ಬೆಂಗಳೂರು: ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಕಲಬುರಗಿ ಮೂರು ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಚುನಾವಣೆಯು ಯಡಿಯೂರಪ್ಪನವರ ಆಶೀರ್ವಾದ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಿದೆ. ಈ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದಿದ್ದು, ಮೂರು ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತದಾನ ಆಗಿದೆ. ಅದಕ್ಕಾಗಿ ನಾನು ಮತದಾರರಿಗೆ ಕೃತಜ್ಞತೆ ಆರ್ಪಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಓಕೆ, ಕಾಂಗ್ರೆಸ್ ಯಾಕೆ?:ಆರ್. ಅಶೋಕ್
25 ವರ್ಷಗಳ ಹಿನ್ನೆಲೆ ನೋಡಿದಾಗ ಬೆಳಗಾವಿಯಲ್ಲಿ ಪಾರ್ಟಿ ಹೆಸರಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಈಗ ಪಕ್ಷದ ಚಿನ್ಹೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇವು, ಗೆಲುವು ಸಿಕ್ಕಿದೆ. ಮೂರು ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಲಿಕೆ ಚುನಾವಣಾ ಫಲಿತಾಂಶ- ಮತದಾರರಿಗೆ, ಪಕ್ಷದ ಹಿರಿಯ ನಾಯಕರಿಗೆ ಸಿಎಂ ಧನ್ಯವಾದ
ಇದೇ ವೇಳೆ, ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ನಾನು, ನಾನು ಎಂದು ಟವೆಲ್ ಹಾಕುವ ಕೆಲಸ ಮಾಡಿದ್ದರು. ಆದರೀಗ ಜನ ಟವೆಲ್ ತೆಗೆದು ಹಾಕ್ಬಿಡಿ ಎಂದು ಹೇಳುತ್ತಿದ್ದಾರೆ. ಡಿಕೆಶಿ ಫೇಲ್ಯೂರ್ ಅಧ್ಯಕ್ಷ ಅಂತಾ ಬಿಂಬಿಸುವಲ್ಲಿ ಸಿದ್ದರಾಮಯ್ಯ ಕೂಡ ಸಕ್ಸಸ್ ಆಗಿದ್ದಾರೆ. ಕಾಂಗ್ರೆಸ್ ನ ಒಳ ಜಗಳ ಹೊರಗೆ ಬಂದಿದೆ. ಪಾಲಿಕೆ ಚುನಾವಣೆಯಿಂದ ದೂರ ಸರಿದ್ದ ಸಿದ್ದರಾಮಯ್ಯ ಅವರ ತಂತ್ರ ಈಗ ಫಲಿಸಿದೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉಪಸ್ಥಿತರಿದ್ದರು.