ಬೆಂಗಳೂರು: ನಮ್ಮ ಮೆಟ್ರೋ ಅಧಿಕಾರಿಗಳ ಹೊಸ ನಿಯಮಕ್ಕೆ ಪ್ರಯಾಣಿಕರು ಫುಲ್ ಗರಂ ಆಗಿದ್ದು, ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮೆಟ್ರೋ ಕಾರ್ಡಲ್ಲಿ ಕನಿಷ್ಠ 50 ರೂ. ಚಾರ್ಜ್ ಇರಲೇ ಬೇಕೆಂಬ ನಿಯಮವನ್ನು ಮೆಟ್ರೋ ಅಧಿಕಾರಿಗಳು ಜಾರಿ ಮಾಡಿದ್ದು, ಈ ಹಿಂದೆ ಇದ್ದ 8 ರೂ.ಗಳನ್ನು ಏಕಾಏಕಿ 50 ರೂ.ಗೆ ಹೆಚ್ಚಳ ಮಾಡಿದ್ದಾರೆ. ಕನಿಷ್ಠ ಬ್ಯಾಲೆನ್ಸ್ ಇಲ್ಲವಾದರೆ ಮೆಟ್ರೋ ಪ್ರವೇಶ ದ್ವಾರ ಓಪನ್ ಆಗಲ್ಲ. ಯಾವುದೇ ಪೂರ್ವ ಮಾಹಿತಿ ಇಲ್ಲದೆ, ದಿಢೀರ್ ನಿಯಮ ಜಾರಿ ಮಾಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ಮಾತ್ರವಲ್ಲೇ ಮಹಾಕವಿ ಕುವೆಂಪು ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಕೂಡ ಜಮಾಯಿಸಿದ ನೂರಾರು ಪ್ರಯಾಣಿಕರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಸಾರ್ವಜನಿಕರ ಹಣವನ್ನು ಲೂಟಿಗಿಳಿದಿದ್ದಾರೆ ಎಂದು ಆರೋಪ ಮಾಡಿದರು. ಈ ನಡುವೆ ಪ್ರತಿಭಟನೆಗೆ ಪೊಲೀಸರು ಮನವೊಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಜನರ ನಡುವೆ ವಾಗ್ವಾದ ನಡೆಯಿತು.