ಮಂಗಳೂರು: ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್‌ನ ಅತ್ಯಂತ ಹೀನಾಯ ರಾಜಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೊದಲ ಅಲೆ, ಎರಡನೇ ಅಲೆ ಬಂದಾಗಲೂ ಟೀಕೆಯೊಂದನ್ನು ಬಿಟ್ಟು ಬೇರೆ ಏನನ್ನೂ ಇವರು ಮಾಡಲಿಲ್ಲ. ಈಗಲೂ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಟೀಕಿಸಿದರು.
ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಎಲ್ಲರೂ ಹೆಚ್ಚು ಎಚ್ಚರಿಕೆಯನ್ನು ವಹಿಸಬೇಕು. ಈ ಹಿನ್ನೆಲೆಯಲ್ಲಿ ನಾವು ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವ ಜನರ ಸಂಖ್ಯೆಯನ್ನು 800 ರಿಂದ 300ಕ್ಕೆ ಇಳಿಸಿದ್ದೇವೆ. ಸರ್ಕಾರದ ನಿಯಮದ ಪ್ರಕಾರ ನಮ್ಮ ಬೇರೆ ಚಟುವಟಿಕೆಗಳನ್ನು ನಿಲ್ಲಿಸುವುದರ ಕುರಿತು ಯೋಚಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮೇಕೆದಾಟು ರಾಜಕಾರಣ ಮಾಡುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು.
ನಿಮ್ಮದೇ ಸರ್ಕಾರ ಮತ್ತು ನಿಮ್ಮದೇ ಮುಖ್ಯಮಂತ್ರಿ ಇದ್ದಾಗ ಯಾಕೆ ನೀವು ಮೇಕೆದಾಟು ಬಗ್ಗೆ ಚರ್ಚೆ ಹಾಗೂ ತಯಾರಿ ನಡೆಸಲಿಲ್ಲ ಎಂದು ಪ್ರಶ್ನಿಸಿದ ಅವರು, ಇವತ್ತು ನಮ್ಮ ಸರ್ಕಾರ ಸಂಪೂರ್ಣ ಬದ್ಧತೆ ಹೊಂದಿದೆ. ನಾವು ಮೇಕೆದಾಟು ಮಾಡಿಯೇ ಮಾಡುತ್ತೇವೆ. ನಮ್ಮ ಕಾಲದಲ್ಲೇ ಅದು ಆಗುತ್ತದೆ. ಅದಕ್ಕೆ ಈ ಕಾಂಗ್ರೆಸ್ ಪಾದಯಾತ್ರೆ ಅಗತ್ಯ ಖಂಡಿತಾ ಇಲ್ಲ ಎಂದರು.
ಕಾಂಗ್ರೆಸ್‌ನವರು ರಾಜ್ಯದಲ್ಲಿ ಪಾದಯಾತ್ರೆ ಮಾಡಿ ಕೊರೊನಾವನ್ನು ವಿಸ್ತಾರ ಮಾಡಲು ನೋಡುತ್ತಿದ್ದಾರೆ. ಇದರಿಂದ ಖಂಡಿತಾ ಕೊರೋನಾ ಹೆಚ್ಚಳವಾಗುತ್ತದೆ. ಇದಕ್ಕೆ ಕಾಂಗ್ರೆಸ್‌ನವರೇ ನೇರ ಹೊಣೆಗಾರರಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಲಾಕ್‍ಡೌನ್ ಮಾಡೋ ಉದ್ದೇಶ ಸರ್ಕಾರಕ್ಕೆ ಇಲ್ಲ: ಬಿ.ಸಿ ಪಾಟೀಲ್
ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಸರ್ಕಾರ ಮುನ್ನೆಚ್ಚರಿಕೆಗಾಗಿ ಹಲವು ಗೈಡ್ ಲೈನ್‌ಗಳನ್ನು ತರುತ್ತದೆ. ಲಾಕ್ ಡೌನ್‌ನ ಬಗ್ಗೆ ಚರ್ಚೆ ಇಲ್ಲ, ತಜ್ಞರ ವರದಿ ಆಧಾರದಲ್ಲಿ ಕೋವಿಡ್ ನಿಯಂತ್ರಿಸುತ್ತಾರೆ. ಜನರೇ ಸ್ವಯಂ ಆಗಿ ಈ ಕೋವಿಡ್ ನಿಯಂತ್ರಣ ಮಾಡಬೇಕಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‍ನವರೇ ಮೇಕೆದಾಟು ಯೋಜನೆಯ ಪಾದಯಾತ್ರೆಯನ್ನು ಕೈಬಿಡಿ: ಎಸ್.ಟಿ ಸೋಮಶೇಖರ್
ದೇವಸ್ಥಾನಗಳಿಗೆ ಸ್ವಾಯತ್ತತೆ ಕೊಡುವ ಸಿಎಂ ಬೊಮ್ಮಾಯಿಯವರ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದ ಅವರು ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಹೊಂದಿದೆ. ಅಲ್ಪಸಂಖ್ಯಾತ ಮತಕ್ಕಾಗಿ ಹಿಂದೂ ಸಮಾಜಕ್ಕೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ. ಕಾಂಗ್ರೆಸ್ ಸಂಪೂರ್ಣ ಹಿಂದೂ ವಿರೋಧಿ ನೀತಿಯಲ್ಲಿದೆ ಎಂದು ಟೀಕಿಸಿದರು.