ಚಿಕ್ಕಮಗಳೂರು: ತಾಲೂಕಿನ ದತ್ತಪೀಠದಲ್ಲಿ ನಡೆದ ದತ್ತಜಯಂತಿಯ ಕಾರ್ಯಕ್ರಮದ ಮುನ್ನ ದತ್ತಪೀಠದ ರಸ್ತೆಯುದ್ಧಕ್ಕೂ ಮೊಳೆಗಳನ್ನ ಚೆಲ್ಲಿದ್ದ ಆರೋಪಿಗಳ ಪೈಕಿ ಮತ್ತೊಬ್ಬ ಆರೋಪಿ ಕೋರ್ಟ್‌ಗೆ ಶರಣಾಗಿದ್ದಾನೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ದತ್ತಜಯಂತಿಯ ಅಂಗವಾಗಿ ಜಿಲ್ಲಾಡಳಿತ ಚಿಪ್ಸ್ ಕೆಫೆ ಮೂಲಕ ದತ್ತಪೀಠದಲ್ಲಿ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಹೋಗಿದ್ದ ಮೊಹಮ್ಮದ್ ಶಹಬಾಸ್ ಹಾಗೂ ವಾಹೀದ್ ಹುಸೇನ್‌ರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದರು.
ಅವರು ಮೊಳೆ ಖರೀದಿಸಿದ್ದು ಎಲ್ಲಿ? ಎಂತಹಾ ಮೊಳೆ? ಎಲ್ಲಾ ಮಾಹಿತಿ ಕಲೆ ಹಾಕಿ ಇಬ್ಬರನ್ನು ಬಂಧಿಸಿದ್ದರು. ಆದರೆ ಉಳಿದ ನಾಲ್ಕೈದು ಜನ ತಲೆಮರೆಸಿಕೊಂಡಿದ್ದರು. ಇದನ್ನೂ ಓದಿ: ದತ್ತಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಮೊಳೆ ಸುರಿದಿದ್ದ ಇಬ್ಬರ ಬಂಧನ
ಡಿಸೆಂಬರ್ 6-7-8ರಂದು ದತ್ತಪೀಠದಲ್ಲಿ ದತ್ತಜಯಂತಿ ಕಾರ್ಯಕ್ರಮ ನಡೆದಿತ್ತು. ಡಿಸೆಂಬರ್ 5ರಂದು ಜಿಲ್ಲಾಡಳಿತವೇ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಇಬ್ಬರನ್ನು ಕಳುಹಿಸಿತ್ತು. ಆಗ ಇಬ್ಬರು ದತ್ತಪೀಠದ ಮಾರ್ಗದ ಸುಮಾರು ಮೂರು ಕಿ.ಮೀ.ನಷ್ಟು ದೂರ ಸಣ್ಣ-ಸಣ್ಣ ಮೊಳೆಯನ್ನು ಸುರಿದು ಬಂದಿದ್ದರು.
ಇದರಿಂದ ಪೊಲೀಸರ ವಾಹನ ಸೇರಿ ಐದಾರು ಗಾಡಿಗಳು ಪಂಚರ್ ಆಗಿದ್ದವು. ನಗರವನ್ನು ಕೇಸರಿಮಯವಾಗಿಸಿದ್ದಾರೆ. ನಮ್ಮ ಬಗ್ಗೆ ಅವಹೇಳನಕಾರಿಯಾಗಿ ಕೂಗುತ್ತಾರೆ. ಸಹಿಸಲಾಗದೇ ಕಾರ್ಯಕ್ರಮವನ್ನು ಹಾಳುಮಾಡಬೇಕೆಂದು ನಾವೇ ಹೀಗೆ ಮಾಡಿದ್ದೇವೆ ಎಂದು ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದರು.
ಇಬ್ಬರನ್ನು ಅರೆಸ್ಟ್ ಮಾಡಿದ್ದ ಪೊಲೀಸರು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಶುಕ್ರವಾರ ಇಬ್ಬರು ಅರೆಸ್ಟ್ ಆಗುತ್ತಿದ್ದಂತೆ ಶನಿವಾರ ಓರ್ವ ನೇರವಾಗಿ ಕೋರ್ಟ್ ಹಾಜರಾಗಿದ್ದಾನೆ. ಪ್ರಕರಣ ಸಂಬಂಧ ಒಟ್ಟು ಮೂವರು ಆರೋಪಿಗಳು ಬಂಧನವಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.