ನಾಗರ ಪಂಚಮಿ | ಭಾರತದಲ್ಲಿ ಎಲ್ಲೆಲ್ಲಿ, ಆಚರಣೆ ಹೇಗೆ?

Public TV
5 Min Read
Naga Panchami

ಶ್ರಾವಣ ಮಾಸದಲ್ಲಿ ನಾವು ಸ್ವಾಗತಿಸುವ ಮೊದಲ ಹಬ್ಬ ನಾಗರ ಪಂಚಮಿ (Naga Panchami). ನಾಗ ಪಂಚಮಿ, ಹೆಸರೇ ಸೂಚಿಸುವಂತೆ ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಮುಂಬರುವ ಎಲ್ಲಾ ಹಬ್ಬಗಳಿಗೂ ಆದಿಯಾಗಿದೆ. ಮಹಿಳೆಯರು ಉಪವಾಸ ಆಚರಿಸುತ್ತಾರೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ, ಆಭರಣಗಳನ್ನು ಧರಿಸುತ್ತಾರೆ. ತಮ್ಮ ಸಹೋದರನ ಆರೋಗ್ಯ ಮತ್ತು ಯಶಸ್ಸಿಗಾಗಿ ನಾಗದೇವತೆಗೆ ಪೂಜೆ ಸಲ್ಲಿಸುತ್ತಾರೆ. ನಾಗದೋಷ ನಿವಾರಣೆ, ನಾಗನಿಂದ ರಕ್ಷಣೆಗೆ ಪ್ರಾರ್ಥಿಸಿ ಆಚರಿಸುವ ಹಬ್ಬ ಇದು ಎಂದು ನಂಬಲಾಗಿದೆ.

nagara panchami 9

ಭಿನ್ನ ಸಂಸ್ಕೃತಿ, ಆಚರಣೆಗಳಿಗೆ ನೆಲೆಯಾಗಿರುವ ದೇಶ ಭಾರತ. ದೇಶಾದ್ಯಂತ ಭಿನ್ನ ರೀತಿಯಲ್ಲೇ ನಾಗರ ಪಂಚಮಿ ಹಬ್ಬ ಆಚರಣೆ ಮಾಡಲಾಗುತ್ತದೆ. ಮಧ್ಯ ಭಾರತ, ಉತ್ತರ ಮತ್ತು ವಾಯುವ್ಯ ಭಾರತ, ಪಶ್ಚಿಮ ಭಾರತ, ಪೂರ್ವ ಮತ್ತು ಈಶಾನ್ಯ ಭಾರತ, ದಕ್ಷಿಣ ಭಾರತದಲ್ಲಿ (Naga Panchami In India) ವಿಶಿಷ್ಟ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಹಬ್ಬ ಆಚರಿಸಲಾಗುತ್ತದೆ. ಹಿಂದೆ ಅಖಂಡ ಭಾರತದ ಭಾಗವೇ ಆಗಿದ್ದ ನೇಪಾಳ, ಪಾಕಿಸ್ತಾನದಲ್ಲಿ ಈಗಲೂ ನಾಗರ ಪಂಚಮಿ (Naga Panchami In Pakistan) ಆಚರಿಸುವುದುಂಟು. ಈ ಭಾಗಗಳಲ್ಲಿ ವಿಶಿಷ್ಟ ರೀತಿಯಲ್ಲಿ ನಾಗಾರಾಧನೆ ಮಾಡುವ ಸಂಪ್ರದಾಯವಿದೆ.

nagara panchami 8

ಮಧ್ಯಭಾರತ:
ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಆಚರಣೆಗೆ ಹೆಚ್ಚು ಮಹತ್ವವಿದೆ. ಹೆಸರೇ ಸೂಚಿಸುವಂತೆ ನಾಗಪುರವು ‘ನಾಗ’ ಜನರ ತಾಯ್ನಾಡು. ಕಾಲಾನಂತರದಲ್ಲಿ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಹಲ್‌ನಲ್ಲಿರುವ ನಾಗೋಬಾ ದೇವಸ್ತರವಾಡುಲ್ಲಿ ನಾಗ ಪಂಚಮಿ ದಿನದಂದು ಪೂಜೆ ಸಲ್ಲಿಸಲಾಗುತ್ತದೆ. ‘ನಾಗದ್ವಾರ ಯಾತ್ರೆ’ ಕೂಡ ಮಾಡಲಾಗುತ್ತದೆ. ಯಾತ್ರಗಾಗಿ ದೊಡ್ಡ ದೊಡ್ಡ ಕಡಾಯಿಯಲ್ಲಿ ಬೇಯಿಸುತ್ತಾರೆ.

ವರ್ಷದಲ್ಲಿ ಒಂದು ದಿನ ಮಾತ್ರೆ ದೇಗುಲ ಓಪನ್
ಮಹಾಕಾಳೇಶ್ವರ ಜೋತಿರ್ಲಿಂಗ ದೇವಾಲಯದ ಮೂರನೇ ಮಹಡಿಯಲ್ಲಿ ನಾಗ ಚಂದ್ರೇಶ್ವರ ಉಜ್ಜಯಿನಿ ಎಂಬ ಉಪದೇವಾಲಯವಿದೆ. ಇದು ವರ್ಷದಲ್ಲಿ ಒಂದೇ ದಿನ, ನಾಗಪಂಚಮಿಯಂದು ಮಾತ್ರ ತೆರೆದಿರುತ್ತದೆ. ವರ್ಷದ ಉಳಿದ ದಿನಗಳಲ್ಲಿ ಮುಚ್ಚಿರುತ್ತದೆ. 10 ಹೆಡೆಯ ಹಾವಿನ ಮೇಲೆ ಶಿವ ಮತ್ತು ಪಾರ್ವತಿ ಕುಳಿತಿರುವ ನಾಗಚಂದ್ರೇಶ್ವರ ಮೂರ್ತಿ (Nagchandreshwar Statue) ಇಲ್ಲಿದೆ. ಸುತ್ತ ನಂದಿ ಗಣೇಶ, ಇತರೆ ಮೂರ್ತಿಗಳು ಇದರ ಸುತ್ತ ಇವೆ. ನಾಗ ಪಂಚಮಿಯಂದು ವಿಶೇಷ ಪೂಜೆ ಸಲ್ಲಿಸುವುದರಿಂದ ನಾಗದೋಷ, ಸರ್ಪದೋಷ ಸೇರಿ ಯಾವುದೇ ತೊಂದರೆಗಳಿಂದ ಭಕ್ತ ಮುಕ್ತಿ ಹೊಂದಬಹುದು ಎಂಬ ನಂಬಿಕೆಯಿದೆ.

nagara panchami 5

ಉತ್ತರ ಮತ್ತು ವಾಯುವ್ಯ ಭಾರತ
ಉತ್ತರ ಭಾರತದಾದ್ಯಂತ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಕಾಶ್ಮೀರದಲ್ಲಿ ಐತಿಹಾಸಿಕ ಕಾಲದಿಂದಲೂ ಹಿಂದೂಗಳು ಹಾವುಗಳನ್ನು ಪೂಜಿಸುತ್ತಿದ್ದಾರೆ. ವಾಯುವ್ಯ ಭಾರತದಲ್ಲಿ ಬನಾರಸ್‌ನಂತಹ ನಗರಗಳಲ್ಲಿ ನಾಗ ಪಂಚಮಿ ಆಚರಣೆಯ ಭಾಗವಾಗಿ ಅಖಾರಾಗಳನ್ನು (ಕುಸ್ತಿ ಅಖಾಡ) ಅಲಂಕರಿಸುತ್ತಾರೆ. ಅಖಾರಾಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ಹಾವುಗಳ ಚಿತ್ರಗಳಿಂದ ಗೋಡೆಗಳನ್ನು ಚಿತ್ರಿಸಲಾಗುತ್ತದೆ. ಹಾವುಗಳು ಹಾಲು ಕುಡಿಯುವುದನ್ನು ತೋರಿಸುವ ಹಾವಿನ ಚಿತ್ರಗಳಿಂದ ಅಖಾಡಗಳನ್ನು ಅಲಂಕರಿಸಲಾಗುತ್ತದೆ.

nagara panchami 1

ವಾರಣಾಸಿಯ ನರಸಿಂಗ್‌ಗಢ್ ಅಖಾರಾದಲ್ಲಿ ನಾಗ ರಾಜನಿಗೆ (ನಾಗರ ರಾಜ) ಮೀಸಲಾಗಿರುವ ವಿಶೇಷ ದೇವಾಲಯವಿದೆ. ಅಲ್ಲಿ ಹಾವಿನ ಚಿತ್ರದ ಮೇಲೆ ಒಂದು ಬಟ್ಟಲನ್ನು ತೂಗುಹಾಕಲಾಗುತ್ತದೆ. ಅದರಲ್ಲಿ ಹಾಲನ್ನು ಸುರಿಯಲಾಗುತ್ತದೆ. ಹಾಲು ಹಾವಿನ ದೇವರ ಮೇಲೆ ನೈವೇದ್ಯದ ರೂಪದಲ್ಲಿ ಹರಿಯುತ್ತದೆ. ನಾಗರ ಪಂಚಮಿಯಂದು ಹಾವಾಡಿಗರು ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಎಲ್ಲೆಡೆ ಹಾವುಗಳನ್ನು ತಮ್ಮ ಬುಟ್ಟಿಗಳಲ್ಲಿ ತಂದು ಪ್ರದರ್ಶಿಸುತ್ತಾರೆ. ಇದನ್ನು ವೀಕ್ಷಿಸಲು ಜನರು ಸೇರುತ್ತಾರೆ. ಈ ಸಂದರ್ಭದಲ್ಲಿ ಬುಟ್ಟಿಯಲ್ಲಿರುವ ಹಾವುಗಳನ್ನೂ ಪೂಜಿಸಲಾಗುತ್ತದೆ.

ಪಂಜಾಬ್‌ನಲ್ಲಿ ಈ ಹಬ್ಬವನ್ನು ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ಮತ್ತು ವಿಭಿನ್ನ ಸ್ವರೂಪದಲ್ಲಿ ಆಚರಿಸಲಾಗುತ್ತದೆ. ಇದನ್ನು ಗುಗಾ ನೌವಮಿ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಹಿಟ್ಟಿನಿಂದ ಹಾವಿನ ಮೂರ್ತಿ ತಯಾರಿಸಲಾಗುತ್ತದೆ. ಅದನ್ನು ಒಂದು ಬುಟ್ಟಿಯಲ್ಲಿಟ್ಟು ಊರಲ್ಲೆಲ್ಲ ಮೆರವಣಿಗೆ ಮಾಡಲಾಗುತ್ತದೆ. ಜನರು ಹಿಟ್ಟು ಮತ್ತು ಬೆಣ್ಣೆಯನ್ನು ಅದಕ್ಕೆ ಅರ್ಪಿಸುತ್ತಾರೆ. ಮೆರವಣಿಗೆ ಬಳಿಕ ಅದನ್ನು ಹೂಳಲಾಗುತ್ತದೆ. ಮಹಿಳೆಯರು ಒಂಬತ್ತು ದಿನಗಳ ಕಾಲ ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಮೊಸರು ನೈವೇದ್ಯ ನೀಡುತ್ತಾರೆ.
naga panchami 3

ಪಶ್ಚಿಮ ಭಾರತ
ಪಶ್ಚಿಮ ಭಾರತದಲ್ಲಿ ನಾಗ ಪಂಚಮಿಯನ್ನು ಕೇತರ್ಪಾಲ್ ಅಥವಾ ಕ್ಷೇತ್ರಪಾಲ್ ಎಂದು ಕರೆಯಲಾಗುತ್ತದೆ. ಕಚ್ ಪ್ರದೇಶದಲ್ಲಿ (ಗುಜರಾತ್) ಭುಜಿಯಾ ಎಂಬ ಕೋಟೆಯಲ್ಲಿ ನಾಗದೇವರ ದೇವಾಲಯವಿದೆ. ಇಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷ ನಾಗ ಪಂಚಮಿಯಂದು ದೇವಸ್ಥಾನದ ಆವರಣದಲ್ಲಿ ಜಾತ್ರೆ ನಡೆಯುತ್ತದೆ. ಸಿಂಧಿ ಸಮುದಾಯದಲ್ಲಿ ನಾಗ ಪಂಚಮಿಯನ್ನು ಗೊಗ್ರೋ ಗೌರವಾರ್ಥವಾಗಿ ಆಚರಿಸಲಾಗುತ್ತದೆ.

ಪೂರ್ವ ಮತ್ತು ಈಶಾನ್ಯ ಭಾರತ
ಭಾರತದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಾದ ಪಶ್ಚಿಮ ಬಂಗಾಳ, ಜಾರ್ಖಂಡ್, ಒರಿಸ್ಸಾ ಮತ್ತು ಅಸ್ಸಾಂನಲ್ಲಿ ದೇವಿಯನ್ನು ಮಾನಸ ಎಂದು ಪೂಜಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ, ಮಾನಸ ನಾಗದೇವತೆಯಾಗಿದ್ದು, ಇದನ್ನು ಜರತ್ಕಾರು ಎಂದೂ ಕರೆಯುತ್ತಾರೆ. ಬ್ರಾಹ್ಮಣ ಋಷಿಯ ಪತ್ನಿ ಜರತ್ಕಾರು ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ಮಾನಸ ದೇವಿಯ ಪ್ರತೀಕವಾದ ಮಾನಸ ಸೊ ಸೇಲ್ ಗಿಡದ (ಯೂಫೋರ್ಬಿಯಾ ಲಿಂಗುಲಾರಮ್) ರೆಂಬೆಯನ್ನು ನೆಲದ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ದೇಶದ ಇತರ ಭಾಗಗಳಲ್ಲಿ ಶ್ರಾವಣ ಮಾಸದಲ್ಲಿ ಮಾತ್ರವಲ್ಲದೆ, ಭಾದ್ರ ಮಾಸದಲ್ಲಿಯೂ ಸಹ ಹಬ್ಬವನ್ನು ಮನೆಗಳಲ್ಲಿ ಆಚರಿಸಲಾಗುತ್ತದೆ.

Nagara Panchami 7

ದಕ್ಷಿಣ ಭಾರತ
ನಾಗರ ಪಂಚಮಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಈ ಹಬ್ಬಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಸುಪ್ರಿಸಿದ್ಧ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕರಾವಳಿ-ಮಲೆನಾಡಿನ ಭಾಗಗಳಲ್ಲಿ ನಾಗನಿಗೆ ಇರುವ ಪ್ರಮುಖ ಸ್ಥಾನ. ತುಳುನಾಡಿನಲ್ಲಿ ನಾಗರ ಪಂಚಮಿಯಂದು ಎಲ್ಲ ಸೇರಿ ಕುಟುಂಬದ ನಾಗಬನಕ್ಕೆ ಹೋಗುವುದು ಸಂಪ್ರದಾಯ. ಬೆಲ್ಲ-ಕಾಯಿ ತುರಿಯಿಂದ ತಯಾರಿಸುವ ಅರಿಶಿನ ಎಲೆಯ ಗಟ್ಟಿಯನ್ನು (ಕಡುಬು) ಮಾಡಿ ದೇವರಿಗೆ ನೈವೇದ್ಯ ಮಾಡಿ ಮನೆಮಂದಿ ತಿನ್ನುವುದು ಪದ್ಧತಿ. ಉತ್ತರ ಕರ್ನಾಟಕ ಕಡೆ ಇದೊಂದು ಸಾಂಸ್ಕೃತಿಕ ಹಬ್ಬ. ಸಹೋದರ ಸಹೋದರಿಯರು ಒಂದೆಡೆ ಸೇರಿ ಪ್ರೀತಿ, ವಾತ್ಸಲ್ಯದಿಂದ ಸಹೋದರರನ್ನು ಹಾರೈಸುವುದು, ಆಶೀರ್ವಾದ ಪಡೆಯುವುದು ನಡೆಯುತ್ತದೆ. ಮನೆಯ ಹೆಣ್ಮಕ್ಕಳಿಗೆ ಚಕ್ಕುಲಿ, ಚೂಡ, ಅರಳು, ಉಂಡೆ ಎಲ್ಲವನ್ನೂ ಕೊಬ್ಬರಿ ಜೊತೆಗಿಟ್ಟು ಕುಪ್ಪುಸದ ಕಣದೊಂದಿಗೆ ಬಾಗೀನ ನೀಡಲಾಗುತ್ತದೆ.

Naga Panchami 2

ಹಳೇ ಮೈಸೂರು ಭಾಗದಲ್ಲಿ ಇದು ಅಣ್ಣ-ತಮ್ಮಂದಿರ ಹಬ್ಬ ಎಂದೇ ಪ್ರಸಿದ್ಧಿ ಪಡೆದಿದೆ. ಸಹೋದರರ ಒಳಿತನ್ನು ಕೋರಿ ಸಹೋದರಿಯರು ಅವರಿಗೆ ಬೆನ್ನುಪೂಜೆ ಮಾಡುವುದು ಈ ಹಬ್ಬದ ವಿಶೇಷ. ಪೂಜೆಯ ಭಾಗವಾಗಿ ನಾಗರ ಕಲ್ಲುಗಳಿಗೆ ಹಾಗೂ ಹುತ್ತಕ್ಕೆ ಎಳನೀರು, ಹಾಲಿನಿಂದ ಅಭಿಷೇಕ (ತನಿ ಎರೆಯುವುದು) ಮಾಡಲಾಗುತ್ತದೆ. ಉತ್ತರ ಕನ್ನಡದಲ್ಲಿ ನಾಗನಿಗೆ ಉಪ್ಪು ಹಾಕದ ಸಪ್ಪೆ ಅಕ್ಕಿರೊಟ್ಟಿಯ ನೈವೇದ್ಯ ಹಾಗೂ ಕ್ಷೀರಾಭಿಷೇಕ ಮಾಡಲಾಗುತ್ತದೆ.

ಕೇರಳದಲ್ಲಿ ಈಳವರು ಮತ್ತು ನಾಯರ್‌ಗಳು ಸರ್ಪ ಆರಾಧಕರು. ಮನೆಯ ನೈರುತ್ಯ ಮೂಲೆಯಲ್ಲಿ ನಾಗದೇವತೆಗಾಗಿ ಒಂದು ದೇವರ ಕೋಣೆ ಮಾಡಿರುತ್ತಾರೆ. ನಾಗ ಪಂಚಮಿ ಹಿಂದಿನ ದಿನ ಮಹಿಳೆಯರು ಉಪವಾಸ ಮಾಡುತ್ತಾರೆ. ನಾಗ ಪಂಚಮಿ ದಿನ ಮುಂಜಾನೆ ಸ್ನಾನ ಮಾಡಿ ತರವಾಡು ಸರ್ಪ ಕಾವುನಲ್ಲಿ ಪ್ರಾರ್ಥಿಸುತ್ತಾರೆ. ತೀರ್ಥಂ ಹಾಲನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಚೆಂಬರತಿ (ದಾಸವಾಳ) ಹೂವನ್ನು ಹಾಲಿನಲ್ಲಿ ಅದ್ದಿ ಸಹೋದರನ ಬೆನ್ನಿನ ಮೇಲೆ ಚಿಮುಕಿಸಿ ನಂತರ ಆರತಿ ಮಾಡುತ್ತಾರೆ. ಅರಿಶಿನದಲ್ಲಿ ಅದ್ದಿದ ದಾರವನ್ನು ಸಹೋದರನ ಬಲ ಮಣಿಕಟ್ಟಿನ ಮೇಲೆ ಕಟ್ಟಲಾಗುತ್ತದೆ. ಕೊನೆಗೆ ಹಬ್ಬದೂಟ ನೀಡುತ್ತಾರೆ.

Share This Article