‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ನಮ್ರತಾ ಗೌಡ (Namrata), ಬಿಗ್ ಬಾಸ್ (Bigg Boss Kannada) ವೇದಿಕೆಗೆ ಕಾಲಿಟ್ಟಿದ್ದು ‘ಡೊಂಟ್ ಯು ನೋ… ಐ ಆಮ್ ವೆರಿ ಸೆಕ್ಸಿ’ ಎಂದು ಹಾಡುತ್ತ… ಸೌಂದರ್ಯ, ಆತ್ಮವಿಶ್ವಾಸ ಮತ್ತು ಸ್ಪಷ್ಟತೆಯ ಹದವಾದ ಮಿಶ್ರಣದಂತೆ ಕಾಣಿಸಿದ್ದ ನಮ್ರತಾ ಅವರಿಗೆ ಪ್ರೀಮಿಯರ್ ವೇದಿಕೆಯಲ್ಲಿ ಶೇಕಡಾ ಮತಗಳು ಬಂದಿದ್ದವು. ಈ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಅವರು ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟಿದ್ದರು. ‘ಹ್ಯಾಪಿ ಬಿಗ್‌ಬಾಸ್’ ಎಂಬ ಟ್ಯಾಗ್‌ಲೈನ್ ಅನ್ನು ತಮ್ಮ ವ್ಯಕ್ತಿತ್ವಕ್ಕೂ ನೇತುಹಾಕಿಕೊಂಡಂತಿದ್ದ ನಮ್ರತಾ ಅವರು ಸದಾ ನಗುನಗುತ್ತಲೇ ಎಲ್ಲರ ಗಮನ ಸೆಳೆದಿದ್ದರು.
Advertisement
ಬಿಗ್‌ಬಾಸ್ ಮನೆಯೊಳಗೆ ದಿನಗಳನ್ನು ಕಳೆಯಲಾರಂಭಿಸಿದಂತೆ, ವಿನಯ್, ತುಕಾಲಿ ಸಂತೋಷ್, ಇಶಾನಿ, ಮೈಕಲ್, ಸ್ನೇಹಿತ್, ಗೌರಿಶ್ ಮತ್ತು ಸಿರಿ ಅವರ ಜೊತೆಗೆ ಆಪ್ತರಾಗಿದ್ದರು. ‘ಶಾಡೋ’, ‘ಚಮಚ’ ‘ಇನ್‌ಪ್ಲ್ಯೂಯೆನ್ಸ್ ಆಗುವವರು’ ಪದೇ ಪದೇ ಇಂಥ ಮಾತುಗಳನ್ನು ಕೇಳುತ್ತಲೇ ಬಂದ ನಮ್ರತಾ, ಬಿಗ್‌ಬಾಸ್ ಮನೆಯಲ್ಲಿ ಹದಿನೈದು ವಾರಗಳನ್ನು ಉಳಿದುಕೊಂಡಿರುವುದೇ ಈ ಎಲ್ಲವಕ್ಕೂ ಉತ್ತರದಂತಿತ್ತು.
Advertisement
Advertisement
ಈ ಸೀಸನ್‌ನಲ್ಲಿ ಹಲವು ಏಳುಬೀಳುಗಳನ್ನು ಹಾದು ಅಂತಿಮ ಹಂತಕ್ಕೆ ಒಂದೇ ಹೆಜ್ಜೆ ಉಳಿದಿರುವಾಗ ನಮ್ರತಾ ಮನೆಯಿಂದ ಹೊರಬಿದ್ದಿದ್ದಾರೆ. ಕೊನೆಕೊನೆಯ ದಿನಗಳಲ್ಲಿ ಅವರ ಆಟದ ವೈಖರಿಯನ್ನು ಕಂಡು ಹಿಂದೆ ಜರಿದವರೇ ಅವರನ್ನು ಹೊಗಳಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಅವರ ಜರ್ನಿಯ JioCinemaದಲ್ಲಿ ಕಂಡ ಒಂದು ಕಿರುನೋಟ ಇಲ್ಲಿದೆ. ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್‌ಗಳಲ್ಲಿ ನಮ್ರತಾ ಅವರ ಕಾಂಟ್ರಿಬ್ಯೂಷನ್ ದೊಡ್ಡದಿದೆ. ‘ಹೂಂ ಅಂತಿಯಾ ಊಹೂಂ’ ಅಂತಿಯಾ ಟಾಸ್ಕ್‌ನಲ್ಲಿ ಆನೆಗೆ ನಿಖರವಾಗಿ ಬಾಲ ಬಿಡಿಸುವುದರ ಮೂಲಕ ಅವರು ಗಮನಸೆಳೆದಿದ್ದರು. ಗೇಮ್ ಆಡುವುದು, ಜೊತೆಗೆ ಆಡುವ ಆಟಗಾರರಿಗೆ ಪ್ರೋತ್ಸಾಹಿಸುವುದು ಈ ಎರಡರಲ್ಲಿಯೂ ನಮ್ರತಾ ಅವರದ್ದು ಎತ್ತಿದ ಕೈ. ‘ಹುಡುಕಿ ತಂದವರೇ ಮಹಾಶೂರ’ ಟಾಸ್ಕ್‌ನಲ್ಲಿ ಅವರು ತೋರಿದ ಚಾಕಚಕ್ಯತೆ ಅವರ ತಂಡಕ್ಕೆ ದೊಡ್ಡ ಬಲ ತಂದಿತ್ತಿತ್ತು.
Advertisement
ತನಿಷಾ ಜೊತೆಗೆ ಕ್ಲಾಶ್
ಈ ಸೀಸನ್‌ನ ಆರಂಭದ ದಿನಗಳಲ್ಲಿ ನಮ್ರತಾ ವಿನಯ್ ಮತ್ತು ಇಶಾನಿ ಅವರನ್ನು ಸಾಕಷ್ಟು ಹಚ್ಚಿಕೊಂಡಿದ್ದರು. ಅದರಲ್ಲಿಯೂ ವಿನಯ್ ಅವರ ಜೊತೆಗಿನ ಅವರ ಬಾಂಧವ್ಯ ಕೊನೆಯ ದಿನದವರೆಗೂ ಕಿಂಚಿತ್ ಊನಗೊಳ್ಳದೆ ಬೆಳೆದುಕೊಂಡು ಬಂದಿತ್ತು. ಕ್ರಿಕೆಟ್ ಟಾಸ್ಕ್‌ನಲ್ಲಿ ತನಿಷಾ ಜೊತೆಗೆ ನಡೆದ ಮಾತಿನ ಚಕಮಕಿ ನಮ್ರತಾ ಅವರ ವ್ಯಕ್ತಿತ್ವದ ಮತ್ತೊಂದು ಸ್ಟ್ರಾಂಗ್ ಆಯಾಮವನ್ನು ಜನರೆದುರು ತೆರೆದಿಟ್ಟಿತ್ತು. ಹಾಗೆಯೇ ‘ಹಳ್ಳಿಮನೆ’ ಟಾಸ್ಕ್‌ನಲ್ಲಿಯೂ ತನಿಷಾ ಜೊತೆಗೆ ನಮ್ರತಾ ಮಾತಿನ ಚಕಮಕಿ ಜೋರಾಗಿಯೇ ನಡೆದಿತ್ತು. ಈ ಚಕಮಕಿ ಬೆಂಕಿಯಾಗಿ ಹೊತ್ತಿಕೊಂಡು ಮನೆಯ ನೆಮ್ಮದಿಯನ್ನೇ ಕೆಡಿಸಿದ್ದು, ಬಿಗ್‌ಬಾಸ್ ಮನೆಯ ಆಚೆಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಸಂಗೀತಾ ಮತ್ತು ತನಿಷಾ ಜೊತೆಗೆ ಅಂದು ಹುಟ್ಟಿಕೊಂಡಿದ್ದ ಭಿನ್ನಾಭಿಪ್ರಾಯದ ಕಿಡಿ ಆರಲು ಸಾಕಷ್ಟು ದಿನಗಳನ್ನೇ ತೆಗೆದುಕೊಂಡಿತು. ತನಿಷಾ ಮನೆಯಿಂದ ಹೊರಗೆ ಹೋಗುವ ಹೊತ್ತಿನಲ್ಲಿಯೂ ನಮ್ರತಾ ಅವರನ್ನೇ ನಾಮಿನೇಟ್ ಮಾಡಿದ್ದು ಇದಕ್ಕೊಂದು ಉದಾಹರಣೆ. ಆದರೆ ಸಂಗಿತಾ ಜೊತೆಗಿನ ಅವರ ಹಳಸಿದ್ದ ಸಂಬಂಧ ಕೊನೆದಿನಗಳಲ್ಲಿ ಸರಿಹೋಗಿತ್ತು. ನಮ್ರತಾ ಹಲವು ಸಲ ಕುಗ್ಗಿದಾಗ ಸಂಗೀತಾ ಹೆಗಲೆಣೆಯಾಗಿ ನಿಂತು ಸಂತೈಸಿದ್ದರು.
ಸ್ನೇಹಿತ್ ಜೊತೆಗಿನ ಮಧುರ ಬಾಂಧವ್ಯ
ಈ ಸೀಸನ್‌ನಲ್ಲಿ ನಮ್ರತಾ ನಂತರ ಮನೆಯೊಳಗೆ ಹೊಕ್ಕಿದ್ದು ಸ್ನೇಹಿತ್. ಮನೆಯೊಳಗೆ ಪರಸ್ಪರ ಎಲ್ಲರಿಗಿಂತ ಮೊದಲು ಮೀಟ್ ಆಗಿದ್ದ ಅವರ ನಡುವಿನ ಬಾಂಧವ್ಯ ನಂತರದ ದಿನಗಳಲ್ಲಿಯೂ ಮುಂದುವರಿದಿತ್ತು. ಅದರಲ್ಲಿಯೂ ಸ್ನೇಹಿತ್ ಅವರಂತೂ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ‘ನಿಮ್ಮ ಬಗ್ಗೆ ನನಗೆ ಸೀರಿಯಸ್ ಆಗಿ ಒಲವಿದೆ’ ಎಂಬರ್ಥದ ಮಾತುಗಳನ್ನು ಆಡಿಯೂ ಇದ್ದರು. ಸದಾ ಕಾಲ ನಮ್ರತಾ ಹಿಂದೆ ಸುತ್ತುತ್ತ, ಸಮಯ ಸಿಕ್ಕಾಗೆಲ್ಲ ಅವರನ್ನು ಹೊಗಳುತ್ತ, ಅವರಿಗೆ ಸಹಾಯ ಮಾಡುತ್ತ ಕೆಲವೊಮ್ಮೆ ಕಿರಿಕಿರಿಯಾಗುಷ್ಟು ಜೊತೆಗಿದ್ದರು ಸ್ನೇಹಿತ್. ನಮ್ರತಾ ಮಾತ್ರ ಅವರನ್ನು ತಮಾಷೆಯಾಗಿಯೇ ನೋಡುತ್ತ, ಅವರ ಮಾತಿಗೆಲ್ಲ ನಗುನಗುತ್ತಲೇ ಹಾರಿಕೆಯ ಉತ್ತರ ನೀಡುತ್ತಿದ್ದರು.
ತಾವು ಎಲಿಮಿನೇಟ್ ಆಗುವ ವಾರದಲ್ಲಿ ಪಡೆದ ವಿಶೇಷ ಅಧಿಕಾರವನ್ನೂ ಸ್ನೇಹಿತ್, ನಮ್ರತಾ ಅವರನ್ನು ಇಂಪ್ರೆಸ್ ಮಾಡುವ ರೀತಿಯಲ್ಲಿಯೇ ಉಪಯೋಗಿಸಿದ್ದು ಮನೆಯ ಉಳಿದವರ ಅಸಮಧಾನಕ್ಕೂ ಕಾರಣವಾಗಿತ್ತು. ಆದರೆ ಸ್ನೇಹಿತ್ ಎಲಿಮಿನೇಟ್ ಆಗುವ ಸುದ್ದಿ ಕೇಳುತ್ತಿದ್ದ ಹಾಗೆಯೇ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಹೋಗುವಾಗ ‘ಇನ್ನು ಮೇಲೆ ನೀವು ನಿಮಗೊಬ್ಬರಿಗೆ ಮಾತ್ರವಲ್ಲ, ನನ್ನ ಪರವಾಗಿಯೂ ಆಡುತ್ತಿದ್ದೀರಿ. ಆಡಿ ಗೆದ್ದು ಬನ್ನಿ’ ಎಂದು ಹೇಳಿಯೇ ಸ್ನೇಹಿತ್ ಹೊರಗೆ ಹೋಗಿದ್ದರು. ಸ್ನೇಹಿತ್ ಅವರ ನೆನಪಿಗಾಗಿ ಅವರು ಕಾಫಿ ಕುಡಿಯುತ್ತಿದ್ದ ಕಪ್ ಅನ್ನು ನಮ್ರತಾ ಉಳಿಸಿಕೊಂಡಿದ್ದರು. ಅಲ್ಲದೆ, ಮನೆಯಲ್ಲಿದ್ದಾಗ ಅವರ ಜೊತೆಗೆ ನಡೆದುಕೊಂಡು ರೀತಿಯ ಬಗ್ಗೆ ಪಶ್ಚಾತ್ತಾಪದಿಂದ ಮಾತಾಡಿದ್ದರು. ತಾವು ಕ್ಯಾಪ್ಟನ್ ಆದಾಗಲೂ ಅದನ್ನು ಸ್ನೇಹಿತ್ ಅವರಿಗೆ ಅರ್ಪಿಸಿದ್ದರು.