– ಮೆಟ್ರೋ ಅವಧಿ ವಿಸ್ತರಿಸಿದ ಬಿಎಂಆರ್‌ಸಿಎಲ್
– ಬಿಎಂಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ
ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಕ್ರಿಕೆಟ್ ಟೂರ್ನಿಯ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಪಡೆದಿದೆ. ಇದರೊಂದಿಗೆ ಸರಣಿ 1-1 ಅಂತರದಲ್ಲಿ ಸಮಬಲವಾಗಿದ್ದು, ಸರಣಿ ಗೆಲ್ಲಲು ಭಾನುವಾರ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯ ಇತ್ತಂಡಗಳಿಗೂ ಮಹತ್ವ ಎನಿಸಿದೆ.
ಜ.19ರ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3ನೇ ಪಂದ್ಯ ನಡೆಯಲಿದೆ. ಈಗಾಗಲೇ ಕ್ರಿಕೆಟ್ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿ ರೋಚಕ ಹೋರಾಟವನ್ನು ಸವಿಯಲು ಸಿದ್ಧರಾಗಿದ್ದಾರೆ. ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಸಂಚಾರ ಸಮಯ ವಿಸ್ತರಣೆ ಮಾಡಿದೆ.
Advertisement
Advertisement
ಕಬ್ಬನ್ ಪಾರ್ಕ್ ನಿಲ್ದಾಣದಿಂದ ನಾಗಸಂದ್ರ ಮತ್ತು ಯಲಚೇನಹಳ್ಳಿ ನಿಲ್ದಾಣದ ಕಡೆಗೆ ಪ್ರಯಾಣಿಸುವ ಹಾಗೂ ನಾಡಪ್ರಭು ಕೆಂಪೇಗೌಡ ನಿಲ್ದಾಣ ಇಂಟರ್ ಚೇಂಜ್ ನಿಲ್ದಾಣದಿಂದ ಕೊನೆಯ ಸೇವೆಯು ರಾತ್ರಿ 12 ಗಂಟೆಗೆ ಇರಲಿದೆ. ಪಂದ್ಯಾವಳಿ ಮುಗಿದ ನಂತರ ತ್ವರಿತವಾಗಿ ಪ್ರಯಾಣಿಸಲು, ಪ್ರಯಾಣಿಕರ ಅನುಕೂಲಕ್ಕೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್‍ಗಳನ್ನು ಬಿಎಂಆರ್‌ಸಿಎಲ್ ಪರಿಚಯಿಸಿದೆ.
Advertisement
ಕಬ್ಬನ್‍ಪಾರ್ಕ್ ಮೆಟ್ರೋ ರೈಲು ನಿಲ್ದಾಣದಿಂದ ಇತರೆ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ ಮಾಡುವ ಸಂದರ್ಭದಲ್ಲಿ 50 ರೂ. ಪೇಪರ್ ಟಿಕೆಟನ್ನು ನೀಡಲಾಗುತ್ತದೆ. ಪ್ರಯಾಣಿಕರು ಕ್ರಿಕೆಟ್ ಪಂದ್ಯಾವಳಿ ಪ್ರಾರಂಭಕ್ಕೆ ಮೊದಲು ಭಾನುವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಯಾವುದೇ ಮೆಟ್ರೋ ನಿಲ್ದಾಣದಿಂದ ಪೇಪರ್ ಟಿಕೆಟ್ ಖರೀದಿಸಬಹುದು.
Advertisement
ಇತ್ತ ಬಿಎಂಟಿಸಿ ಕೂಡ ಪ್ರಯಾಣಿಕರ ಅನುಕೂಲಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಭಾನುವಾರದಂದು ರಾತ್ರಿ 11.30 ರವರೆಗೂ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದೆ. ಯಾವ ಮಾರ್ಗದಿಂದ ವಿಶೇಷ ಸಂಚಾರ ಇರಲಿದೆ ಎಂಬ ಮಾಹಿತಿ ಇಂತಿದೆ.
ಮಾರ್ಗ ಸಂಖ್ಯೆ SBS-1K ಚಿನ್ನಸ್ವಾಮಿ ಸ್ಟೇಡಿಯಂನಿಂದ ಟ್ರಿನಿಟಿ ಸರ್ಕಲ್, ದೊಮ್ಮಲೂರು, ಎಚ್‍ಎಎಲ್, ಮಾರತ್ತಹಳ್ಳಿ ಮಾರ್ಗವಾಗಿ ಕಾಡುಗೋಡಿ ಬಸ್ ನಿಲ್ದಾಣಕ್ಕೆ ಹಾಗೂ ಮಾರ್ಗ ಸಂಖ್ಯೆ ಉ-2 ಚಿನ್ನಸ್ವಾಮಿ ಸ್ಟೇಡಿಯಂನಿಂದ ವಿವೇಕನಗರ, ಕೋರಮಂಗಲ, ಅಗರ ಮಾರ್ಗವಾಗಿ ಸರ್ಜಾಪುರಕ್ಕೆ ತಲುಪಲಿದೆ.
ಮಾರ್ಗ ಸಂಖ್ಯೆ ಉ-3 ಚಿನ್ನಸ್ವಾಮಿ ಸ್ಟೇಡಿಯಂನಿಂದ ಆಡುಗೋಡಿ, ಮಡಿವಾಳ, ಬೊಮ್ಮನಹಳ್ಳಿ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ತಲುಪಲಿದೆ. ಮಾರ್ಗ ಸಂಖ್ಯೆ ಉ-4 ಚಿನ್ನಸ್ವಾಮಿ ಸ್ಟೇಡಿಯಂನಿಂದ ಆಡುಗೋಡಿ, ಜಯದೇವ ಆಸ್ಪತ್ರೆ, ಹುಳಿಮಾವು ಗೇಟ್ ಮಾರ್ಗವಾಗಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗೆ ತಲುಪಲಿದೆ.
ಮಾರ್ಗ ಸಂಖ್ಯೆ ಉ-6 ಚಿನ್ನಸ್ವಾಮಿ ಸ್ಟೇಡಿಯಂನಿಂದ ಮೈಸೂರು ರಸ್ತೆ, ನಾಯಂಡಹಳ್ಳಿ, ಕೆಂಗೇರಿ ಮಾರ್ಗವಾಗಿ ಕೆಂಗೇರಿ ಕೆ.ಎಚ್.ಬಿ ಕ್ವಾಟರ್ಸ್ ಗೆ ತಲುಪಲಿದೆ. ಮಾರ್ಗ ಸಂಖ್ಯೆ ಉ-7 ಚಿನ್ನಸ್ವಾಮಿ ಸ್ಟೇಡಿಯಂನಿಂದ ಮಾಗಡಿ ರಸ್ತೆ, ಸುಂಕದ ಕಟ್ಟೆ, ಗೊಲ್ಲರಹಟ್ಟಿ ಮಾರ್ಗವಾಗಿ ಜನಪ್ರಿಯ ಟೌನ್ ಶಿಪ್ ಗೆ ತಲುಪಲಿದೆ.
ಮಾರ್ಗ ಸಂಖ್ಯೆ ಉ-8 ಚಿನ್ನಸ್ವಾಮಿ ಸ್ಟೇಡಿಯಂನಿಂದ ಶಿವಾಜಿನಗರ, ಮೇಖ್ರಿ ಸರ್ಕಲ್, ಯಶವಂತಪುರ ಮಾರ್ಗವಾಗಿ ನೆಲಮಂಗಲಕ್ಕೆ ತಲುಪಲಿದೆ. ಮಾರ್ಗ ಸಂಖ್ಯೆ ಉ-9 ಚಿನ್ನಸ್ವಾಮಿ ಸ್ಟೇಡಿಯಂನಿಂದ ಶಿವಾಜಿನಗರ, ಮೇಖ್ರಿ ಸರ್ಕಲ್, ಹೆಬ್ಬಾಳ ಮಾರ್ಗವಾಗಿ ಯಲಹಂಕ 5ನೇ ಹಂತಕ್ಕೆ ತಲುಪಲಿದೆ. ಮಾರ್ಗ ಸಂಖ್ಯೆ ಉ-10 ಚಿನ್ನಸ್ವಾಮಿ ಸ್ಟೇಡಿಯಂನಿಂದ ಶಿವಾಜಿನಗರ, ಟ್ಯಾನರಿ ರಸ್ತೆ, ನಾಗವಾರ, ಆರ್.ಕೆ.ಹೆಗಡೆ ನಗರ ಮಾರ್ಗವಾಗಿ ಯಲಹಂಕ ತಲುಪಲಿದೆ.
ಮಾರ್ಗ ಸಂಖ್ಯೆ ಉ-11 ಚಿನ್ನಸ್ವಾಮಿ ಸ್ಟೇಡಿಯಂನಿಂದ ಶಿವಾಜಿನಗರ, ಲಿಂಗರಾಜಪುರ, ಹೆಣ್ಣೂರು ಕ್ರಾಸ್ ಮಾರ್ಗವಾಗಿ ಬಾಗಲೂರು ತಲುಪಲಿದೆ. ಮಾರ್ಗ ಸಂಖ್ಯೆ 317-ಉ ಚಿನ್ನಸ್ವಾಮಿ ಸ್ಟೇಡಿಯಂನಿಂದ ಟಿನ್ ಫ್ಯಾಕ್ಟರಿ, ಕೆ. ಆರ್.ಪುರ ಮಾರ್ಗವಾಗಿ ಹೊಸಕೋಟೆ ತಲುಪಲಿದೆ.