ಮಂಡ್ಯ: ಕೆ.ಆರ್ ಪೇಟೆಯಲ್ಲಿ ಗೆಲುವು ಸಾಧಿಸುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡಿರುವ ಶಾಸಕ ನಾರಾಯಣಗೌಡ ಅವರಿಗೆ ಸಣ್ಣ ನೀರಾವರಿ ಸಚಿವ ಸ್ಥಾನದ ಮೇಲೆ ಕಣ್ಣು ಬಿದ್ದಿದೆ.
ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಮೇಲುಕೋಟೆ ಶಾಸಕ ಪುಟ್ಟರಾಜು ಅವರು ಸಣ್ಣ ನೀರಾವರಿ ಸಚಿವರಾಗಿದ್ದರು. ಹೀಗಾಗಿ ಪುಟ್ಟರಾಜು ಅವರಿಗೆ ಸೆಡ್ಡು ಹೊಡೆಯಲು ಸಣ್ಣ ನೀರಾವರಿ ಖಾತೆ ಅಪೇಕ್ಷೆಯಲ್ಲಿ ನಾರಾಯಣಗೌಡರು ಇದ್ದಾರೆ. ಜೆಡಿಎಸ್ ಶಾಸಕನಾಗಿದ್ದ ವೇಳೆ ಮಾಜಿ ಸಚಿವ ಪುಟ್ಟರಾಜು ಅನುದಾನದ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದರು ಎಂದು ನಾರಾಯಣಗೌಡರು ಹಲವು ಬಾರಿ ಆರೋಪಗಳನ್ನು ಮಾಡಿದ್ದರು. ಈ ನಿಟ್ಟಿನಲ್ಲಿ ಈಗ ಪುಟ್ಟರಾಜು ಅವರು ನಿರ್ವಹಿದ ಖಾತೆಯನ್ನೇ ನೀಡುವಂತೆ ಸಿಎಂ ಯಡಿಯೂರಪ್ಪ ಅವರ ಮುಂದೆ ನಾರಾಯಣಗೌಡ ದುಂಬಾಲು ಬಿದ್ದಿದ್ದಾರೆ ಎನ್ನಲಾಗುತ್ತಿದೆ.
Advertisement
Advertisement
ಇದಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹರಿದರು ಕೂಡ ಕೆ.ಆರ್ ಪೇಟೆ ಭಾಗದಲ್ಲಿ ಮಾತ್ರ ಕೃಷಿಗೆ ನೀರಿನ ಸಮಸ್ಯೆ ಇದೆ. ಹೀಗಾಗಿ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಇರುವ ಒಣ ಭೂಮಿಗೆ ನೀರು ಹರಿಸಿ ನೀರಾವರಿ ಪ್ರದೇಶವನ್ನಾಗಿ ಮಾಡಬೇಕು ಎನ್ನುವುದು ನಾರಾಯಣಗೌಡರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಖಾತೆ ಸಿಕ್ಕಿದರೆ ಸಾಕಷ್ಟು ಅನುದಾನವನ್ನು ಬಳಕೆ ಮಾಡಿಕೊಂಡು ಅಭಿವೃದ್ಧಿ ಮಾಡಬಹುದು ಎನ್ನಲಾಗುತ್ತಿದೆ. ಈ ಮೂಲಕ ನಾರಾಯಣಗೌಡ ಅವರು ಪುಟ್ಟರಾಜು ಅವರ ಮೇಲಿನ ಸೇಡಿನ ಜೊತೆಗೆ ಕ್ಷೇತ್ರವನ್ನು ಅಭಿವೃದ್ಧಿಯನ್ನೂ ಸಹ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.