ಬೆಂಗಳೂರು: ಹಲ್ಲೆ ಮಾಡಿರುವುದು ನಿಜ ಎಂದು ಹ್ಯಾರಿಸ್ ಪುತ್ರ ನಲಪಾಡ್ ತಪ್ಪೊಪ್ಪಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯನ್ನು ವಶಪಡಿಸಿಕೊಂಡು ಪರಿಶೀಲನೆ ಮಾಡಿದ್ದೇವೆ ಎಂದು ಡಿಸಿಪಿ ಚಂದ್ರಗುಪ್ತ ಹೇಳಿದ್ದಾರೆ.
ಶಾಸಕ ಹ್ಯಾರಿಸ್ ಮಗ ನಲಪಾಡ್ ಮತ್ತು ಆತನ ಸ್ನೇಹಿತರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಸಾಕ್ಷ್ಯ ಗಳು ಸಿಕ್ಕಿದ್ದು ಕಾಲು ತಗಲಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.
Advertisement
Advertisement
ಗಲಾಟೆ ಹೇಗಾಯ್ತು?
ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡಲು ಹೋಗಿದ್ದರು. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಶನಿವಾರ ರಾತ್ರಿ ಸುಮಾರು 11 ಗಂಟೆಗೆ ಊಟಕ್ಕೆಂದು ಅದೇ ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ವಿದ್ವತ್ ನ ಕಾಲು ಮುರಿದಿತ್ತು. ಆದ್ದರಿಂದ ಕಾಲು ಚಾಚಿಕೊಂಡು ಕುಳಿತ್ತಿದ್ದರು. ಆಗ ನಲಪಾಡ್ ನಿಗೆ ಕಾಲು ತಗುಲಿದೆ. ನಂತರ ವಿದ್ವತ್ ಕ್ಷಮೆ ಕೇಳಿರಲಿಲ್ಲ. ಇದರಿಂದ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ ಎಂದು ಡಿಸಿಪಿ ತಿಳಿಸಿದರು.
Advertisement
ಲೋಕಪಯೋಗಿ ಸಚಿವ ಹೆಚ್.ಸಿ ಮಹದೇವಪ್ಪ ಪುತ್ರ ಇರುವುದರ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಸಿಕ್ಕಿಲ್ಲ. ಮಹದೇವಪ್ಪ ಪುತ್ರನ ಹುಟ್ಟುಹಬ್ಬಕ್ಕೆ ಹೋಗಿದ್ದರು ಎಂಬ ಮಾಹಿತಿ ಇದೆ. ಆದ್ದರಿಂದ ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಮಾಧ್ಯಮದವರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿದೆ. ಓರ್ವನ ಬಂಧನ ಕೂಡ ಆಗಿದೆ. ಇನ್ನುಳಿದವರ ಹುಡುಕಾಟ ನಡೆಯುತ್ತಿದೆ ಎಂದು ಚಂದ್ರಗುಪ್ತ ವಿವರಿಸಿದರು.
Advertisement
ನಲಪಾಡ್‍ನ ವಿರುದ್ಧ ಮತ್ತೊಂದು ಕೇಸ್ ಆಗಿದ್ದು, 3 ವರ್ಷದ ಹಿಂದೆ ನಡೆದಿದ್ದ ಪ್ರಕರಣವಾಗಿದೆ. ಪೂರ್ಣಿಮಾ ದಾಸ್ ವಿಡಿಯೋ ವೈರಲ್ ಆಗಿರುವುದರ ಬಗ್ಗೆ ಗಮನಕ್ಕೆ ಬಂದಿಲ್ಲ. ಪೊಲೀಸರು ಸ್ವಯಂಪ್ರೇರಿತ ದಾಖಲು ಮಾಡಿಕೊಳ್ಳುತ್ತಾರೆ. ಮಲ್ಯ ಆಸ್ಪತ್ರೆ ವೈದ್ಯರಿಂದ ವರದಿ ಬಿಡುಗಡೆಯಾಗಿದೆ. ವಿದ್ವತ್ ಮುಖದಲ್ಲಿ ರಕ್ತ ಹೆಪ್ಪುಗಟ್ಟಿದೆ. ಮೂಗಿನ ಹೊಳ್ಳೆಗಳು ಒಡೆದಿದ್ದು, ಮೂಗು ಫ್ರಾಕ್ಚರ್ ಆಗಿದೆ. ಬಲಭಾಗದ 5 ಪಕ್ಕೆಲುಬುಗಳು ಮುರಿದಿದ್ದು, ಎಡಭಾಗದ 4 ಪಕ್ಕೆಲುಬುಗಳು ಮುರಿದಿವೆ. ಆದ್ದರಿಂದ ವಿದ್ವತ್ ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧನ ಮಾಡಲಾಗಿದೆ. ಹಲ್ಲೆ ಮಾಡಿರುವುದು ಗೊತ್ತಿರುವುದರಿಂದ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ನಲಪಾಡ್ ಮತ್ತು ಆತನ ಸ್ನೇಹಿತರನ್ನ ಈಗ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಅಂದು ಡ್ರಗ್ಸ್ ಸೇವನೆ ಮಾಡಿದ್ದಾ ಇಲ್ಲವಾ ತಿಳಿದಿಲ್ಲ. ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆದರೆ ಇನ್ನು ವರದಿ ಬಂದಿಲ್ಲ ಎಂದು ವಿವರಿಸಿದರು.
ಯಾವೆಲ್ಲ ಕೇಸ್ ಹಾಕಲಾಗಿದೆ?
ಐಪಿಸಿ ಸೆಕ್ಷನ್ 141(ಗುಂಪು ಹಲ್ಲೆ), 143(ದಂಡನೆ), 144(ಮಾರಕಾಸ್ತ್ರಗಳಿಂದ ಗುಂಪು ಹಲ್ಲೆ), 146(ದೊಂಬಿ), 149( ಅಕ್ರಮವಾಗಿ ಗುಂಪುಗೂಡುವಿಕೆ), 341(ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), 326(ಅಪಾಯಕಾರಿ ಆಯುಧಗಳಿಂದ ಸ್ವ ಇಚ್ಚೆಯಿಂದ ತ್ರೀವ ಗಾಯ ಉಂಟು ಮಾಡುವುದು), 307(ಕೊಲೆ ಮಾಡುವ ಪ್ರಯತ್ನ), 504(ಶಾಂತಿ ಭಂಗ), ಐಪಿಸಿ 506(ಜೀವ ಬೆದರಿಕೆ) ಅಡಿ ಕೇಸ್ ದಾಖಲಾಗಿದೆ.
ಆರೋಪಿಗಳು ಮತ್ತು ಕೆಲಸ: ಆರೋಪಿ ನಂಬರ್ 1 ಶಾಸಕ ಹ್ಯಾರಿಸ್ ಮಗ ನಲಪಾಡ್ ಒಬ್ಬ ನಿರುದ್ಯೋಗಿಯಾಗಿದ್ದು, ಸ್ನೇಹಿತರಾದ ಅರುಣ್ ಬಾಬು(28) ಡಿಪ್ಲೋಮಾ ಮಾಡಿದ್ದು, ಕೊಕೋಟೆರಿನೋ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಬಾಲಕೃಷ್ಣ (25) ಎಸ್‍ಎಸ್‍ಎಲ್‍ಸಿ ಮಾಡಿದ್ದು, ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಅಭಿಷೇಕ್(23) ಬಿಬಿಎಂ ಮಾಡಿದ್ದು, ಸ್ವಂತ ಉದ್ಯಮ ಮಾಡುತ್ತಿದ್ದಾನೆ. ಶ್ರೀಕೃಷ್ಣ ತಲೆ ಮರೆಸಿಕೊಂಡಿದ್ದಾನೆ. ಮಂಜುನಾಥ್ (31) ಈತ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಮಹಮದ್ ಅಪ್ರಾಸ್ ಆಶ್ರಾಪ್ (23) ಈತ ಬಿಕಾಂ ವ್ಯಾಸಂಗ ಮಾಡುತ್ತಿದ್ದಾನೆ. ನಾಫಿ ಮಹಮದ್ ನಾಸೀರ್(28) ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾನೆ.