ಚಾಮರಾಜನಗರ: ಭಾರತದಲ್ಲಿದ್ದುಕೊಂಡು ಪಾಕ್ ಪರ ಬ್ಯಾಟಿಂಗ್ ಮಾಡುವುದು ರಾಷ್ಟ್ರದ್ರೋಹ. ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮೂವರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿಗಳೇ ಆಗಿದ್ದರು ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಬಿಡುಗಡೆ ಮಾಡಿ ಮತ್ತೆ ಬಂಧಿಸಿರುವ ವಿಚಾರ ಗೃಹ ಇಲಾಖೆಗೆ ಸಂಬಂಧಿಸಿದ್ದು. ಈ ವಿಚಾರನ್ನು ಗೃಹ ಸಚಿವರು ನೋಡಿಕೊಳ್ಳುತ್ತಾರೆ ಎಂದರು.
ಕಾಂಗ್ರೆಸ್‍ನಿಂದ ಬಂದ ವೈರಸ್ ಬಿಜೆಪಿ ಸೇರಿಕೊಂಡಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದರು. ಸಂತೋಷ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ನಳಿನ್, ವೈರತ್ವದ ಬಗ್ಗೆ ಮಾತನಾಡಿಲ್ಲ, ರಾಜಕೀಯ ಬೆಳವಣಿಗೆ, ಪರಿಣಾಮ ಬೇರೆ ಬೇರೆ ಪಾರ್ಟಿಗಳಿಂದ ಬಂದಾಗ ಕೆಲವು ವ್ಯತ್ಯಾಸಗಳಾಗುವುದು ಸಹಜ. ಬೇರೆ ಬೇರೆ ಸಂದರ್ಭಗಳಲ್ಲಿ ಕೆಲವು ವೈರಸ್ ಪ್ರವೇಶ ಆಗುತ್ತಿದೆ ಎಂದು ಹೇಳಿರಬಹುದು ಎಂದರು.
ನಮಗೆ ಬಂದ ಮಾಹಿತಿ ಪ್ರಕಾರ ಬಳ್ಳಾರಿಯಲ್ಲಿ ನಡೆದ ಕಾರು ಅಪಘಾತ ಪ್ರಕರಣದಲ್ಲಿ ಸಚಿವ ಅಶೋಕ್ ಪುತ್ರ ಆ ಕಾರಿನಲ್ಲಿ ಇರಲಿಲ್ಲ. ಅಶೋಕ್ ಪುತ್ರನನ್ನು ಬಚ್ಚಿಡುವ ಪ್ರಶ್ನೆಯೇ ಇಲ್ಲ. ಆತ ಪ್ರವಾಸಕ್ಕೆ ಹೋಗಿದ್ದಾನೆ. ಪ್ರವಾಸದಿಂದ ಬಂದ ನಂತರ ಕಾಣಿಸಿಕೊಳ್ಳುತ್ತಾನೆ. ಮುಖ್ಯಮಂತ್ರಿ ಈ ಪ್ರಕರಣದ ಬಗ್ಗೆ ಪರಿಶೀಲಿಸಿ ಮಾತನಾಡುತ್ತಾರೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ.