ಬೆಂಗಳೂರು: ಬುಧವಾರವಷ್ಟೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಹಾಡಿಹೊಗಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತೊಮ್ಮೆ ಸಿಎಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಸಿಎಂ ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆ ಬಂದಿರುವ ಪ್ರದೇಶಗಳಿಗೆ ಮುಖ್ಯಮಂತ್ರಿಯವರು ಸ್ವತಃ ಭೇಟಿಯಾಗಿ ಪರಿಹಾರ ಕಾರ್ಯವನ್ನು ಬಹಳ ವೇಗವಾಗಿ ತೆಗೆದುಕೊಂಡಿದ್ದಾರೆ. ಈಗಾಗಲೇ ಮನೆ ಕಳೆದುಕೊಂಡವರಿಗೆ 1 ಲಕ್ಷ ರೂ ರಿಯಲ್ ಟೈಂ ಗ್ರಾಸ್ ಸ್ಟೇಟ್‍ಮೆಂಟ್(ಆರ್‍ಟಿಜಿಎಸ್) ಮಾಡಿದ್ದಾರೆ. ಪರಿಹಾರ ಧನವಾಗಿ 20 ಸಾವಿರ, ಮನೆ ಬಾಡಿಗೆಗಾಗಿ 5 ಸಾವಿರ ನೀಡಿದ್ದಾರೆ. ಹೀಗೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಪೂರ್ತಿಯಾಗಿ ನೆರೆ ಪರಿಹಾರ ಕೊಡುವ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಪಕ್ಷದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
Advertisement
Advertisement
ಪ್ರಧಾನಿಗಳು ಕೂಡ ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. 16 ರಾಜ್ಯಗಳಲ್ಲಿ ನೆರೆ ಇದೆ. ಎಲ್ಲವನ್ನೂ ನೋಡಿಕೊಂಡು ಕರ್ನಾಟಕಕ್ಕೆ ತಕ್ಷಣ ಅನುದಾನಗಳನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹೀಗಾಗಿ ರಾಜ್ಯಕ್ಕೆ ಬೇಕಾದ ಪರಿಹಾರಗಳನ್ನು ನಮ್ಮ ಕಡೆಯಿಂದ ನೀಡುತ್ತಿದ್ದೇನೆ ಎಂದು ಹೇಳಿದ್ದು, ಕೇಂದ್ರ ಸರ್ಕಾರ ತಕ್ಷಣ ಬಿಡುಗಡೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಪ್ರಧಾನಿಗೆ ಇಲ್ಲಿಯ ಬಗ್ಗೆ ಬಹಳ ನಂಬಿಕೆ ಇದೆ. ಹೀಗಾಗಿ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಹೇಳಿದ್ದಾರೆ. ಈ ಬಗ್ಗೆ ಮಾತುಕತೆಯನ್ನೂ ನಾವು ಮಾಡಿರುವುದಾಗಿ ಕಟೀಲ್ ತಿಳಿಸಿದರು.
Advertisement
ನಂತರ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಕಟೀಲ್, ಕಳೆದ 7-8 ದಿನಗಳಿಂದ ಮುಖ್ಯಮಂತ್ರಿ ಹಾಗೂ ನಾನು ಕೂಡ ಪ್ರವಾಸದಲ್ಲಿದ್ದೆ. ಹೀಗಾಗಿ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಬುಧವಾರ ಬೆಳಗಾವಿ ಹಾಗೂ ಚಿಕ್ಕೋಡಿ ಪ್ರವಾಸ ಮುಗಿಸಿ, ಮುಖ್ಯಮಂತ್ರಿ ಮೈಸೂರು ಪ್ರವಾಸ ಮುಗಿಸಿ ಇಂದು ಇರುತ್ತಾರೆ ಅಂತ ಗೊತ್ತಾಯಿತು. ಹೀಗಾಗಿ ಇಂದು ಬೆಳಗ್ಗೆ ಸೌಜನ್ಯದ ಭೇಟಿ ಮಾಡಿದ್ದೇನೆ. ಭೇಟಿ ವೇಳೆ ಸಂಘಟನಾ ಪರ್ವದ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂದೆ ಹೇಗೆ ಸಂಘಟನೆ ಗಟ್ಟಿ ಮಾಡಬಹುದು, ಅದಕ್ಕಾಗಿ ಮಂಡಲ ಅಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದರು.
15 ಕ್ಷೇತ್ರಗಳ ಚುನಾವಣೆಗೆ ಪೂರ್ವ ತಯಾರಿಗೆ ವೇಗ ಕೊಡುವ ಬಗ್ಗೆಯೂ ಇದೇ ವೇಳೆ ಚರ್ಚೆ ನಡೆಸಿದ್ದೇವೆ. ಒಟ್ಟಿನಲ್ಲಿ ಸಂಘಟನೆ, ಮುಂದಿನ ಚುನಾವಣೆ ಹಾಗೂ ರಾಜ್ಯದಲ್ಲಿ ಆಗಬೇಕಾದ ಕಾರ್ಯದ ಕುರಿತು ಪಾರ್ಟಿ ಹಾಗೂ ಸರ್ಕಾರ ಯಾವೆಲ್ಲ ಕಾರ್ಯವನ್ನು ಮಾಡಬೇಕೆಂಬುದರ ಕುರಿತು ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.
ಯಡಿಯೂರಪ್ಪ ಅವರು ನನಗೆ ನಿರಂತರವಾಗಿ ಮಾರ್ಗದರ್ಶಕರಾಗಿದ್ದವರು. ಬಹಳಷ್ಟು ಚರ್ಚೆಗಳು ಕೇಳಿ ಬರುತ್ತಿದ್ದವು. ಪದಾಧಿಕಾರಿಗಳ ಆಯ್ಕೆಯಲ್ಲಿ ಎಲ್ಲೂ ಬದಲಾವಣೆಗಳು ಆಗಿಲ್ಲ. ಪ್ರಧಾನ ಕಾರ್ಯದರ್ಶಿಯಾಗಿ ಸಿಟಿ ರವಿ ಇದ್ದರು. ಅವರು ಮಂತ್ರಿಯಾಗಿದ್ದವರು. ಒಬ್ಬನಿಗೆ ಒಂದೇ ಹುದ್ದೆ ಅನ್ನೋ ವಿಶೇಷವೊಂದು ನಮ್ಮ ಪಕ್ಷದಲ್ಲಿದೆ. ಆ ಕಾರಣಕ್ಕಾಗಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷ ಸ್ಥಾನವನ್ನು ನನಗೆ ಬಿಟ್ಟುಕೊಟ್ಟರು. ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಟಿ ರವಿ ಅವರ ಸ್ಥಾನವನ್ನು ಮಹೇಶ್ ತೆಂಗಿನಕಾಯಿ ವಹಿಸಿಕೊಂಡರು. ಉಪಾಧ್ಯಕ್ಷ ಸ್ಥಾನವನ್ನು ಸುರಾನಾ ಹಾಗೂ ಭಾನು ಪ್ರಕಾಶ್ ಅವರಿಗೆ ವಹಿಸಲಾಯಿತು ಎಂದು ಅವರು ತಿಳಿಸಿದರು.
ಕಳೆದ ಹತ್ತಾರು ವರ್ಷಗಳಿಂದ ಹೋರಾಟ ಮಾಡಿರುವುದರಿಂದ ಬಿಎಸ್‍ವೈ ಅವರಿಗೆ ಅತೀ ಹೆಚ್ಚು ಅನುಭವಗಳಿವೆ. ಗ್ರಾಮ ಗ್ರಾಮದ ಬಗ್ಗೆ ಮಾಹಿತಿ ಇದೆ. ಆ ಎಲ್ಲಾ ಮಾಹಿತಿಗಳನ್ನು ನನಗೆ ಕೊಡುತ್ತಾರೆ. ಈ ಮೂಲಕ ಸಂಘಟನೆಯ ಕಾರ್ಯವನ್ನು ನಾನು ನೋಡಿಕೊಳ್ಳುತ್ತೇನೆ ಎಂದರು.
ಅನರ್ಹರ ಕೈ ಬಿಡಲ್ಲ:
ಅನರ್ಹ ಶಾಸಕರಿಗೆ ಅಮಿತ್ ಶಾ ಅವರು ಟಿಕೆಟ್ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಇತ್ತೀಚೆಗೆ ಯಡಿಯೂರಪ್ಪ ಅವರು ಹೇಳಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಒಟ್ಟಿನಲ್ಲಿ ಅವರಿಗೆ ಅನ್ಯಾಯ ಆಗದ ರೀತಿಯಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದರು.
ಬಿಎಸ್‍ವೈ ನನ್ನ ಮಧ್ಯೆ ಮುನಿಸಿಲ್ಲ:
ಬಿಬಿಎಂಪಿ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗು ಕಟೀಲ್ ಗೂ ಅಂತರವಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಮೇಯರ್ ಚುನಾವಣೆ ಸಂಬಂಧ 3 ಮೀಟಿಂಗ್ ಮಾಡಿದ್ದೆವು. ಆ ಬಳಿಕ ಮುಖ್ಯಮಂತ್ರಿಗಳು ಇಲ್ಲಿನ ಶಾಸಕರನ್ನು ಕರೆದು ಸಭೆ ಮಾಡಿದರು. ಅವರು ಸಮಿತಿ ರಚನೆ ಮಾಡಿರಲಿಲ್ಲ. ಆದರೆ ಕೆಲವರು ಪ್ರಮುಖರಿಗೆ ಅಭಿಪ್ರಾಯ ಸಂಗ್ರಹಿಸುವ ಜವಬ್ದಾರಿ ನೀಡಿದರು. ಆ ಬಳಿಕ ಸಿಎಂ ಅವರನ್ನು ಭೇಟಿ ಮಾಡಿದಾಗ ಒಟ್ಟಾಗಿ ಅಭಿಪ್ರಾಯ ಸಂಗ್ರಹಿಸಿ, ಅದರ ಮುಂದಾಳತ್ವ ನೀನು ತಗೋ ಎಂದು ಸಿಎಂ ನನಗೆ ಹೇಳಿದರು. ಹೀಗಾಗಿ ಮತ್ತೆ ವಾಪಸ್ ಪ್ರಮುಖರನ್ನು ಕರೆದೆವು. ಈ ಮಧ್ಯೆ ಚುನಾವಣೆ ಮುಂದೂಡಬೇಕು ಎಂದಾಯ್ತು. ಇದಕ್ಕೆ ಅಧಿಕಾರಿಗಳು ಒಪ್ಪಿರಲಿಲ್ಲ. ಆದರೆ ಚುನಾವಣೆ ಮಾಡುವ ಎಂದು ಸಿಎಂ ಹೇಳಿದರು. ಹೀಗಾಗಿ ಸಿಎಂ ಆದೇಶದ ಮೇರೆಗೆ ಚುನಾವಣೆ ನಡೆದಿದೆ. ಚುನಾವಣೆಯ ವೇಳೆ ನಾನು ಮಂಗಳೂರಲ್ಲಿದ್ದೆ ಅವರು ಶೀವಮೊಗ್ಗದಲ್ಲಿದ್ದರು. ನಾನು ಬಂದು ಇಲ್ಲಿ ಅಭಿಪ್ರಾಯ ಸಂಗ್ರಹಿಸಲು ತಿಳಿಸಿದರು. ಅಂತೆಯೇ ನಾನು ಮೀಟಿಂಗ್ ಕರೆದು ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಎಲ್ಲರ ಅಭಿಪ್ರಾಯದಂತೆ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಮಾಡಲಾಗಿದೆ ಎಂದರು.
ಬಿಎಸ್‍ವೈ ಹೊಗಳಿದ ಕಟೀಲ್:
ಸಿಎಂ ವಿರೋಧಿಗಳಿಗೆ ಮಣೆ ಹಾಕಿ ಬಿಎಸ್‍ವೈ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎನ್ನುವ ಆರೋಪ ಸ್ವಪಕ್ಷೀಯರಿಂದಲೇ ಕೇಳಿಬರುತ್ತಿದ್ದರೂ ಬುಧವಾರ ಚಿಕ್ಕೋಡಿಯಲ್ಲಿ ಗಾಂಧೀಜಿ ತತ್ವ ಸಿದ್ಧಾಂತ ಸಾರುವ ಗಾಂಧಿ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಎಸ್‍ವೈಯನ್ನು ಕಟೀಲ್ ಗುಣಗಾನ ಮಾಡಿದ್ದರು. ನಾನು ದಿನಕ್ಕೆ ಎರಡು ಬಾರಿ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ. ಭಾರತೀಯ ಜನತಾ ಪಾರ್ಟಿಗೆ ಯಡಿಯೂರಪ್ಪ ಸುಪ್ರಿಂ ನಾಯಕ ಎಂದು ಬಣ್ಣಿಸಿದ್ದರು.
ಯಾರು ಏನೇ ಬರೆದುಕೊಳ್ಳಲಿ ಅದು ನಮಗೆ ಬೇಕಾಗಿಲ್ಲ. ಪ್ರತಿಯೊಂದು ಹೆಜ್ಜೆಯಲ್ಲಿ ಟೀಕೆ, ಜಗಳ ಹಚ್ಚುವ ಕೆಲಸವಾಗುತ್ತಿದೆ. ಆದರೆ ಅವರ ಜತೆ ನಾನು ದಿನಕ್ಕೆ ಎರಡು ಬಾರಿ ಮಾತನಾಡಿ ನಾನು ಮಾರ್ಗದರ್ಶನ ಪಡೆಯುತ್ತೇನೆ. ರಾಷ್ಟ್ರದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಣೆ ಮಾಡಿದ್ದು ಯಡಿಯೂರಪ್ಪ ಎಂದು ಕೊಂಡಾಡಿದ್ದರು.