ವಿನಯ್ ಬಾಲಾಜಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ ನನ್ನಪ್ರಕಾರ. ಇದು ಅವರ ಮೊದಲ ಚಿತ್ರವೆಂದರೆ ನಂಬಿಕೆ ಬಾರದಂಥಾ ಭರವಸೆಯನ್ನು ವಿನಯ್ ಈಗಾಗಲೇ ಮೂಡಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಪ್ರೇಕ್ಷಕರನ್ನು ಸೆಳೆಯುತ್ತಾ, ಬಾಲಿವುಡ್ ಚಿತ್ರಗಳಿಗೇ ಪೈಪೋಟಿ ನೀಡುತ್ತಾ ಸಾಗಿ ಬಂದಿರೋ ಈ ಚಿತ್ರದಲ್ಲಿ ಪ್ರಿಯಾಮಣಿ ಮಹತ್ತರವಾದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಮೊನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದ ಟ್ರೇಲರ್‌ನಲ್ಲಿ ಪ್ರಿಯಾಮಣಿ ಪಾತ್ರದ ಒಂದಷ್ಟು ಮಜಲುಗಳು ಪ್ರೇಕ್ಷಕರ ಮುಂದೆ ಅನಾವರಣಗೊಂಡಿವೆ.
ವರ್ಷದ ಹಿಂದೆ ಮದುವೆಯಾದ ನಂತರದಲ್ಲಿ ಪ್ರಿಯಾಮಣಿ ಚಿತ್ರರಂಗದಿಂದ ದೂರಾಗಿದ್ದರು. ಆದರೆ ಅದಾಗಲೇ ಕನ್ನವೂ ಸೇರಿದಂತೆ ಒಂದಷ್ಟು ಭಾಷೆಗಳಲ್ಲಿ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿದ್ದ ಪ್ರಿಯಾಮಣಿಯವರನ್ನು ಅಭಿಮಾನಿಗಳು, ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಲೇ ಇದ್ದರು. ಕಡೆಗೂ ಪ್ರಿಯಾಮಣಿ ಕನ್ನಡ ಚಿತ್ರದ ಮೂಲಕವೇ ಮತ್ತೆ ಆಗಮಿಸಿದ್ದಾರೆ. ಮದುವೆಯ ನಂತರ ಅವರು ನಟಿಸಿ ತೆರೆಗಾಣುತ್ತಿರೋ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ ನನ್ನಪ್ರಕಾರದ ಪಾಲಾಗಿದೆ.
ಪ್ರಿಯಾಮಣಿ ಎಂಥಾ ಪಾತ್ರಕ್ಕಾದರೂ ನ್ಯಾಯ ಸಲ್ಲಿಸುವಂಥಾ ಪ್ರತಿಭಾವಂತ ನಟಿ. ಕಥೆಯೊಂದನ್ನು ಆರಿಸಿಕೊಳ್ಳುವಾಗಲೇ ಹೊಸತನಕ್ಕೆ, ಹೊಸಾ ಪ್ರಯೋಗಗಳಿಗೆ ಒತ್ತು ಕೊಡೋ ಮನಸ್ಥಿತಿಯ ಅವರು ನನ್ನಪ್ರಕಾರ ಕಥೆಯನ್ನು ಕೇಳಿ ಥ್ರಿಲ್ ಆಗಿ ಒಪ್ಪಿಕೊಂಡಿದ್ದರ ಹಿಂದೆಯೂ ಅಂಥಾದ್ದೇ ಕಾರಣವಿದೆ. ನವ ನಿರ್ದೇಶಕ ವಿನಯ್ ಈ ಕಥೆಯನ್ನು ಹೇಳಿದಾಗ ಇಡೀ ಕಥೆಯ ಬಗ್ಗೆ, ಅದರಲ್ಲಿರೋ ಪ್ರಯೋಗಾತ್ಮಕ ಗುಣಗಳ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಪ್ರಿಯಾಮಣಿ ಮೆಚ್ಚುಗೆ ಸೂಚಿಸಿದ್ದರಂತೆ. ನಂತರ ವಿನಯ್ ನಿರೀಕ್ಷೆ ಮಾಡಿದ್ದನ್ನೂ ಮೀರಿ ಆ ಪಾತ್ರಕ್ಕವರು ಜೀವ ತುಂಬಿದ್ದಾರಂತೆ. ಈಗ ಅದೇನೇ ಸುಳಿವು ಸಿಕ್ಕಿದ್ದರೂ ಕೂಡಾ ಪ್ರಿಯಾಮಣಿಯ ಪಾತ್ರ ಸರ್ಪ್ರೈಸ್ ಗಳನ್ನು ಬಚ್ಚಿಟ್ಟುಕೊಂಡಿದೆ. ಅದೇನೆಂದು ಗೊತ್ತಾಗಲು ಕ್ಷಣಗಣನೆ ಶುರುವಾಗಿದೆ.