– ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ
– ಅಪಘಾತ ಕುರಿತು ಡಿಸಿಪಿ ರವಿಕಾಂತೇಗೌಡ ಸ್ಪಷ್ಟನೆ
ಬೆಂಗಳೂರು: ಭಾನುವಾರ ಮೇಖ್ರಿ ಸರ್ಕಲ್ ಅಂಡರ್ ಪಾಸ್‍ನಲ್ಲಿ ಸರಣಿ ಅಪಘಾತ ಮಾಡಿ ಬೆಂಟ್ಲಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ಚಾಲಕ ಯಾರು ಎನ್ನುವುದು ತನಿಖೆಯಿಂದ ಪೊಲೀಸರಿಗೆ ಗೊತ್ತಾಗಿದೆ. ಕಾರಿನ ಚಾಲಕ ಶಾಂತಿನಗರದ ಶಾಸಕ ಎಸ್.ಎ.ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಎಂದು ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದ್ದು, ಈಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಅಪಘಾತದ ಬಗ್ಗೆ ಡಿಸಿಪಿ ರವಿಕಾಂತೇಗೌಡ ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
Advertisement
ಮೇಖ್ರಿ ಸರ್ಕಲ್ ಅಂಡರ್ ಪಾಸ್‍ನಲ್ಲಿ ಬೆಂಟ್ಲಿ ಕಾರೊಂದು ಅಪಘಾತ ಮಾಡಿದ್ದು, ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಕಾಲು ಮುರಿದಿದ್ದು, ಒಂದು ಆಟೋ ಕೂಡ ಡ್ಯಾಮೇಜ್ ಆಗಿದೆ. ಅತಿವೇಗವಾಗಿ, ನಿರ್ಲಕ್ಷ್ಯವಾಗಿ ವಾಹನವನ್ನು ಚಾಲನೆ ಮಾಡಿದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿತ್ತು. ಆದರೆ ಚಾಲಕ ಅಲ್ಲಿಂದ ಓಡಿಹೋಗಿದ್ದನು. ಸೋಮವಾರ ನಾನೇ ಅಪಘಾತ ಮಾಡಿದ್ದು ಎಂದು ಓರ್ವ ಬಂದು ಶರಣಾಗಿದ್ದನು. ಆದರೆ ನಮ್ಮ ವಿಚಾರಣೆಯಲ್ಲಿ ಈತ ವಾಹನ ಚಾಲನೆ ಮಾಡಿರಲಿಲ್ಲ ಎಂಬುದು ಗೊತ್ತಾಗಿದೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.
Advertisement
ಅಪಘಾತ ಮಾಡಿದ್ದು, ಮೊಹಮ್ಮದ್ ನಲಪಾಡ್ ಎಂದು ಗೊತ್ತಾಗಿದೆ. ಈಗ ನಲಪಾಡ್‍ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಪೊಲೀಸರು ನಿರ್ಧಾರಿಸಿದ್ದಾರೆ. ಹೀಗಾಗಿ ಪೊಲೀಸ್ ನೋಟಿಸ್ ತಲುಪಿದ ತಕ್ಷಣ ವಿಚಾರಣೆಗೆ ಹಾಜರಾಗಬೇಕಾಗುತ್ತೆ. ವಿಚಾರಣೆಗೆ ಹಾಜರಾದಾಗ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನಮಗೆ ಖಚಿತ ಸಾಕ್ಷ್ಯಾಧಾರಗಳ ಮೇಲೆ ನಲಪಾಡ್‍ಯೇ ಕಾರ್ ಓಡಿಸುತ್ತಿದ್ದನು ಎಂದು ತಿಳಿದುಬಂದಿದೆ. ನ್ಯಾಯಾಲಯಕ್ಕೆ ನಾವು ದೋಷಾರೋಪಣ ಪಟ್ಟಿಯನ್ನು ಸಲ್ಲಿಸುತ್ತೇವೆ. ನ್ಯಾಯಾಲಯವು ಶಿಕ್ಷೆಯನ್ನು ತೀರ್ಮಾನ ಮಾಡುತ್ತದೆ ಎಂದು ಡಿಸಿಪಿ ವಿವರಿಸಿದರು.
Advertisement
ಏನಿದು ಪ್ರಕರಣ?
ಕಳೆದ ಭಾನುವಾರ ಮಧ್ಯಾಹ್ನ ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳದ ಕಡೆಯಿಂದ ಮೇಖ್ರಿ ಸರ್ಕಲ್ ಅಂಡರ್ ಪಾಸ್ ಮೂಲಕ ಹೋಗುತ್ತಿದ್ದ ಬೆಂಟ್ಲಿ ಕಾರ್ ಬೈಕ್ ಮತ್ತು ಆಟೋಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಆಟೋ ಚಾಲಕ ಸುಹೇಲ್ ಮತ್ತು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಸಬೀಹಾ ಮತ್ತು ಅವರ ಆರು ವರ್ಷದ ಬಾಲಕನಿಗೆ ಗಾಯಗಳಾಗಿದ್ದವು. ಅಪಘಾತದ ಬಳಿಕ ಐಷಾರಾಮಿ ಕಾರಿನ ಚಾಲಕ ಸ್ಥಳದಲ್ಲೇ ಕಾರನ್ನು ಬಿಟ್ಟು ಓಡಿ ಹೋಗಿದ್ದನು. ಈ ಕುರಿತು ಎಫ್‍ಐಆರ್ ದಾಖಲಾಗಿತ್ತು.
ಅಪಘಾತವಾದಾಗ ನಲಪಾಡ್ ಯಾರ ಕಣ್ಣಿಗೂ ಕಾಣಿಸಲಿಲ್ಲ. ಆದರೆ ನಲಪಾಡ್ ಸಂಬಂಧಿ ನಫಿ ಮೊಹಮದ್ ನಸೀರ್ ಮತ್ತು ಬಾಡಿಗಾರ್ಡ್ ಬಾಲಕೃಷ್ಣ ಕಾಣಿಸಿಕೊಂಡಿದ್ದರು. ಸಂಚಾರ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ಕಾರನ್ನು ಚಲಾಯಿಸುತ್ತಿದ್ದವನು ನಲಪಾಡ್ ಎನ್ನುವ ಸುಳಿವು ಸಿಕ್ಕಿತ್ತು. ಅಲ್ಲದೇ ಭಾನುವಾರ ಒಂದೇ ದಿನ ನಗರದ ಎರಡು ಕಡೆ ಎರಡು ಕಾರುಗಳು ಅಪಘಾತ ಮಾಡಿದ್ದವು.
ಈ ಬಗ್ಗೆ ಮಾಧ್ಯಮವೊಂದು ನಲಪಾಡ್‍ನನ್ನು ಪ್ರಶ್ನೆ ಮಾಡಿದಾಗ, ಮೊದಲಿಗೆ ನನಗೂ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಅಪಘಾತಕ್ಕೂ ನನಗೂ ಸಂಬಂಧ ಕಲ್ಪಿಸಬೇಡಿ. ನನಗೆ ಯಾವ ಬಾಡಿಗಾರ್ಡ್ ಕೂಡ ಇಲ್ಲ ಎಂದು ಹೇಳಿದ್ದನು. ನಂತರ ಶಾಸಕರ ಮಗ ಆಗಿದ್ದೇನೆ ಎಂಬ ಮಾತ್ರಕ್ಕೆ ಅಪಘಾತ ಆಗಬಾರದಾ? ಬೇರೆಯವರು ಅಪಘಾತ ಮಾಡುವುದನ್ನು ಸುದ್ದಿ ಮಾಡುವುದಿಲ್ಲ. ಆದರೆ ಶಾಸಕರ ಮಗ ಅಪಘಾತ ಮಾಡಿದರೆ ಮಾತ್ರ ಏಕೆ ಸುದ್ದಿ ಆಗಬೇಕು ಎಂದು ಪ್ರಶ್ನಿಸಿದ್ದನು.
ಈ ಹಿಂದೆ ಮೊಹಮ್ಮದ್ ನಲಪಾಡ್ ಯುವಕನೊಬ್ಬನ ಮೇಲೆ ಬಾರಿನಲ್ಲಿ ಹಲ್ಲೆ ನಡೆಸಿ 116 ದಿನ ಜೈಲು ಪಾಲಾಗಿದ್ದನು.