ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ‘ನಮ್ಮ ಮೆಟ್ರೋ’ ಎರಡನೇ ಹಂತದ ಕಾಮಗಾರಿಗಾಗಿ ಜಯದೇವ ಫ್ಲೈಓವರ್ ನ ಲೂಪ್ ಭಾಗವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುತ್ತಿದೆ. ಉಳಿದ ಮುಖ್ಯ ಭಾಗ ತೆರವಿಗೆ ಸಿದ್ಧತೆ ಸಹ ನಡೆಸಲಾಗುತ್ತಿದೆ. ಇದರಿಂದ ರಸ್ತೆಯ ತುಂಬಾ ಪುಲ್ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನ ಸವಾರರು ಹೈರಾಣಾಗುತ್ತಿದ್ದಾರೆ.
ಜಯದೇವ ಜಂಕ್ಷನ್‍ನಲ್ಲಿ 70 ಅಡಿ ಎತ್ತರದಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗದ ಮೆಟ್ರೋ ನಿಲ್ದಾಣ ನಿರ್ಮಾಣವಾಗುತ್ತಿದೆ. ಗೊಟ್ಟಿಗೆರೆ-ನಾಗವಾರ ಹಾಗೂ ಆರ್‍ವಿ ರಸ್ತೆ-ಬೊಮ್ಮಸಂದ್ರಕ್ಕೆ ಮೆಟ್ರೋ ಮಾರ್ಗಗಳು ರೆಡಿಯಾಗುತ್ತಿವೆ. ಇದರ ಕೆಳಗೆ ನಿರ್ಮಾಣವಾಗಲಿರುವ ಹೊಸ ಮೇಲುರಸ್ತೆ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಗೆ ಸಂಪರ್ಕ ಕಲ್ಪಿಸಲಿದೆ.
Advertisement
Advertisement
ಈ ಯೋಜನೆಗಾಗಿ ಮೇಲುರಸ್ತೆಯ ಲೂಪ್ ತೆರವು ಮಾಡಲಾಗುತ್ತಿದೆ. ಸದ್ಯ 150 ಮೀಟರ್ ಉದ್ದದ ಲೂಪ್ ತೆರವುಗೊಳಿಸಲಾಗಿದೆ. ಅಲ್ಲದೆ ರಾತ್ರಿ ವೇಳೆ ಮಾತ್ರ ಕಾಮಗಾರಿ ನಡೆಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಹೀಗಾಗಿ ರಾತ್ರಿ ಕಾಮಗಾರಿ ಮಾಡಿದ ಕೂಡಲೇ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಿದೆ.
Advertisement
ಸುಮಾರು 2 ರಿಂದ 3 ತಿಂಗಳು ಕಾಲ ಈ ಕಾಮಗಾರಿ ನಡೆಯಲಿದ್ದು, ಕಾಮಗಾರಿ ವೇಳೆ ಮೇಲುರಸ್ತೆಯ ಕೆಳಗಿನ ರಸ್ತೆಯಲ್ಲಿ ಮುಂಜಾನೆ 6 ರಿಂದ ರಾತ್ರಿ 10 ಗಂಟೆವರೆಗೆ ದ್ವಿಚಕ್ರ ವಾಹನ, ಅಂಬುಲೆನ್ಸ್ ಹಾಗೂ ಬಿಎಂಟಿಸಿ ಬಸ್‍ಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 10 ರಿಂದ ಮುಂಜಾನೆ 6 ಗಂಟೆವರೆಗೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ. ಕಾಮಗಾರಿ ಆರಂಭವಾದ ಮೇಲೆ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನ ಕಲ್ಪಿಸಲಾಗುತ್ತದೆ ಎನ್ನಲಾಗಿದೆ.