ರಾಮನಗರ: ಇಡಿ ಕಸ್ಟಡಿಯಲ್ಲಿರುವ ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ನಂಜಾವಧೂತ ಸ್ವಾಮೀಜಿಗಳು ಧೈರ್ಯ ತುಂಬಿದ್ದಾರೆ.
ರಾಮನಗರದ ಕೋಡಿಹಳ್ಳಿಯ ಡಿಕೆ ಸುರೇಶ್ ನಿವಾಸಕ್ಕೆ ಭೇಟಿ ನೀಡಿದ ಸ್ವಾಮೀಜಿಗಳು ಗೌರಮ್ಮ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ನಂತರ ಡಿಕೆಶಿ ಬಂಧನದಿಂದ ನೋವಾಗಿದೆ. ಅವರು ಎಲ್ಲ ಸಮಸ್ಯೆಗಳಿಂದ ಮುಕ್ತರಾಗಿ ಬರುತ್ತಾರೆ. ಎದೆಗುಂದಬೇಡಿ ಎಂದು ಧೈರ್ಯದ ಮಾತುಗಳನ್ನು ಹೇಳಿದ್ದಾರೆ.
ಕನಕಪುರ ಶ್ರೀ ದೇಗುಲ ಮಠದ ನಿರ್ವಾಣ ಮಹಾಸ್ವಾಮಿ ಮಾತನಾಡಿ, ಡಿಕೆಶಿ ಬಂಧನ ಸುದ್ದಿ ಮನಸ್ಸಿಗೆ ಬಹಳ ನೋವು ತಂದಿದೆ. ಕಾಂಗ್ರೆಸ್ಸಿನಲ್ಲಿ ಏನೇ ಕೆಲಸ ವಹಿಸಿದ್ದರೂ ಡಿಕೆಶಿ ದಕ್ಷತೆಯಿಂದ ಮಾಡುತ್ತಿದ್ದರು. ವಿನಾಕಾರಣದಿಂದ ಇಡಿ ಡಿಕೆಶಿಯನ್ನು ಬಂಧಿಸಿದೆ. ಡಿಕೆಶಿ, ಸಹೋದರ ಸುರೇಶ್, ತಾಯಿ ಗೌರಮ್ಮ ತುಂಬಾ ದುಃಖ ಪಡುತ್ತಿದ್ದಾರೆ. ಪ್ರಾರ್ಥನೆ ಮೂಲಕ ಡಿಕೆಶಿ ಬಿಡುಗಡೆಗೆ ಶುಭ ಕೋರಿದ್ದೇವೆ. ಆದಷ್ಟು ಬೇಗ ಬಿಡುಗಡೆಯಾಗಲಿ ಅನ್ನೋದು ನಮ್ಮ ಅಪೇಕ್ಷೆಯಾಗಿದೆ ಎಂದರು.
ಡಿಕೆಶಿಯವರ ಬಂಧನದಿಂದ ಮಠದ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಅವರು ಬಂದ ಮುಕ್ತರಾಗಿ ಶೀಘ್ರವಾಗಿ ಬರಲಿ. ರಾಜಕಾರಣಿಗಳು ಯಾರೂ ದುಡ್ಡು ಮಾಡದೇ ಇರುವವರಲ್ಲ. ಇವರು ಸ್ವಲ್ಪ ಸಂಪಾದನೆ ಜಾಸ್ತಿ ಮಾಡಿದರು ಅನ್ನಿಸುತ್ತಿದೆ. ಅದಕ್ಕೆ ಈ ರೀತಿಯಾಗಿದೆ. ಪಕ್ಷದಿಂದ ನಾಯಕರ ಕಾರ್ಯಕ್ರಮಗಳಿಗೆ ಯಾರೂ ಹಣ ನೀಡಲ್ಲ. ಪಕ್ಷದ ಕಾರ್ಯಕ್ರಮಗಳಿಗೆ ಹಣವನ್ನ ನಾಯಕರೇ ಹೊಂದಿಸಬೇಕು. ಡಿಕೆಶಿ ಬಂಧನದಿಂದ ಸಾಕಷ್ಟು ಬೇಸರವಾಗಿದೆ, ಅವರು ಬಂಧಮುಕ್ತರಾಗಿ ಬರಲಿ. ದೇಗುಲ, ಮಠದ ಜೊತೆ ಡಿಕೆಶಿ ಅವಿನಭಾವ ಸಂಬಂಧ ಹೊಂದಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ನಾಲ್ಕು ದಿನಗಳ ವಿಚಾರಣೆಯ ನಂತರ ಮಂಗಳವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದೆ. ನಂತರ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಆ ನಂತರ ಬುಧವಾರ ಕೋರ್ಟ್ ಗೆ ಹಾಜರು ಪಡಿಸಿದ್ದು, 9 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು. ಸದ್ಯ ಇಡಿ ಅಧಿಕಾರಿಗಳಿಂದ ಡಿಕೆಶಿ ಬಂಧನವನ್ನು ಕಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.