ಮಂಡ್ಯ: ಕೆ.ಆರ್.ಪೇಟೆಯಲ್ಲಿ ವಿಜಯೇಂದ್ರ ಮತ್ತು ನಾರಾಯಣಗೌಡರು ಜೋಡೆತ್ತುಗಳು. ತಾಕತ್ ಇದ್ದವರು ಈ ಜೋಡೆತ್ತುಗಳನ್ನು ನಿಲ್ಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲೆಂಜ್ ಮಾಡಿದ್ದಾರೆ.
ಕೆ.ಆರ್.ಪೇಟೆಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಜನ್ಮ ಕೊಟ್ಟ ಪುಣ್ಯ ಭೂಮಿ ಕೆ.ಆರ್.ಪೇಟೆ. ಇಲ್ಲಿಂದಲೇ ಚುನಾವಣೆ ಪ್ರಚಾರ ಪ್ರಾರಂಭಿಸುತ್ತಿದ್ದೇನೆ. ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟ ನಾಯಕನ ಊರು ಇದು. ಸ್ವಾಭಿಮಾನಕ್ಕಾಗಿ ನಾರಾಯಣಗೌಡರು ರಾಜೀನಾಮೆ ಕೊಟ್ಟಿದ್ದಾರೆ. ಇದು ಅಧಿಕಾರದ ಸ್ವಾಭಿಮಾನವಲ್ಲ, ಅಭಿವೃದ್ಧಿಯ ಸ್ವಾಭಿಮಾನ ಎಂದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ನೀವು ನಾರಾಯಣಗೌಡ ಅವರನ್ನು ಗೆಲ್ಲಿಸಬೇಕು. ನಾವು ಗೂಂಡಾ ರಾಜಕೀಯ, ಜಾತಿ ರಾಜಕೀಯ ಎಲ್ಲವನ್ನೂ ನಿಲ್ಲಿಸುತ್ತೇವೆ. ಮೊದಲ ಬಾರಿಗೆ ರಾವಣನ ಪಾರ್ಟಿಯಿಂದ ರಾಮನ ಪಾರ್ಟಿಗೆ ಬಂದಿದ್ದು ವಿಭಿಷಣ. ರಾಕ್ಷಸರ ಜೊತೆ ಇದ್ದರೆ ಮೋಕ್ಷ ಸಿಗುವುದಿಲ್ಲ ಎಂದು ರಾಮನ ಕಡೆ ಬಂದರು. ಈಗ ಕಲಿಯುಗದ ವಿಭಿಷಣ ನಾರಾಯಣಗೌಡರು . ಹಾಗಿದ್ದರೆ ಈಗ ರಾಮ ಯಡಿಯೂರಪ್ಪನವರಾಗಿದ್ದಾರೆ ಎಂದು ಬಿಎಸ್‍ವೈ ಅವರನ್ನು ಹಾಡಿ ಹೊಗಳಿದರು.
ಈಗ ಕೆ.ಆರ್.ಪೇಟೆ ರಾಮ ರಾಜ್ಯವಾಗುತ್ತದೆ. ನಿಮಗೆ ರಾಮ ರಾಜ್ಯ ಬೇಕಾ ಅಥವಾ ರಾವಣ ರಾಜ್ಯ ಬೇಕಾ? ರಾಮ ರಾಜ್ಯವಾಗಬೇಕು ಎಂದರೆ ನಾರಾಯಣಗೌಡರು ಗೆಲ್ಲಬೇಕು ಎಂದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಕುರಿತು ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂದು ಜನರ ನಿರೀಕ್ಷೆ ಆಗಿತ್ತು. ಕರ್ನಾಟದಂತೆ ಅಲ್ಲೂ ಸಹ ವಿಭಿನ್ನ ನಡೆಯ ಎರಡು ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದವು. ಆದರೆ ಈಗ ಜನಾದೇಶಕ್ಕೆ ಬೆಲೆ ಬಂದಿದೆ ನಾವು ಸರ್ಕಾರದ ವಿಶ್ವಾಸ ಮತ ಯಾಚನೆ ಮಾಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ರಾತ್ರೋ ರಾತ್ರಿ ರಾಷ್ಟ್ರಪತಿ ಆಡಳಿತ ವಾಪಸ್ ಪಡೆದ ಕುರಿತು ಪ್ರತಿಕ್ರಿಯಿಸಿದ ಅವರು, ರಾಷ್ಟ್ರದ ಹಿತಕ್ಕಾಗಿ ರಾಷ್ಟ್ರಪತಿ ಭವನ, ಕೋರ್ಟ್ ಗಳು ಕೆಲವು ವೇಳೆ ಕೆಲಸ ಮಾಡಬೇಕಾಗುತ್ತದೆ. ಹಿಂದೆ ತುರ್ತುಸ್ಥಿತಿ ಸಂದರ್ಭವನ್ನು ನೆನಪು ಮಾಡಿಕೊಳ್ಳಿ. ಆಗ ರಾಷ್ಟ್ರಪತಿ ಭವನದ ದುರುಪಯೋಗವಾಗಿರಲಿಲ್ಲವೇ ಎಂದು ಪ್ರಶ್ನಿಸಿದರು.