ಧಾರವಾಡ: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 10 ನೇ ತರಗತಿಯ ಮಕ್ಕಳಿಗೆ ಉಚಿತ ಸೌರ ಅಧ್ಯಯನ ದೀಪಗಳನ್ನು ನೀಡುತ್ತಿರುವುದಾಗಿ ನಮ್ಮ ಮಿತ್ರ ಫೌಂಡೇಷನ್ ಸಂಸ್ಥಾಪಕರಾದ ಡಾ.ಸೀಮಾ ಸಾಧಿಕಾ ಹೇಳಿದ್ದಾರೆ.
`ಕತ್ತಲಿನಿಂದ ಬೆಳಕಿನೆಡೆಗೆ’ ಎನ್ನುವ ಉದ್ದೇಶದಿಂದ ಮಕ್ಕಳು ಸರಿಯಾಗಿ ಓದಿ ಉತ್ತಮ ಫಲಿತಾಂಶ ಗಳಿಸಲೆಂದು ಉಚಿತವಾಗಿ ಈ ಸೌರ ದೀಪಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ ನವಲಗುಂದ, ಕುಂದಗೋಳ ಮತ್ತು ಕಲಘಟಗಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದಾಗ ಮಕ್ಕಳು ಸರಿಯಾಗಿ ಓದಲು ಬೆಳಕಿನ ವ್ಯವಸ್ಥೆ ಇಲ್ಲದಿರುವುದಾಗಿ ತಿಳಿಸಿದ್ದರು ಹಾಗಾಗಿ ಸೌರ ದೀಪಗಳನ್ನು ನೀಡುತ್ತಿದ್ದೇವೆ ಎಂದು ಡಾ.ಸೀಮಾ ಹೇಳಿದರು.
Advertisement
ಹೇಗಿರಲಿವೆ ಸೋಲಾರ್ ಲ್ಯಾಂಪ್‍ಗಳು: ನಾಲ್ಕು ಗಂಟೆಗಳ ಕಾಲ ಬೆಳಕು ಒದಗಿಸುವ ಶಕ್ತಿ ಹೊಂದಿರುವ ಸುಮಾರು 500 ಸೌರ ದೀಪಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ. ಈ ದೀಪಗಳು 3 ವರ್ಷಗಳವರೆಗೆ ಯಾವುದೇ ದೋಷವಿಲ್ಲದೆ ಬಾಳಿಕೆ ಬರುವುದಾಗಿದ್ದು ಉತ್ತಮ ಸೇವೆಯನ್ನು ಒದಗಿಸಬಲ್ಲ ಶಕ್ತಿಯನ್ನು ಹೊಂದಿವೆ. 495 ರೂ. ಬೆಲೆಯುಳ್ಳ ಈ ಸೌರ ದೀಪಗಳು ಕೇವಲ ಬೆಳಕಿನಿಂದ ಚಾರ್ಜ್ ಆಗುವ ಸಾಮರ್ಥ್ಯ ಹೊಂದಿವೆ.
Advertisement
ಫೆಬ್ರವರಿ 08 ರಂದು ಕಲಘಟಗಿಯ ಬಿಇಓ ಕಚೇರಿಯಲ್ಲಿ ಮತ್ತು ನವಲಗುಂದದ ಮಾರ್ಡನ್ ಹೈಸ್ಕೂಲ್ ನಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸೌರ ದೀಪಗಳನ್ನು ನೀಡಲಾಗುವುದು. ಫೆಬ್ರವರಿ 09 ರಂದು ಹುಬ್ಬಳ್ಳಿ ಶಹರ, ಗ್ರಾಮೀಣ, ಧಾರವಾಡ ನಗರದ ಬಿಇಓ ಕಚೇರಿಯಲ್ಲಿ ಮತ್ತು ಗ್ರಾಮೀಣ ಆಫೀಸ್ ಗಳಲ್ಲಿ ಸೌರದೀಪಗಳನ್ನು ವಿತರಿಸಲಾಗುವುದು ಎಂದು ಡಾ.ಸೀಮಾ ತಿಳಿಸಿದ್ದಾರೆ.