ಬೆಂಗಳೂರು: ಪ್ರಿಯಾಮಣಿ, ಕಿಶೋರ್ ಮತ್ತು ಮಯೂರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನಪ್ರಕಾರ ಚಿತ್ರ ಈ ವಾರ ತೆರೆಗಾಣುತ್ತಿದೆ. ಮೋಷನ್ ಪೋಸ್ಟರ್, ಹಾಡು ಮತ್ತು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿರೋ ಟ್ರೇಲರ್‍ಗಳೆಲ್ಲವೂ ನನ್ನಪ್ರಕಾರವನ್ನು ಬಹುನಿರೀಕ್ಷಿತ ಚಿತ್ರವಾಗಿ ನೆಲೆಗಾಣಿಸಿದೆ. ಹೊಸಬರ ಚಿತ್ರಗಳು ಕನ್ನಡ ಚಿತ್ರರಂಗದ ಗೌಜು ಗದ್ದಲ ಮೀರಿಕೊಂಡು ಸದ್ದು ಮಾಡೋದೇ ಒಂದು ಸಾಹಸ. ಅಂಥಾದ್ದರಲ್ಲಿ ಈ ಚಿತ್ರ ದೇಶಮಟ್ಟದಲ್ಲಿ ಗಮನ ಸೆಳೆಯೋದರೊಂದಿಗೆ ಪ್ರತೀ ಪ್ರೇಕ್ಷಕರಲ್ಲೂ ನೋಡಲೇಬೇಕೆನ್ನುವ ಉತ್ಸಾಹ ಹೆಚ್ಚಿಸಿಬಿಟ್ಟಿದೆ.
ವಿನಯ್ ಬಾಲಾಜಿ ನಿರ್ದೇಶನ ಮಾಡಿರೋ ನನ್ನ ಪ್ರಕಾರ ಚಿತ್ರ ಐಎಂಡಿಬಿಯಲ್ಲಿಯೂ ಮೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗಿತ್ತು. ಆ ಸಾಲಿನಲ್ಲಿ ಬಾಲಿವುಡ್ ಚಿತ್ರಗಳಿಗೇ ಪೈಪೋಟಿ ನೀಡಿದ್ದ ಈ ಕನ್ನಡ ಚಿತ್ರದ ಬಗ್ಗೆ ಪರಭಾಷಾ ಚಿತ್ರರಂಗದಲ್ಲಿಯೂ ಒಲವು ಹುಟ್ಟಿಕೊಂಡಿತ್ತು. ಇದೀಗ ಬಿಡುಗಡೆಯ ಕಡೇ ಕ್ಷಣಗಳಲ್ಲಿ ಬುಕ್ ಮೈ ಶೋನಲ್ಲಿಯೂ ಕೂಡಾ ಈ ಚಿತ್ರ ಟ್ರೆಂಡಿಂಗ್‍ನಲ್ಲಿದೆ. ಇದನ್ನು ನೋಡಲೇ ಬೇಕೆಂಬ ಪ್ರೇಕ್ಷಕರ ಉತ್ಸಾಹ ಎಂಥಾದ್ದಿದೆ ಅನ್ನೋದಕ್ಕೂ ಬುಕ್ ಮೈ ಶೋನಲ್ಲಿ ಸಾಕ್ಷಿಗಳಿವೆ.
ಇನ್ನು ಎಲ್ಲ ವರ್ಗದ ಪ್ರೇಕ್ಷರನ್ನೂ ಕೂಡಾ ನನ್ನ ಪ್ರಕಾರ ಈಗಾಗಲೇ ಆವರಿಸಿಕೊಂಡಿದೆ. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲು ಪ್ರೀತಿಯಿಂದ ಇದರ ಟ್ರೇಲರ್ ಅನ್ನು ಲಾಂಚ್ ಮಾಡಿದ್ದರು. ಖುದ್ದು ದರ್ಶನ್ ಅವರೇ ಅದನ್ನು ನೋಡಿ ಥ್ರಿಲ್ ಆಗಿದ್ದರು. ಈ ಚಿತ್ರ ದೊಡ್ಡಮಟ್ಟದಲ್ಲಿ ಗೆಲುವು ಕಾಣಲಿದೆ ಅನ್ನೋದರ ಸಂಕೇತದಂಥಾ ಮಾತುಗಳನ್ನೂ ಆಡಿದ್ದರು. ಆ ನಂತರದಲ್ಲಿಯಂತೂ ನನ್ನ ಪ್ರಕಾರ ಯೂಟ್ಯೂಬ್‍ನಲ್ಲಿಯೂ ವ್ಯಾಪಕ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಒಟ್ಟಾರೆಯಾಗಿ ಇದೊಂದು ಹೊಸಾ ಅಲೆಯ, ಪ್ರಯೋಗಾತ್ಮಕ ಅಂಶಗಳಿರೋ ಸಸ್ಪೆನ್ಸ್ ಥ್ರಿಲ್ಲರ್ ಆಗಿ ಪ್ರೇಕ್ಷಕರನ್ನು ಥೇಟರಿನತ್ತ ಸಾಗಿ ಬರುವಂತೆ ಮಾಡಿದೆ.