ಬೆಂಗಳೂರು: ಟೈಟಲ್ಲಿನಿಂದಲೇ ಮನಸೆಳೆಯುವುದು, ತಲೆಕೆಡಿಸಿಕೊಂಡು ಯೋಚಿಸುವಂತೆ ಮಾಡುವುದೇ ಯಶಸ್ಸಿನ ಮೊದಲ ಹೆಜ್ಜೆ ಎಂಬಂಥಾ ವಾತಾವರಣವೀಗ ಚಿತ್ರರಂಗದಲ್ಲಿದೆ. ಅದಕ್ಕೆ ತಕ್ಕುದಾದ ಚಿತ್ರಗಳೇ ಆಗಾಗ ತೆರೆ ಕಾಣುತ್ತಿರುತ್ತವೆ. ಇದೇ ಜಾಡಿನಲ್ಲಿ ಸಾಗಿ ಬಂದಿರೋ ‘ನನ್ನ ಪ್ರಕಾರ’ ಚಿತ್ರವೀಗ ಸೆನ್ಸಾರ್ ಮುಗಿಸಿಕೊಂಡು ತೆರೆ ಕಾಣುವ ಸನ್ನಾಹದಲ್ಲಿದೆ.
Advertisement
ವಿನಯ್ ನಿರ್ದೇಶನದ ಚೊಚ್ಚಲ ಪ್ರಯತ್ನವಾದ ಈ ಚಿತ್ರಕ್ಕೀಗ ಸೆನ್ಸಾರ್ ಕಡೆಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಯಾವುದೇ ಕಟ್ ಮತ್ತು ಮ್ಯೂಟುಗಳಿಲ್ಲದೆ ಸೆನ್ಸಾರ್ ಕಾರ್ಯವನ್ನು ಮುಗಿಸಿಕೊಂಡಿದೆ. ಖುದ್ದು ಸೆನ್ಸಾರ್ ಮಂಡಳಿ ಅಧಿಕಾರಿಗಳೇ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅದರಲ್ಲಿಯೂ ಸ್ಕ್ರೀನ್ ಪ್ಲೇ ಕುಸುರಿ ಹೊಸತನದಿಂದ ಕೂಡಿದೆ ಎಂದೂ ಸೆನ್ಸಾರ್ ಅಧಿಕಾರಿಗಳು ಕೊಂಡಾಡಿದ್ದಾರಂತೆ.
Advertisement
Advertisement
ಈಗಾಗಲೇ ಇರುವ ಪಾಸಿಟಿವ್ ರೆಸ್ಪಾನ್ಸ್ ಜೊತೆಗೆ ಸೆನ್ಸಾರ್ ಅಧಿಕಾರಿಗಳ ಮೆಚ್ಚುಗೆಯೂ ಸೇರಿಕೊಂಡು ಇಡೀ ಚಿತ್ರತಂಡ ಗೆಲುವಿನ ಭರವಸೆ ತುಂಬಿಕೊಂಡಿದೆ. ಜಿವಿಕೆ ಕಂಬೈನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ನನ್ನ ಪ್ರಕಾರದ ಮುಖ್ಯಭೂಮಿಕೆಯಲ್ಲಿ ಕಿಶೋರ್, ಪ್ರಿಯಾಮಣಿ ನಟಿಸಿದ್ದಾರೆ. ಮಯೂರಿ ಕೂಡಾ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದಾರಂತೆ.
Advertisement
ಹಾಗಾದರೆ ನನ್ನ ಪ್ರಕಾರ ಅಂದರೇನು? ಇದರ ಕಥೆ ಯಾವ ಥರದದ್ದೆಂಬ ಕುತೂಹಲ ಕಾಡದಿರೋದಿಲ್ಲ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಕೆಲವೇ ಕೆಲ ಮಾಹಿತಿಗಳಷ್ಟೇ ಸಿಗುತ್ತವೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರೋ ಚಿತ್ರ. ಇದಕ್ಕೊಂದು ರೋಚಕ ಕ್ರೈಂ ಬೇಸೂ ಇದೆಯಂತೆ. ಒಳ್ಳೆಯದ್ದನ್ನು ಮಾಡಿದರೆ ಒಳ್ಳೆಯದ್ದೇ ಆಗುತ್ತೆ. ಕೆಟ್ಟದ್ದಕ್ಕೆ ಕೆಟ್ಟ ಬಳುವಳಿಯೇ ಸಿಗುತ್ತದೆ ಎಂಬಂಥಾ ‘ಕರ್ಮ’ದ ಆಧಾರದಲ್ಲಿ ಈ ಕಥೆ ಚಲಿಸುತ್ತದೆಯಂತೆ.
ಒಟ್ಟಾರೆಯಾಗಿ ಪ್ರೇಕ್ಷಕರನ್ನು ಸದಾ ತುದಿ ಸೀಟಿಗೆ ತಂದು ಕೂರಿಸುವಂಥಾ ಥ್ರಿಲ್ಲರ್ ಅನುಭವವೊಂದು ಈ ಚಿತ್ರದಲ್ಲಿದೆ. ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡಿರುವ ಚಿತ್ರತಂಡ ಜುಲೈ ತಿಂಗಳಲ್ಲಿ ನನ್ನ ಪ್ರಕಾರವನ್ನು ತೆರೆಗೆ ತರುವ ಆಲೋಚನೆಯಲ್ಲಿದೆ.