ಬೆಂಗಳೂರು: ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹಾಗೂ ಕಂದಾಯ ಸಚಿವ ಆರ್ ಅಶೋಕ್ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಮುದಾಯವನ್ನು ಬಳಸಿಕೊಂಡು ಎಲ್ಲರೂ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಅವರು ಕೂಡ ಸಮುದಾಯವನ್ನು ಬಳಸಿಕೊಂಡು ಮಂತ್ರಿ ಹಾಗೂ ಶಾಸಕರು ಆಗಿದ್ದಾರೆ. ಹಾಗಾಗಿ ಉಪಮುಖ್ಯಮಂತ್ರಿ ಅಥವಾ ಮಂತ್ರಿ ಆಗಲಿ ಮುಖ ನೋಡಿ ಈ ಸ್ಥಾನ ಕೊಡಲಿಲ್ಲ. ಬದಲಾಗಿ ಅವರ ಸಮುದಾಯ ನೋಡಿ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ಇಂದು ಬಿಜೆಪಿಯಲ್ಲಿ ಒಬ್ಬ ಅಶ್ವಥ್ ನಾರಾಯಣ್, ಸಿ.ಟಿ ರವಿ, ಅಶೋಕ್ ಅವರನ್ನು ಮಾತನಾಡಿಸುತ್ತಿದ್ದಾರೆ ಹೊರತು ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದರು.
Advertisement
Advertisement
ನಾನು ಯಾವಾಗಲೂ ಕನ್ನಡ, ಕನ್ನಡಿಗರ ಹಾಗೂ ಕರ್ನಾಟಕದ ಪರವಾಗಿ 25 ವರ್ಷದ ಹೋರಾಟದ ಜೀವನದಲ್ಲಿ ತೊಡಗಿಸಿಕೊಂಡಿದ್ದೇನೆ. ಈಗಲೂ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡಬೇಕು ಎಂಬುದು ನನ್ನ ಉದ್ದೇಶವಾಗಿದೆ. ರಾಜಕೀಯವಾಗಿ ನಾನು ಯೋಚನೆ ಮಾಡಿಲ್ಲ. ಈ ಹೋರಾಟ ಸಂಪೂರ್ಣವಾಗಿ ಡಿ.ಕೆ ಶಿವಕುಮಾರ್ ಅವರ ಕಾನೂನಿನ ಹೋರಾಟಕ್ಕೆ ನೈತಿಕವಾದಂತಹ ಹಾಗೂ ಮಾನಸಿಕವಾದಂತಹ ರ‍್ಯಾಲಿಯೇ ಹೊರತು ಬೇರೆ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.
Advertisement
Advertisement
ಎಲ್ಲ ಸಂಸ್ಥೆಗಳಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ಒಕ್ಕಲಿಗರ ಸಂಘದಲ್ಲಿ ನಿರ್ದೇಶಕರು, ಆಡಳಿತ ಇಲ್ಲ. ಎಲ್ಲ ನಿರ್ದೇಶಕರು ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಸಮಾಜದ ಅನೇಕ ಸಂಘ-ಸಂಸ್ಥೆ ಹಾಗೂ ರಾಜಕೀಯ ಪಕ್ಷಗಳು ಈ ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ 40 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕೂಡ ಭಾಗಿಯಾಗಲಿದ್ದಾರೆ ಎಂದರು.
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಪ್ರಕರಣವನ್ನೂ ಸಿಬಿಐಗೆ ಕೊಟ್ಟಿದ್ದಾರೆ. ಹೀಗಾಗಿ ಅವರಿಗೂ ಮುಂದಿನ ದಿನಗಳಲ್ಲಿ ತೊಂದರೆ ಆಗಬಹುದು. ಒಟ್ಟಿನಲ್ಲಿ ಸಮಾಜದ ನಾಯಕರನ್ನು ರಾಜಕೀಯ ಮುಗಿಸಬೇಕು ಎಂಬ ಕೇಂದ್ರದ ವ್ಯವಸ್ಥೆಯ ವಿರುದ್ಧ ಜನ ಸಿಡಿದೆದ್ದು ನಿಲ್ಲಬೇಕಾಗುತ್ತದೆ ಎಂದು ಹೇಳಿದ್ದಾರೆ.