ಹಾವೇರಿ: ಆತ ಎರಡೂ ಕಣ್ಣುಗಳು ಕಾಣದಿರೋ ಅಂಧ. ಬೆಳಕನ್ನೇ ಕಾಣದ ಇಂಥವರಿಗೆ ಮದುವೆ ಅನ್ನೋದು ಕನಸಿನ ಮಾತು. ಇಂಥಾ ಅಂಧ ಯುವಕನನ್ನ ಕೈ ಹಿಡಿಯೋ ಮೂಲಕ ಯುವತಿಯೊಬ್ಬಳು ಆತನ ಬೆಳಕಾಗಿದ್ದಾಳೆ. ಎಸ್‍ಎಸ್‍ಎಲ್‍ಸಿವರೆಗೆ ಓದಿಕೊಂಡಿದ್ದ ಯುವತಿ ಅಂಧ ಯುವಕನನ್ನ ಕೈ ಹಿಡಿಯೋ ಮೂಲಕ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾಳೆ.
ಕಣ್ಣುಗಳೆ ಕಾಣದ ಯುವಕ. ಅಂಧನನ್ನ ಕೈ ಹಿಡಿದ ಯುವತಿ ಸಂಪ್ರಾದಾಯದಂತೆ ನಡೆದ ಮದುವೆ. ಹೌದು ಇಂಥಾ ಅಪರೂಪದ ದೃಶ್ಯಗಳು ಕಂಡುಬಂದಿದ್ದು ಹಾವೇರಿ ನಗರದಲ್ಲಿರೋ ಹರಸೂರು ಬಣ್ಣದ ಮಠದಲ್ಲಿ. ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಯುವತಿ ನಂದಾ ಮತ್ತು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಹಾಲಕುಸುಗಲ್ ಗ್ರಾಮದ ಜಗದೀಶ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ರು. ಜಗದೀಶ ಬಾಲ್ಯದಲ್ಲೇ ಕಣ್ಣುಗಳನ್ನ ಕಳೆದುಕೊಂಡು ಬೆಳಕನ್ನೆ ಕಾಣದಂತೆ ಕತ್ತಲಲ್ಲಿ ಬದುಕು ಸಾಗಿಸ್ತಿದ್ದ. ಇಬ್ಬರು ಅಕ್ಕಂದಿರಿಗೂ ಮದುವೆ ಆಗಿದ್ದು, ಹುಟ್ಟು ಕುರುಡನಾಗಿದ್ದ ಜಗದೀಶನಿಗೆ ಮದುವೆ ಅನ್ನೋದು ಕನಸಾಗೇ ಉಳಿದಿತ್ತು. ಆದ್ರೆ ಇದೀಗ ಇಬ್ಬರ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ನಂದಾ ಅಂಧ ಯುವಕನನ್ನ ಕೈ ಹಿಡಿದು ಸಪ್ತಪದಿ ತುಳಿದಿದ್ದಾಳೆ.
ಜಗದೀಶ ಮತ್ತು ನಂದಾ ಕುಟುಂಬದ ನೂರಾರು ಜನರು ಮದುವೆಗೆ ಆಗಮಿಸಿದ್ರು. ಎಲ್ಲ ಮದುವೆಗಳಂತೆ ಜಗದೀಶ ಮತ್ತು ನಂದಾ ಮದುವೆಯನ್ನ ನೆರವೇರಿಸಲಾಯ್ತು. ಹಿಂದೂ ಸಂಪ್ರದಾಯದಂತೆ ಇಬ್ಬರಿಗೂ ಬಾಸಿಂಗ ಕಟ್ಟಿದ್ರು. ಇಬ್ಬರು ಪರಸ್ಪರ ಹಾರ ಬದಲಿಸಿಕೊಂಡರು. ನಂತರ ತಾಳಿ ಕಟ್ಟೋ ಮೂಲಕ ನಂದಾಳನ್ನ ನೂತನ ಬಾಳಿಗೆ ಸ್ವಾಗತಿಸಿದ. ಜಗದೀಶ ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ ಓದಿಕೊಂಡಿದ್ದಾನೆ. ಅಂಧನ ಬಾಳನ್ನ ನಂದಾ ಬೆಳಕು ಆಗಿದ್ದು ಜಗದೀಶ ಮತ್ತು ಆತನ ಮನೆಯವರಿಗೆ ಸಂತಸ ಮೂಡಿಸಿದೆ.
ಜಗದೀಶ ಓದಿನಲ್ಲಿ ಸಾಕಷ್ಟು ಬುದ್ಧಿವಂತನಾಗಿದ್ದ. ಆದ್ರೆ ಅಂಧ ಅನ್ನೋ ಕಾರಣಕ್ಕೆ ಜಗದೀಶನಿಗೆ ಮದುವೆಯಾಗಿರಲಿಲ್ಲ. ಈಗ ನಂದಾ ಅನ್ನೋ ಯುವತಿ ಮನೆಯವರ ಒಪ್ಪಿಗೆಯ ಮೇರೆಗೆ ಜಗದೀಶನನ್ನ ಮದುವೆ ಆಗೋ ಮೂಲಕ ಆತನ ಬಾಳಲ್ಲಿ ಹೊಸ ಭರವಸೆ ಮೂಡಿಸಿದ್ದಾಳೆ.