹಟ್ಟಿ, ಮೆಣೇಧಾಳ, ಯಲಬುರ್ಗಾ ತಾಲೂಕಿನ ಮುಧೋಳ, ಬಂಡಿ, ತುಮ್ಮರಗುದ್ದಿ, ಬಳೂಟಗಿ, ಬೇವೂರು, ಗೆದಗೇರಿ, ಹಿರೇವಂಕಲಕುಂಟಾ, ಚಿಕ್ಕೊಪ್ಪಾ, ಗಂಗಾವತಿ ತಾಲೂಕಿನ ಮುಸಲಾಪುರ, ಹುಲಿಹೈದರ, ಬಸರಿಹಾಳ, ಗೌರಿಪುರ, ಚಿಕ್ಕಮಾದಿನಾಳ, ಸುಳೇಕಲ್, ಆಗೋಲಿ, ನವಲಿ ಗ್ರಾಮ ಪಂಚಾಯ್ತಿಗಳಲ್ಲಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಅಭಿವೃದ್ಧಿ ಇನ್ನೂ ಮುಂತಾದ ಕೂಲಿ ಆಧಾರಿತ ಕಾಮಗಾರಿಗಳಲ್ಲಿ ಕೆಲಸ ಒದಗಿಸಿ ಸಕಾಲದಲ್ಲಿ ಕೂಲಿ ಹಣ ಪಾವತಿಗೆ ಕ್ರಮವಹಿಸಲಾಗಿದೆ. ಸರ್ಕಾರದ ಆದೇಶದಂತೆ 5 ಜನರಿಗಿಂತ ಹೆಚ್ಚು ಕೂಲಿಕಾರರು ಕೆಲಸ ನಿರ್ವಹಿಸದಂತೆ ನಿಗಾವಹಿಸಿ ಮತ್ತು ಪರಸ್ಪರ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವಂತೆ ನಿಗಾವಹಿಸಲಾಗುತ್ತಿದೆ.
Advertisement
Advertisement
ಕೃಷಿಗೆ ಪೂರಕ ನರೇಗಾ ಯೋಜನೆ :
ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಮುಂಗಾರು ಹಂಗಾಮಿಗೆ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ನೀರಾವರಿ ಇಲ್ಲದ ಪ್ರದೇಶಗಳಲ್ಲಿ ಕೃಷಿ ಇಲಾಖೆಯಿಂದ ಕ್ಷೇತ್ರ ಬದು ಮತ್ತು ಕಂದಕ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನೀಡಲಾಗಿದೆ.
Advertisement
ನೀರಾವರಿ ಇರುವ ಪ್ರದೇಶಗಳಲ್ಲಿ ರೈತರು ತಮ್ಮ ತಮ್ಮ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಕಾಮಗಾರಿಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಹೆಚ್ಚಿಸಿಕೊಳ್ಳಲು ಮತ್ತು ಕೃಷಿ ಚಟುವಟಿಕೆಗಳಿಗೆ ಪ್ರಯೋಜನಕಾರಿಯಾಗಿವೆ.
Advertisement
ಸಂಕಷ್ಟದ ಜನತೆಗೆ ಪರಿಹಾರವಾದ ನರೇಗಾ:
ಕೊರೊನಾ ಸಂಕಷ್ಟದಿಂದ ಎಲ್ಲಾ ಕಡೆ ಉದ್ಯೋಗಗಳು ಸ್ಥಗಿತಗೊಂಡಿವೆ. ಉದ್ಯೋಗಕ್ಕೆಂದು ಮಹಾನಗರಗಳಿಗೆ ವಲಸೆ ಹೋದ ಅನೇಕ ಕೂಲಿಕಾರರು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಉದ್ಯೋಗವಿಲ್ಲದೆ ಕುಳಿತುಕೊಂಡಿದ್ದ ಗ್ರಾಮಸ್ಥರಿಗೆ, ಕೃಷಿ ಕಾರ್ಮಿಕರಿಗೆ, ರೈತರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಸ್ವಗ್ರಾಮಗಳಲ್ಲಿ ಉದ್ಯೋಗವನ್ನು ಒದಗಿಸಲಾಗಿದೆ. ಇದರಿಂದ ಜನರು ಆರ್ಥಿಕವಾಗಿ ಕೊಂಚ ಗಟ್ಟಿಯಾಗಿದ್ದಾರೆ. ನರೇಗಾ ಯೋಜನೆಯಡಿ ಒಂದು ದಿನಕ್ಕೆ ಪ್ರಸ್ತುತ 275 ರೂಪಾಯಿಗಳನ್ನು ನೀಡಲಾಗುತ್ತಿದೆ. ಕೆಲಸಕ್ಕೆ ಬರುವರರು ತಮ್ಮದೇ ಗುದ್ದಲಿ, ಸಲಕೆ ತಂದರೆ ಹೆಚ್ಚುವರಿಯಾಗಿ 10 ರೂಪಾಯಿ ಸೇರಿ ಒಟ್ಟು 285 ರೂಪಾಯಿಗಳನ್ನು ನೀಡಲಾಗುತ್ತದೆ.
ಈಗಾಗಲೇ ಜಿಲ್ಲೆಯಲ್ಲಿ 52,655 ಮಾನವ ದಿನಗಳನ್ನು ಸೃಜಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ಗುರಿಯನ್ನು ಹೊಂದಲಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿನ ಗ್ರಾಮೀಣ ಕೂಲಿಕಾರರು ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದು, ಅವರು ಜಾಬ್‍ಕಾರ್ಡ ಕೇಳಿದಲ್ಲಿ ತುರ್ತಾಗಿ ಜಾಬ್‍ಕಾರ್ಡ ಒದಗಿಸಿ ಕೆಲಸ ನೀಡಲಾಗಿದೆ. ಪ್ರತಿ ದಿನ ಕೂಲಿಕಾರರು ಸ್ಥಳದಲ್ಲಿ ಕೆಲಸ ಪ್ರಾರಂಭಿಸುವ ಮುನ್ನ ಕೋವಿಡ್-19ರ ಕುರಿತು ಅರಿವು ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಕೈತೊಳೆಯಲು ನೀರು ಹಾಗೂ ಸಾಬೂನು, ನೆರಳಿನ ವ್ಯವಸ್ಥೆ, ಮಕ್ಕಳ ಪಾಲನೆಗೆ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ, ಸ್ಯಾನಿಟೈಜರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ತಾಂತ್ರಿಕ ಸಹಾಯಕರು, ಬೇರ್ ಫುಟ್ ಟೆಕ್ನಿಷಿಯನ್, ಕಾಯಕ ಬಂಧುಗಳನ್ನು ನೇಮಿಸಿ ಕೂಲಿಕಾರರಲ್ಲಿ ನೆಗಡಿ, ಕೆಮ್ಮು, ಜ್ವರ ಇತ್ಯಾದಿ ಅನಾರೋಗ್ಯ ಕಂಡುಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಪರೀಕ್ಷೆಗೆ ಹಾಗೂ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳಲು ಸೂಚಿಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಗ್ರಾಮೀಣ ಭಾಗದ ಕೂಲಿಕಾರರು ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದ್ದು, ಸ್ವಪ್ರೇರಿತರಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.