ಚಿತ್ರದುರ್ಗ: ಈ ಸ್ಪರ್ಧಾ ಯುಗದಲ್ಲಿ ಬಹುಮಾನ ಗೆಲ್ಲಲು ತುಂಬಾ ಕಸರತ್ತು ಅಗತ್ಯವಿರುತ್ತದೆ. ಇದೀಗ ರಾಜ್ಯ ಮಟ್ಟದ ಪಶುಮೇಳದಲ್ಲಿ ನಂದಿದುರ್ಗ ಮೇಕೆಗೆ ದ್ವಿತೀಯ ಬಹುಮಾನ ಬಂದಿದೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಕಳೆದ ಫೆ. 07 ರಿಂದ ಫೆ.09 ರವರೆಗೆ ಬೀದರಿನಲ್ಲಿ ರಾಜ್ಯ ಮಟ್ಟದ ಪಶುಮೇಳದ ಜಾನುವಾರು ಪ್ರದರ್ಶನವನ್ನು ಏರ್ಪಡಿಸಿತ್ತು. ಈ ಪ್ರದರ್ಶನದಲ್ಲಿ ಚಿತ್ರದುರ್ಗ ತಾಲೂಕಿನ ಗೊಲ್ಲನಕಟ್ಟೆ ತಿಮ್ಮಣ್ಣ ಸಿದ್ದಪ್ಪ ಅವರ ನಂದಿದುರ್ಗ ಮೇಕೆ ತಳಿಗೆ ದ್ವಿತೀಯ ಬಹುಮಾನ ಲಭಿಸಿದೆ.
Advertisement
Advertisement
ಬೀದರಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪಶುಮೇಳದಲ್ಲಿ ಭಾಗವಹಿಸಲು ಜಿಲ್ಲೆಯ 6 ತಾಲೂಕುಗಳಿಂದ ತಲ 10 ರೈತರಂತೆ ಜಿಲ್ಲೆಯಿಂದ ಒಟ್ಟು 50 ರೈತರನ್ನು ಪಶುಮೇಳದಲ್ಲಿ ಪಾಲ್ಗೊಳ್ಳಲು ಪಶುಸಂಗೋಪನೆ ಇಲಾಖೆ ವ್ಯವಸ್ಥೆಗೊಳಿಸಿತ್ತು. ಈ ಮೇಳದಲ್ಲಿ ಏರ್ಪಡಿಸಿದ ಜಾನುವಾರು ಪ್ರದರ್ಶನ ಸ್ಪರ್ಧೆಗೆ ಜಿಲ್ಲೆಯಿಂದ ‘ನಂದಿದುರ್ಗ’ ಮೇಕೆ ತಳಿಯನ್ನು ಪ್ರದರ್ಶಿಸಲಾಗಿತ್ತು. ಇದಕ್ಕೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಬಂದಿದೆ. ಈ ಮೇಕೆಯ ಮಾಲೀಕ ಗೊಲ್ಲನಕಟ್ಟೆ ತಿಮ್ಮಣ್ಣನವರಿಗೆ ಪಶು ಮೇಳದಲ್ಲಿ ಪ್ರಶಸ್ತಿ ಪತ್ರವನ್ನು ವಿತರಣೆ ಮಾಡಲಾಗಿದೆ.
Advertisement
ನಂದಿದುರ್ಗ ಮೇಕೆ ತಳಿಯ ವಿಶೇಷತೆ:
ಬಹುಮಾನ ಪಡೆದಿರುವ ನಂದಿದುರ್ಗ ಮೇಕೆ ತಳಿಯ ವಿಶೇಷತೆ ಎಂದರೆ, ಇದರ ಮೂಲಸ್ಥಾನ ಚಿತ್ರದುರ್ಗ ಜಿಲ್ಲೆ. ಈ ತಳಿ ಬಿಳಿ ಬಣ್ಣದ್ದಾಗಿದ್ದು, ಸರಾಸರಿ ದೇಹದ ತೂಕ ಗಂಡು 26 ರಿಂದ 56 ಕೆ.ಜಿ., ಹೆಣ್ಣು 24 ರಿಂದ 41 ಕೆ.ಜಿ. ತೂಗುತ್ತದೆ. ಮೇಕೆಗಳ ಕೊಂಬುಗಳು ಹಿಮ್ಮುಖವಾಗಿರುತ್ತವೆ, ಕಿವಿಗಳು ನೇತಾಡುತ್ತಿರುತ್ತವೆ. ಇದು ಮುಖ್ಯವಾಗಿ ಮಾಂಸದ ತಳಿಯಾಗಿದ್ದು, ಸಾಮಾನ್ಯವಾಗಿ ಅವಳಿ ಮರಿಗಳಿಗೆ ಜನ್ಮ ನೀಡುತ್ತವೆ. ಇತ್ತೀಚೆಗಷ್ಟೇ ಇದಕ್ಕೆ ‘ನಂದಿದುರ್ಗ’ ತಳಿಯ ಸ್ಥಾನ ನೀಡಲಾಗಿದೆ.
Advertisement
ಜಿಲ್ಲೆಯಿಂದ ಪಶುಮೇಳದಲ್ಲಿ ಭಾಗವಹಿಸಿದ್ದ ಹಿರಿಯೂರು ತಾಲೂಕಿನ ಬೇತೂರಿನ ಪ್ರಗತಿ ಪರ ರೈತ ಚಂದ್ರಶೇಖರ್ ಅವರ ಕುರಿ ಮತ್ತು ಮೇಕೆ ಸಾಕಾಣಿಕೆ ಯಶೋಗಾಥೆಯ ಪ್ರದರ್ಶನ ಮೇಳದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಚಂದ್ರಶೇಖರ್ ಅವರ ಸಾಧನೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಶಂಸೆ ವ್ಯಕ್ತಪಡಿಸಿ, ಮೇಳದಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಇದು ಜಿಲ್ಲೆಯ ಪಾಲಿಗೆ ಹೆಮ್ಮೆಯ ಸಂಗತಿ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಟಿ. ಕೃಷ್ಣಪ್ಪ ಅವರು ತಿಳಿಸಿದ್ದಾರೆ.