ಬೆಂಗಳೂರು: ಒಂದು ಕಾಲದಲ್ಲಿ ತಿಹಾರ್ ಜೈಲಿನಲ್ಲಿ ಕಸಬ್, ಅಫ್ಜಲ್ ಗುರು, ಚೋಟಾ ಶಕೀಲ್ ಎಂದು ಹಾಜರಾತಿ ಕೂಗುತ್ತಿದ್ದರು. ಇಂದು ಅದೇ ಜೈಲಿನಲ್ಲಿ ಚಿದಂಬರಂ, ರಾಜಾ, ಡಿ.ಕೆ ಶಿವಕುಮಾರ್ ಎಂದು ಹಾಜರಾತಿ ಕೂಗುತ್ತಿದ್ದಾರೆ. ಇದು ಕಾಂಗ್ರೆಸ್ಸಿನ ಸ್ಥಿತಿ ಅಂತ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಬಸವನಗುಡಿಯ ಮರಾಠ ಭವನದಲ್ಲಿ ಬೆಂಗಳೂರು ನಗರ ದಕ್ಷಿಣ ಭಾಗದ ಬಿಜೆಪಿ ಜಿಲ್ಲಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಮಾತನಾಡಿದ ಕಟೀಲ್ ಡಿಕೆಶಿ ವಿರುದ್ಧ ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದರು. ಪಾಕ್ ಪರವಾಗಿ ಘೋಷಣೆ ಮಾಡಿದ ಯುವತಿ ಪರವಾಗಿ ಡಿ.ಕೆ ಶಿವಕುಮಾರ್ ಮಾತನಾಡುತ್ತಾರೆ. ಡಿಕೆಶಿ ನೀವು ತಿಹಾರ್ ಜೈಲಿನಲ್ಲಿ ಓದಿದ್ದು ಭಾರತದ ಇತಿಹಾಸವಾ ಅಥವಾ ಪಾಕಿಸ್ತಾನದ ಇತಿಹಾಸವಾ ಎಂದು ಪ್ರಶ್ನಿಸಿ ಕಿಡಿಕಾರಿದರು.
ಇನ್ನು ಮೂರು ವರ್ಷದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತದೆ. ರಾಮನ ಪಾದದ ಮೇಲಾಣೆ ಮಂದಿರವನ್ನು ಕಟ್ಟೇ ಕಟ್ಟುತ್ತೇವೆ ಎಂದು ಆಣೆ ಮಾಡಿದ್ದ ನಾವು ನಮ್ಮ ಶಪಥ ಈಡೇರಿಸುತ್ತಿದ್ದೇವೆ ಎಂದರು. ಬಳಿಕ ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡಿ, ಈದ್ಗಾ ಮೈದಾನಗಳಲ್ಲಿ ಭಾರತದ ರಾಷ್ಟ್ರ ಧ್ವಜಾರೋಹಣ ಮಾಡಲು ಬಿಡುತ್ತಿರಲಿಲ್ಲ. ಆದರೆ ಇಂದು ಕಾಶ್ಮೀರದಲ್ಲಿ ಹಾಗೂ ಭಾರತದ ಎಲ್ಲಾ ಕಡೆ ರಾಷ್ಟ್ರಧ್ವಜ ಹಿಡಿಯುವಂತೆ ಮಾಡಿದವರು ಪ್ರಧಾನಿ ನರೇಂದ್ರ ಮೋದಿ ಅಂತ ವಿರೋಧಿಗಳಿಗೆ ಕಟೀಲ್ ಟಾಂಗ್ ಕೊಟ್ಟರು.