ಬೆಂಗಳೂರು: ಕೆಆರ್ ಪುರಂ ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚಲು ಯತ್ನಿಸಿದ್ದ ಘಟನೆಯನ್ನು ಬೆಂಗಳೂರು ಜಲಮಂಡಳಿ ಸದಸ್ಯನಾಗಿರುವ ನಾರಾಯಣಸ್ವಾಮಿ ಸಮರ್ಥಿಸಿಕೊಂಡಿದ್ದಾನೆ.
ಈ ಕುರಿತು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿರುವ ನಾರಾಯಣಸ್ವಾಮಿ, ಖಾತೆ ಮಾಡಿಕೊಡದೇ ವಿನಾಃ ಕಾರಣ ತಡಮಾಡುತ್ತಿದ್ದ ಕಾರಣಕ್ಕೆ ಅಧಿಕಾರಿಯ ಮುಂದೇ ನನ್ನ ಬೇಸರವನ್ನು ವ್ಯಕ್ತಪಡಿಸಿದೆ. ಇದು ಕೇವಲ ನನ್ನ ಒಬ್ಬನ ಸಮಸ್ಯೆಯಲ್ಲ 750 ಜನರ ಸಮಸ್ಯೆ ಎಂದು ಹೇಳಿದ್ದಾನೆ.
Advertisement
ಪಶ್ಚಾತ್ತಾಪ ಇಲ್ಲ: ಈ ಕುರಿತು ಯಾವುದೇ ಕ್ಷಮೆ ಕೇಳುವ ಪ್ರಶ್ನೆ ಇಲ್ಲ. ನಾನು ಯಾವುದೇ ಕ್ಷಮೆ ಕೇಳುವಂತಹ, ಉದ್ದೇಶ ಪೂರ್ವಕ ತಪ್ಪು ಮಾಡಿಲ್ಲ. ಈ ಕುರಿತು ನಾನು ಯಾರನ್ನು ಕ್ಷಮೆ ಕೇಳುವುದಿಲ್ಲ. ಅಧಿಕಾರಿಗಳು ಜನಸಾಮಾನ್ಯರಿಗೆ ನೀಡುವ ಚಿತ್ರಹಿಂಸೆಯನ್ನು ಎದುರಿದ್ದೇನೆ ಅಷ್ಟೇ. ಕ್ಷೇತ್ರದ ಜನರಿಗೆ ಘಟನೆ ಕುರಿತು ಸಂಪೂರ್ಣ ಮಾಹಿತಿ ಇದೆ. ಈ ಕುರಿತು ಮಾತನಾಡಲು ಇದು ಸಮಯವಲ್ಲ. ಸೂಕ್ತ ವೇದಿಕೆಯಲ್ಲಿ ನಾನು ಉತ್ತರ ನೀಡುತ್ತೇನೆ. ಇಂತಹ ದೃಶ್ಯಗಳನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಿದರೆ ನನಗೆ ಏನು ನಷ್ಟವಿಲ್ಲ, ಪ್ರಸಾರ ಮಾಡಿ ಎಂದಿದ್ದಾನೆ.
Advertisement
Advertisement
ಪೆಟ್ರೋಲ್ ಎರಚಿಲ್ಲ: ನನ್ನ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರು ಸೂಚಿಸಿದ ಕೆಲವು ಪೌಡರ್ ನೀರಿನಲ್ಲಿ ಕಲಸಿ ಕುಡಿಯುತ್ತೇನೆ. ಆ ವೇಳೆ ನನ್ನ ಕೈನಲ್ಲಿದ್ದ ಆ ಬಾಟಲ್ ನೀರನ್ನು ಬೇಸರದಿಂದ ಎರಚಿದ್ದೇನೆ. ಶಾಸಕರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಜನರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲು ಮಾತ್ರ ಅವರಿಗೆ ಹೇಳಿದ್ದೆ ಎಂದಿದ್ದಾನೆ.
Advertisement
ನಾನು ಕೇವಲ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ ಅಷ್ಟೇ. ಇದರಲ್ಲಿ ಸಿಎಂ, ಶಾಸಕರ ಪ್ರಭಾವ ಬಳಸಿಲ್ಲ. ಅಧಿಕಾರಿ ಕ್ರಮದಿಂದ ಬೇಸತ್ತು ಈ ರೀತಿ ನಡೆದಿದೆ. ಆದರೆ ಸಮಾಜದಲ್ಲಿ ಯಾವುದೇ ತಪ್ಪು ಕಾರ್ಯ ಮಾಡಿಲ್ಲ. ಘಟನೆ ನಡೆದು ಒಂದು ವಾರ ಆಗಿದೆ. ಈ ಕುರಿತು ಯಾವುದೇ ಪಶ್ಚಾತ್ತಾಪ ಪಡುವುದು ಇಲ್ಲ. ಅನಿವಾರ್ಯವಾಗಿ ಸಾರ್ವಜನಿಕ ಜೀವನ ಪ್ರವೇಶ ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾನೆ.
ಅಧಿಕಾರಿ ವರ್ಗಾವಣೆ: ಕಳೆದ 20 ದಿನಗಳ ಹಿಂದೆಯೇ ಘಟನೆ ಕಾರಣರಾದ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಅಧಿಕಾರಿಯ ವರ್ಗಾವಣೆಗೆ ನಾನು ಯಾರ ಮೇಲು ಒತ್ತಡ ಹಾಕಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ. ಕೆಆರ್ ಪುರಂ ಬ್ಲಾಕ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೆ. ಪ್ರಸ್ತುತ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಇಷ್ಟ ಪಟ್ಟು ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾನೆ.
ಏನಿದು ಘಟನೆ?: ನಾರಾಯಣಸ್ವಾಮಿ ಎನ್‍ಆರ್‍ಐ ಬಡಾವಣೆಯ ಜಮೀನು ವಿಚಾರದಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಡುವಂತೆ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಚೆಂಗಲ್ ರಾಯಪ್ಪಗೆ ಒತ್ತಡ ಹಾಕಿದ್ದ. ಜಮೀನು ವ್ಯಾಜ್ಯ ಕೋರ್ಟ್‍ನಲ್ಲಿದೆ, ಅಕ್ರಮವಾಗಿ ಖಾತೆ ಮಾಡಿಕೊಡಲ್ಲ ಎಂದು ಚೆಂಗಲ್ ರಾಯಪ್ಪ ಹೇಳಿದ್ದರು. ಹೀಗಾಗಿ ಕಳೆದ ಫೆಬ್ರವರಿ 16ರಂದು ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಹೊರಮಾವು ನಲ್ಲಿರುವ ಬಿಬಿಎಂಪಿ ಕಚೇರಿಗೆ ನುಗ್ಗಿದ ನಾರಾಯಣಸ್ವಾಮಿ, ಎಆರ್‍ಒ ಚೆಂಗಲ್ ರಾಯಪ್ಪ ಮುಂದೆಯೇ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಖಾತೆ ಮಾಡಿಕೊಡದಿದ್ದರೆ ಕಚೇರಿಯಲ್ಲಿರುವ ದಾಖಲೆಗಳನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.
ಚೆಂಗಲ್ ರಾಯಪ್ಪ ಖಡಕ್ ಅಧಿಕಾರಿ ಅಂತ ಗುರುತಿಸಿಕೊಂಡಿದ್ದ ವ್ಯಕ್ತಿಯಾಗಿದ್ದು, ಪೆಟ್ರೋಲ್ ಹಾಕೋದಾಗಿ ಬೆದರಿಸಿದ್ರೂ ಅವರು ಹೆದರಲಿಲ್ಲ. ಎರಡು ದಿನಗಳ ಹಿಂದೆ ಚೆಂಗಲ್ ರಾಯಪ್ಪ ಅವರನ್ನ ವರ್ಗಾವಣೆ ಮಾಡಲಾಗಿದೆ. ಸಿಎಂ ಮತ್ತು ಭೈರತಿ ಬಸವರಾಜ್ ಪ್ರಭಾವ ಬಳಸಿ ಚೆಂಗಲ್ ರಾಯಪ್ಪರನ್ನ ನಾರಾಯಣಸ್ವಾಮಿ ವರ್ಗಾವಣೆ ಮಾಡಿಸಿದ್ದಾನೆ ಎನ್ನಲಾಗಿದೆ.
https://www.youtube.com/watch?v=1hoUCWe-r14