ಮಂಗಳೂರು: ಸರ್ಕಾರ ಜಾರಿಗೆ ತಂದಿರುವ ಕಾನೂನುಗಳಿಗೆ ಕಾಂಗ್ರೆಸ್ ಗೌರವ ನೀಡದೆ, ಕೇವಲ ನಾಯಕತ್ವಕ್ಕಾಗಿ ಡಿ.ಕೆ. ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಎಂಬ ಡ್ರಾಮಾ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅನೇಕ ಕಾನೂನುಗಳನ್ನು ಕೈಗೊಂಡಿದೆ. ಆದರೆ ಕಾಂಗ್ರೆಸ್ ಇದ್ಯಾವುದಕ್ಕೂ ಗೌರವ ನೀಡುತ್ತಿಲ್ಲ. ಇದೆಲ್ಲವನ್ನು ರಾಜ್ಯದ ಜನ ಎಲ್ಲವನ್ನು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಉತ್ತರವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಲಿದ್ದಾರೆ ಎಂದರು.
Advertisement
Advertisement
ಮೇಕೆದಾಟು ಯೋಜನೆಯ ವಿರುದ್ಧ ಕೋರ್ಟ್ ನಲ್ಲಿರುವ ದಾವೆ ಇತ್ಯರ್ಥವಾದ ತಕ್ಷಣ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ವಿವಾದ ಕೋರ್ಟ್ ನಲ್ಲಿರುವ ವಿಷಯ ಗೊತ್ತಿದ್ದರೂ, ಜನತೆಗೆ ತಪ್ಪು ಸಂದೇಶ ನೀಡಲು ಪ್ರಯತ್ನಿಸುತ್ತಿದೆ. ಆದರೆ ನಿಮ್ಮ ರಾಜಕೀಯ ಉದ್ದೇಶದ ಅರಿವು ಜನತೆಗಿದೆ ಎಂದು ಹೇಳಿದರು.
Advertisement
Advertisement
ಕಾಂಗ್ರೆಸ್ ಪಕ್ಷಕ್ಕೆ ಜನರ ಬಗ್ಗೆ ಕಾಳಜಿ ಇದ್ದರೆ ತಮಿಳುನಾಡಿನಲ್ಲಿರುವ ತಮ್ಮವರ ಜೊತೆ ಮಾತುಕತೆ ನಡೆಸಿ ವಿವಾದ ಇತ್ಯರ್ಥಪಡಿಸಿಬಹುದಲ್ವಾ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭ 2014 ರಿಂದ 2018ರ ವರೆಗೆ ಯೋಜನೆಯ ಡಿಪಿಆರ್ ನ್ನು ಯಾಕೆ ಸುಮ್ಮನೆ ಇಟ್ಟುಕೊಂಡಿದ್ದೀರಿ?. ಈ ಬಗ್ಗೆ ರಾಜ್ಯದ ಜನತೆಗೆ ಡಿಕೆಶಿ ಉತ್ತರಿಸಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಚಾಲನೆ
ನೆಲದ ಕಾನೂನಿನ ಬಗ್ಗೆ ಗೌರವವಿಲ್ಲ: ಕೊರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ಹಾಗೂ ಜನರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ನಾನಾ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಈ ಹಿಂದೆ ರಾಜ್ಯವನ್ನು ಆಡಳಿತ ನಡೆಸಿದ ನಾಯಕರೇ ಈ ನೆಲದ ಕಾನೂನನ್ನು ಉಲ್ಲಂಘಿಸಿ ಕಾನೂನಿಗೆ ಗೌರವ ನೀಡದೆ, ಗೂಂಡಾಗಿರಿ, ದರ್ಪ ಪ್ರದರ್ಶಿಸುತ್ತಿರುವುದು ಕಾಂಗ್ರೆಸ್ ಸಂಸ್ಕøತಿಯನ್ನು ತೋರಿಸುತ್ತದೆ. ಜನರ ಆರೋಗ್ಯದ ಬಗ್ಗೆ, ಹಿತಾಸಕ್ತಿಯ ಬಗ್ಗೆ ಕೊಂಚ ಕಾಳಜಿ ಇಲ್ಲದ ಕಾಂಗ್ರೆಸ್ ಮುಂದೆ ರಾಜ್ಯದಲ್ಲಿ ನಿರ್ಣಾಮವಾಗುವುದರಲ್ಲಿ ಸಂಶಯವಿಲ್ಲ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಸರ್ಕಾರ ಬದುಕಿದ್ಯಾ, ಸತ್ತಿದ್ಯಾ ಅನ್ನೋದನ್ನ ತೋರಿಸ್ತೀವಿ: ಸಚಿವ ಸುಧಾಕರ್
ರಾಜ್ಯದ ಹಿತದೃಷ್ಟಿ, ಇಲ್ಲಿನ ನಾಗರಿಕರ ಬಗ್ಗೆ ಕಾಳಜಿ ಇದ್ದರೆ ಕೊರೊನಾ ನಿಯಂತ್ರಣಕ್ಕೆ ಪೂರಕವಾಗಿ ವರ್ತಿಸಲಿ. ಬದಲಾಗಿ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಹೆಸರಿನಲ್ಲಿ ಜನರನ್ನು ಸೇರಿಸಿ ಕೊರೊನಾ ವ್ಯಾಪಕವಾಗಿ ಹರಡುವಂತೆ ಮಾಡಿದರೆ, ಅದಕ್ಕೆ ಕಾಂಗ್ರೆಸ್ ಪಕ್ಷ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.