ಕಾರವಾರ: ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿರುವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರ ಮನೆಗೆ ಏಳು ಜನ ನಾಗಾ ಸಾಧುಗಳು ಭಾನುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದ್ದಾರೆ.
ಮನೆಯಲ್ಲೇ ಇದ್ದ ಅನಂತಕುಮಾರ್ ಹೆಗ್ಡೆಗೆ ಇವರ ಭೇಟಿ ಅನಿರೀಕ್ಷಿತವಾಗಿತ್ತು. ಹೀಗಾಗಿ ಮೊದಲು ಅವರನ್ನು ಹೆಗ್ಡೆ ಭೇಟಿಮಾಡಲು ಬಿಡದಿದ್ದರೂ ನಂತರ ಅವರು ತಮ್ಮ ಪರಿಚಯ ಹೇಳಿದ ನಂತರ ಅವರನ್ನು ಖುದ್ದು ಅನಂತಕುಮಾರ್ ಹೆಗ್ಡೆ ಹಾಗೂ ಪತ್ನಿ ಶ್ರೀರೂಪ ಹೆಗ್ಡೆ ಅವರು ಬರಮಾಡಿಕೊಂಡು ಪಾದಪೂಜೆ ನೆರವೇರಿಸಿದರು.
Advertisement
Advertisement
ಭೇಟಿ ನೀಡಿದ್ದು ಯಾಕೆ?
ಮುಂಜಾನೆ ಶಿರಸಿ ನಗರಕ್ಕೆ ಆಗಮಿಸಿದ್ದ ಉತ್ತರ ಪ್ರದೇಶದ ನಾಗಸಾಧು ಮಹಾಂತ ರಾಮಗಿರಿ ಸ್ವಾಮೀಜಿ ಹಾಗೂ ಅವರ ಶಿಷ್ಯರು ಎಲ್ಲರೂ ಆಶ್ಚರ್ಯ ಪಡುವಂತೆ ನೇರವಾಗಿ ಶಿರಸಿಯ ಕೆ.ಹೆಚ್.ಬಿ ಕಾಲೋನಿಯ ಅನಂತಕುಮಾರ್ ಹೆಗ್ಡೆ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಆಗಮನ ಅನಂತಕುಮಾರ್ ಹೆಗ್ಡೆಗೆ ಆಶ್ಚರ್ಯ ತಂದಿತ್ತು. ಯಾವುದೇ ಮಾಹಿತಿ ನೀಡದೇ ಭೇಟಿ ನೀಡಿದ್ದರೂ ಪತ್ನಿ ಸಮೇತರಾಗಿ ಅವರನ್ನು ಮನೆಯೊಳಗೆ ಕರೆದು ಪಾದಪೂಜೆ ಮಾಡಿ ಫಲಪುಷ್ಪಗಳನ್ನು ನೀಡಿ ಗೌರವಿಸಿದರು.
Advertisement
Advertisement
ನಂತರ ಏಳುಜನ ನಾಗಸಾಧುಗಳು ಹೆಗ್ಡೆ ಕುಟುಂಬಕ್ಕೆ ಆಶಿರ್ವಾದ ಮಾಡಿದರು. ಇದರ ಜೊತೆಗೆ ಅನಂತಕುಮಾರ್ ಹೆಗ್ಡೆಗೆ ನಿಮ್ಮ ಹೆಸರು ರಾಷ್ಟಮಟ್ಟದಲ್ಲಿ ಉಜ್ಜಲಿಸಲಿದೆ, ನೀವು ಉತ್ತಮ ಪದವಿ ಪಡೆಯುತ್ತೀರಿ, ನಿಮ್ಮ ಹೆಸರು ಅಜರಾಮರವಾಗಲಿದೆ. ಸತ್ಯ ನಿಷ್ಟೆಯಿಂದ ಹೆಸರು ಮಾಡುತ್ತೀರಿ, ಈ ಬಾರಿ ವಿಜಯ ನಿಮ್ಮದಾಗಲಿದೆ ಎಂದು ಭವಿಷ್ಯ ನುಡಿದು ಹರಸಿದರು.
ಸುಮಾರು ಒಂದು ಗಂಟೆಗಳ ಕಾಲ ಹೆಗ್ಡೆ ಮನೆಯಲ್ಲಿದ್ದ ನಾಗಸಾಧುಗಳು ರಾಮಮಂದಿರ ಸೇರಿದಂತೆ ರಾಜಕೀಯ ಕುರಿತು ಮಾತುಕತೆ ನಡೆಸಿದರು ಎಂಬುದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ. ಉತ್ತರ ಪ್ರದೇಶದ ಮಹಾಂತ ರಾಮಗಿರಿ ಸ್ವಾಮೀಜಿ, ತಾವು ದೇಶ ಸುತ್ತುತ್ತಿದ್ದು ದೇಶದ ಪ್ರಮುಖ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ಈ ವೇಳೆ ಆ ಪ್ರದೇಶದ ಪ್ರಮುಖ ಜನರನ್ನು ಭೇಟಿ ಮಾಡಿ ಹೋಗುತ್ತಿದ್ದೇವೆ. ಮುಂದೆ ಯಾವ ದಿಕ್ಕಿಗೆ ಹೋಗುತ್ತೇವೆ ಎಂಬುದು ತಿಳಿದಿಲ್ಲ. ದೇವರ ಇಚ್ಚೆಯಂತೆ ಪ್ರತಿ ಸ್ಥಳವನ್ನೂ ಭೇಟಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.