ನಂದಿಗಿರಿಧಾಮದಲ್ಲಿ ಪ್ರವಾಸಿಗರು ಐಸ್ ಕ್ರೀಂ, ತಿಂಡಿ ತಿನ್ನಂಗಿಲ್ಲ

Public TV
2 Min Read
NANDI HILL 1

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮ ಅಂದ್ರೆ ಅದು ಪ್ರೇಮಿಗಳ ಪಾಲಿನ ಹಾಟ್ ಫೇವರಿಟ್ ತಾಣ. ಅಲ್ಲಿ ಸದಾ ಪ್ರೇಮ ಪಕ್ಷಿಗಳದ್ದೇ ಕಲರವ. ಆದರೆ ಆ ಪ್ರೇಮಧಾಮ ನಂದಿಗಿರಿಧಾಮಕ್ಕೆ ಬರೋ ಪ್ರೇಮಿಗಳು ಹಾಗೂ ಪ್ರವಾಸಿಗರಿಗೆ ಈಗ ರೌಡಿಗಳ ಕಾಟ ಶುರುವಾಗಿದೆ. ಅವರು ಅಂತಿಂಥ ರೌಡಿಗಳಲ್ಲ, ಮೈ ಮೇಲೆ ಎರಗ್ತಾರೆ, ಪರಚ್ತಾರೆ. ಕೇಳಿದ್ದನ್ನ ಕೊಡಲಿಲ್ಲ ಅಂದ್ರೆ ತಮಗೆ ಬೇಕಾದದ್ದನ್ನ ಬಲವಂತವಾಗಿ ಕಸಿದುಕೊಂಡು ಹೋಗ್ತಾ ಇರ್ತಾರೆ. ಹೊಂಚು ಹಾಕಿ ಪ್ರೇಮಿಗಳನ್ನ ಅಡ್ಡ ಹಾಕಿ ಐಸ್ ಕ್ರೀಂ ಕಸಿದುಕೊಳ್ಳೋ ಕೋತಿಗಳು ನಂದಿಗಿರಿಧಾಮದಲ್ಲಿ ಒಂದು ರೀತಿ ರೌಡಿಸಂ ಮಾಡುತ್ತಿವೆ.

Nandi Hill Monkey

ನಂದಿಗಿರಿಧಾಮದಲ್ಲಿ ಯಾರ ಕೈಯಲ್ಲಾದ್ರೂ ಐಸ್ ಕ್ರೀಂ ಕಂಡರೆ ಕೋತಿಗಳು ಎಂಟ್ರಿ ನೀಡುತ್ತವೆ. ಒಂದು ರೀತಿ ಹೆದರಿಸಿ ಕೈಯಲ್ಲಿರೋ ಐಸ್ ಕ್ರೀ ಕಸಿದುಕೊಂಡು ಓಡಿ ಹೋಗುತ್ತವೆ. ಕೇವಲ ಐಸ್ ಕ್ರೀ ಅಲ್ಲದೇ ಕೈಯಲ್ಲಿ ಯಾವುದೇ ತಿಂಡಿ ಇದ್ದರೂ ಕೋತಿಗಳು ಕಸಿದುಕೊಳ್ಳುತ್ತವೆ. ನಂದಿಗಿರಿಧಾಮದ ಸ್ಯಾಂಕಿ ವೃತ್ತದಲ್ಲಿ ಹೋಟೆಲ್ ಗಳು, ಅಂಗಡಿ ಮುಂಗಟ್ಟುಗಳು ಸೇರಿದಂತೆ ಐಸ್ ಕ್ರೀಂ ಪಾರ್ಲರ್ ಇದೆ. ಈ ಸ್ಯಾಂಕಿ ವೃತ್ತದ ಅಂಗಡಿ, ಹೋಟೆಲ್ ಗಳ ಮೇಲೆ ಕೂತು ಹೊಂಚು ಹಾಕೋ ಕೋತಿಗಳು, ಪ್ರವಾಸಿಗರು ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಖರೀದಿಸಿಕೊಂಡು ಬಂದ್ರೆ ಸಾಕು ಅಟ್ಯಾಕ್ ಮಾಡಿ ಬಿಡುತ್ತವೆ.

Nandi Hill Monkey 1

ಕೈಯಲ್ಲಿರೋ ತಿಂಡಿ ಕೊಡದಿದ್ದರೆ ಮೈ ಮೇಲೆ ಎರಗಿ ಪರಚಿ ಕಚ್ಚೇಬಿಡ್ತವೆ ಅನ್ನೋ ಭಯದಿಂದ ಪ್ರವಾಸಿಗರು ಕೊಟ್ಟು ಸುಮ್ಮನಾಗುತ್ತಾರೆ. ಈ ಕೋತಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಸಹ ಕೋತಿಗಳಿಗೆ ಹೇಗೆ ಕಡಿವಾಣ ಹಾಕೋದು ಅಂತ ಗೊತ್ತಾಗ್ತಿಲ್ಲ ಅಂತ ತಮ್ಮ ಅಸಾಹಯಕತೆಯನ್ನ ತೋಡಿಕೊಳ್ಳುತ್ತಿದ್ದಾರೆ.

Nandi Hill Monkey 2

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಂದಿಗಿರಿಧಾಮದ ವಿಶೇಷಾಧಿಕಾರಿ, ಅಕ್ಕ ಪಕ್ಕದ ಬೆಟ್ಟ ಗುಡ್ಡಗಳಲ್ಲಿ ಕೋತಿಗಳಿಗೆ ತಿನ್ನೋಕೆ ಆಹಾರ ಇಲ್ಲ. ಹೀಗಾಗಿ ಸರಿ ಸುಮಾರು 3000 ಕ್ಕೂ ಹೆಚ್ಚು ಕೋತಿಗಳು ನಂದಿಬೆಟ್ಟದಲ್ಲಿ ಗುಂಪು ಗುಂಪುಗಳಾಗಿ ಬಂದು ಬೀಡುಬಿಟ್ಟಿವೆ. ಕೋತಿಗಳ ಮೂಕರೋಧನಕ್ಕೆ ಮನಸೋತ ಕೆಲವರು ಹಣ್ಣು ಹಂಪಲು ತಂದು ಹಾಕೋದು ಉಂಟು. ಆದರೆ ಅದು ಸಾಕಾಗುತ್ತಿಲ್ಲ ಅಂತ ಕೋತಿಗಳು ಪ್ರವಾಸಿಗರ ಬಳಿ ಈ ರೀತಿ ರೌಡಿಸಂ ಮಾಡ್ತಾ ಕಸಿದುಕೊಂಡೋ ತಿನ್ನೋ ಕೆಲಸ ಮಾಡುತ್ತಿವೆ. ಆದರೆ ಅವುಗಳಿಗೆ ಹೇಗೆ ಕಡಿವಾಣ ಹಾಕಬೇಕು ಅನ್ನೋದು ನಮಗೂ ಗೊತ್ತಾಗ್ತಿಲ್ಲ ಅಂತ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *