ತುಮಕೂರು: ಏಪ್ರಿಲ್ 1ರಂದು ಶ್ರೀ ಸಿದ್ದಗಂಗಾ ಸ್ವಾಮೀಜಿಗಳ 112ನೇ ಜಯಂತಿ. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸ್ವಾಮೀಜಿಗಳ ಜಯಂತಿ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ವಿವಿಧ ಸಿದ್ಧತೆಗಳು ನಡೆಯುತ್ತಿವೆ. ಸ್ವಾಮೀಜಿಗಳು ಇಲ್ಲ ಎನ್ನುವ ನೋವಿನಲ್ಲೂ ಅವರ ನೆನಪನ್ನು ಮರುಕಳಿಸುವ ಹಲವು ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಅಂದರೆ “ದೇವರ” ಹುಟ್ಟುಹಬ್ಬದಂದು 112 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರನಿಟ್ಟು ನಾಮಕರಣ ಮಾಡಲಾಗುತ್ತಿದೆ.
ನಡೆದಾಡುವ ದೇವರು ಶಿವೈಕ್ಯ ಶಿವಕುಮಾರ ಶ್ರೀಗಳು ಈಗ ನಮ್ಮೊಂದಿಗೆ ಇಲ್ಲ. ಅವರಿಲ್ಲದ ಮೊದಲ ಜನ್ಮದಿನ ಅಂದರೆ ಶಿವಕುಮಾರ ಶ್ರೀಗಳ ಜಯಂತಿಗೆ ಶ್ರೀಮಠ ಸಕಲ ಸಿದ್ಧತೆ ಮಾಡಿಕೊಂಡಿದೆ. ಏಪ್ರಿಲ್ 1 ರಂದು ಶ್ರೀಗಳ 112ನೇ ಜಯಂತಿ ನಡೆಯಲಿದೆ. ವಿವಿಧ ಮಠಾಧೀಶರು, ಮೈಸೂರು ರಾಜವಂಶಸ್ಥ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಶ್ರೀಗಳ ಸ್ಮರಣೆ, ಗದ್ದುಗೆ ಪೂಜೆ, ಪ್ರವಚನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಅಂದು ನಡೆಯಲಿದೆ.
Advertisement
Advertisement
ಇಂದಿನಿಂದಲೇ ಹಲವು ಸಿದ್ಧತೆಗಳು ನಡೆಯುತ್ತಿವೆ. ಚುನಾವಣೆಯ ಹಿನ್ನೆಲೆ ಯಾವುದೇ ರಾಜಕೀಯ ನಾಯಕರು ಬರೋದಿಲ್ಲ. ವಿಶೇಷ ಅಂದರೆ ಶ್ರೀಗಳ 112ನೇ ಜಯಂತಿಯಂದು 112 ಮಕ್ಕಳಿಗೆ ನಾಮಕರಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. 112 ಮಕ್ಕಳಿಗೂ ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ನಾಮಕರಣ ಮಾಡಲಾಗುವುದು. ಈಗಾಗಲೇ ನೂರಕ್ಕೂ ಹೆಚ್ಚು ಮಕ್ಕಳ ಹೆಸರು ನೋಂದಣಿಯಾಗಿದೆ. ನಾಮಕರಣದಲ್ಲಿ ಭಾಗಿಯಾದ ಮಕ್ಕಳಿಗೆ ಮಠದ ವತಿಯಿಂದ ತೊಟ್ಟಿಲು, ಹಾಸಿಗೆ ಹಾಗೂ ನಾಮಕರಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ.
Advertisement
Advertisement
ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ಸ್ವಾಮೀಜಿಗಳ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಸ್ವಾಮೀಜಿಗಳು ಇಲ್ಲ ಎನ್ನುವ ನೋವಿನಲ್ಲಿಯೇ ಭಕ್ತಗಣ ಏಪ್ರಿಲ್ 1ಕ್ಕೆ ಬರಲು ಸಜ್ಜಾಗಿ ನಿಂತಿದೆ. ಈ ನಡುವೆ ಮಠದ ಆಡಳಿತ ಮಂಡಳಿ 112 ಮಕ್ಕಳಿಗೆ ಶ್ರೀಗಳ ಹೆಸರನ್ನೇ ನಾಮಕರಣ ಮಾಡುವುದರ ಮೂಲಕ ಶ್ರೀಗಳಿಲ್ಲದ ಮೊದಲ ಜಯಂತಿಯನ್ನು ಸದಾ ಸ್ಮರಿಸುವಂತೆ ಮಾಡುತ್ತಿರುವುದು ಶ್ಲಾಘನೀಯ.