ಬೆಂಗಳೂರು: ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಪ್ರೋಟೋಟೈಪ್ ರೈಲನ್ನು (ಚಾಲಕ ರಹಿತ ರೈಲು – Driverless Metro) ಇಂದು ಬಿಎಂಆರ್‌ಸಿಎಲ್ ಅನಾವರಣಗೊಳಿಸಿದೆ. ಇದರೊಂದಿಗೆ ‘ನಮ್ಮ ಮೆಟ್ರೋ’ದ (Namma Metro) ಪಿಂಕ್ ಲೈನ್ ಯೋಜನೆಯು ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ.
ಪಿಂಕ್ ಲೈನ್‌ನ ಮೂಲಮಾದರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಜೆ ರವಿಶಂಕರ್ ಅವರು ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಅನಾವರಣಗೊಳಿಸಿದರು. ಬಳಿಕ BEML ರೈಲು ಸಂಕೀರ್ಣದಲ್ಲಿ ರೈಲಿನ ಯಶಸ್ವಿ ಪರೀಕ್ಷಾರ್ಥ ಓಟ ನಡೆಸಿತು.
ಕಾಳೇನ ಅಗ್ರಹಾರದಿಂದ ನಾಗಾವಾರದವರೆಗೆ ಸುಮಾರು 21.25 ಕಿಮೀ ಸಂಪರ್ಕಿಸುವ ಗುಲಾಬಿ ಮಾರ್ಗ 2026ರ ಡಿಸೆಂಬರ್ ಅಥವಾ 2027 ರಲ್ಲಿ ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಮೊದಲ ಹಂತವಾಗಿ ಐದು ಹೊಸ ʻಚಾಲಕರಹಿತʼ ರೈಲುಗಳನ್ನ ಓಡಿಸಲು ಸಿದ್ಧತೆ ನಡೆಯುತ್ತಿದೆ. ಇದರ ಅಂಗವಾಗಿ ಇಂದು ಹೊಸ ರೈಲು ಮಾದರಿಯನ್ನ ಅನಾವರಣಗೊಳಿಸಿದ್ದು, ಡಿ.15ರ ನಂತರ ರೈಲುಗಳು ಕೊತ್ತನೂರು ಡಿಪೋಗೆ ಹೋಗಿ ಹಲವು ಪರೀಕ್ಷೆಗಳನ್ನ ಎದುರಿಸಲಿವೆ. ಇದನ್ನೂ ಓದಿ: 90 ಲಕ್ಷ ಕೊಟ್ರೆ ಅಮೆರಿಕ ವೀಸಾ – ಟ್ರಂಪ್ ಗೋಲ್ಡ್ ಕಾರ್ಡ್ ಬಿಡುಗಡೆ
ಈ ಪ್ರೋಟೋಟೈಪ್ ರೈಲು ಜೂನ್ 2025 ರಲ್ಲೇ ತಲುಪಬೇಕಿತ್ತು. ಆದರೆ, ಕೆಲವು ಪ್ರಮುಖ ಉಪಕರಣಗಳ ಕೊರತೆ ಮತ್ತು ಟೈಪ್ ಟೆಸ್ಟ್‌ಗಳಲ್ಲಿ ಆದ ವಿಳಂಬದಿಂದಾಗಿ ಇದು ತಡವಾಗಿದೆ. ಪ್ರೋಟೋಟೈಪ್ ರೈಲು ಬಂದ ನಂತರ, ಬಿಎಂಆರ್‌ಸಿಎಲ್ ಹೊಸ ರೈಲುಗಳಿಗೆ ಅಗತ್ಯವಿರುವ ಅನುಮತಿಗಳನ್ನ ಪಡೆಯುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರ ಅಂತ್ಯದ ವೇಳೆ ಸಂಚಾರ ಆರಂಭಿಸಲಿದೆ. ಇದನ್ನೂ ಓದಿ: ಬೆತ್ತಲೆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಶಂಕೆ – MBA ವಿದ್ಯಾರ್ಥಿ ಆತ್ಮಹತ್ಯೆ
ಚಾಲಕರಹಿತ ರೈಲುಗಳ ವಿಶೇಷತೆ ಏನು?
• ಪ್ರಯಾಣಿಕರ ಸೌಕರ್ಯ ಹೆಚ್ಚಿಸಲು ಆಧುನಿಕ, ವಿಶಾಲ ಒಳಾಂಗಣಗಳನ್ನ ಒಳಗೊಂಡಿದೆ.
• ನವೀಕರಿಸಿದ ಪ್ರಯಾಣಿಕರ ಮಾಹಿತಿ ವೈಶಿಷ್ಟ್ಯಗಳೊಂದಿಗೆ ಇಂಧನ-ಸಮರ್ಥ ವ್ಯವಸ್ಥೆಗಳು
• ಕೋಚ್‌ಗಳ ನಡುವೆ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಹೆಚ್ಚುವರಿ ವಿಶಾಲ ಗ್ಯಾಂಗ್‌ವೇಗಳು
• USB ಚಾರ್ಜಿಂಗ್ ಪೋರ್ಟ್‌ಗಳು, ಸಾಮರ್ಥ್ಯವುಳ್ಳ ಆಸನಗಳು, ಜೊತೆಗೆ ಸುಧಾರಿತ ಪ್ರವೇಶಸಾಧ್ಯತೆಯ ನಿಬಂಧನೆ ಇರಲಿದೆ.
• ಸುಧಾರಿತ ಅಗ್ನಿ ಸುರಕ್ಷತೆ, ಅಪಘಾತಗಳಿಂದ ಸುರಕ್ಷತೆಗಾಗಿ ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳ ಅನುಸರಣೆ
• ಸಂಪೂರ್ಣ ಚಾಲಕರಹಿತ ಕಾರ್ಯಾಚರಣೆಗಳಿಗಾಗಿ CBTC (ಸಂವಹನ-ಆಧಾರಿತ ರೈಲು ನಿಯಂತ್ರಣ) ದೊಂದಿಗೆ ಹೊಂದಾಣಿಕೆ
BEML ಲಿಮಿಟೆಡ್ ಇಂದು ತನ್ನ ಅತ್ಯಾಧುನಿಕ ʻಚಾಲಕರಹಿತʼ ಮೆಟ್ರೋ ರೈಲಿನ (5RS-DM)ನ ಮೂಲಮಾದರಿ ಇದಾಗಿದೆ. ಸುಮಾರು 3,177 ಕೋಟಿ ರೂ. ಒಪ್ಪಂದದ ಅಡಿಯಲ್ಲಿ BEML 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಕಾರುಗಳನ್ನ ಪೂರೈಸಲಿದ್ದು, ಬ್ಲೂ ಲೈನ್ (ವಿಮಾನ ನಿಲ್ದಾಣ ಮಾರ್ಗ) ಮತ್ತು ಪಿಂಕ್ ಮಾರ್ಗಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ನಿಗದಿತ ಸಮಯಕ್ಕೆ ಪರೀಕ್ಷೆಗಳು ನಡೆಯಲಿದ್ದು, ಕಾರ್ಯಾರಂಭವಾದ ನಂತರ ಮುಂದಿನ 15 ವರ್ಷಗಳವರೆಗೆ ಈ ಮೆಟ್ರೋ ರೈಲುಗಳ ಸಮಗ್ರ ನಿರ್ವಹಣೆಯನ್ನ ಬಿಇಎಂಎಲ್ ನೋಡಿಕೊಳ್ಳಲಿದೆ. ಇದನ್ನೂ ಓದಿ: ಇಷ್ಟೊಂದು ನಯ, ವಿನಯ ಎಲ್ಲಿಂದ ಬಂತು?- ಡಿಕೆಶಿ ಕಾಲೆಳೆದ ಸುನೀಲ್ ಕುಮಾರ್





