ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ನಾಗರ ಪಂಚಮಿ ಮುನ್ನುಡಿ ಎಂಬಂತೆ ಬರುತ್ತದೆ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪಡುವ ಈ ಹಬ್ಬದ ಬಳಿಕ ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿ, ನವರಾತ್ರಿ ಸೇರಿದಂತೆ ಇತರ ಹಬ್ಬಗಳು ಬರುತ್ತವೆ. ನಾಗರ ಪಂಚಮಿಗೆ ಸಂಬಂಧಿಸಿದಂತೆ ಪುರಾಣ, ಇತಿಹಾಸ ಮಾತ್ರವಲ್ಲದೇ ಜಾನಪದದ ಸಾಕಷ್ಟು ಕಥೆಗಳಿವೆ.
ನಾಗನ ಪೂಜೆ ಭಾರತದ ಪ್ರಾಚೀನ ಸಂಪ್ರದಾಯ. ನಾಗರ ಪಂಚಮಿಯನ್ನು ಪವಿತ್ರವಾದ ದಿನ ಎಂದು ನಂಬಲಾಗಿದೆ. ಪುರಾಣದಲ್ಲಿ ವಾಸುಕಿ, ತಕ್ಷಕ, ಕಾಳೀಯ, ಮಣಿಭದ್ರ, ಕಾರ್ಕೋಟಕ, ಧನಂಜಯ ನಾಗದೇವರುಗಳಾಗಿ ಕಾಣಿಸಿಕೊಂಡಿದ್ದಾರೆ. ಇವರ ಪ್ರತಿಮೆಗಳಿಗೆ ಕ್ಷೀರಾಭಿಷೇಕ ಮಾಡುವ ಪದ್ಧತಿ ವ್ಯಾಪಕವಾಗಿದೆ.
Advertisement
Advertisement
ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ಶಿವನ ಆಭರಣ ವಾಗಿ, ವಿಷ್ಣುವಿನ ಹಾಸಿಗೆಯಾಗಿ, ಕುಂಡಲಿನೀ ಶಕ್ತಿಯ ಪ್ರತೀಕವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಮೇರುವೆಂಬ ಬಿಲ್ಲಿನ ಹೆದೆಯಾಗಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜಚಿಹ್ನೆಯಾಗಿ, ಭೂಮಿಯನ್ನು ಹೊತ್ತ ಆದಿಶೇಷನಾಗಿ, ಪಾರ್ಶ್ವನಾಥ ತೀರ್ಥಂಕರನ ಶಿರೋಲಾಂಛನವಾಗಿ, ಲಕ್ಷ್ಮಣ, ಬಲರಾಮ, ಸುಬ್ರಹ್ಮಣ್ಯ ಸ್ವಾಮಿಯ ಅನನ್ಯ ಸ್ವರೂಪವಾಗಿರುವ ನಾಗ ಹಿಂದೂಗಳ ಪಾಲಿನ ದೇವರಾಗಿದ್ದಾನೆ.
Advertisement
Advertisement
ಸಿಂಧೂ ಸಂಸ್ಕೃತಿಯ ಅವಶೇಷಗಳಲ್ಲಿ ಸರ್ಪಮಿಥುನ ಸಿಕ್ಕಿದ್ದನ್ನು ಗಮನಿಸಿದಾಗ, ಮಾನವ ಜನಾಂಗ ಆದಿಕಾಲದಿಂದಲೂ ಈ ನಾಗಾರಾಧನೆ ನಡೆಸಿಕೊಂಡು ಬಂದಿದ್ದು ತಿಳಿದುಬರುತ್ತದೆ. ಭಾರತದಾದ್ಯಂತ ಶೈವ, ಶಾಕ್ತ, ವೈಷ್ಣವ, ಬೌದ್ಧ, ಜೈನ ಮುಂತಾದ ಎಲ್ಲ ಸಂಪ್ರದಾಯಗಳಲ್ಲೂ ನಾಗನ ಪೂಜೆ ಮಾಡಲಾಗುತ್ತದೆ. ಇಷ್ಟಾರ್ಥ ಸಿದ್ಧಿಗಾಗಿ, ಪುತ್ರಪ್ರಾಪ್ತಿಗಾಗಿ ಪ್ರಾರ್ಥಿಸುವ ನಾಗ ಸತ್ತರೆ ವೈದೀಕ ರೀತಿಯಲ್ಲಿ ಉತ್ತರಕ್ರಿಯೆ ನಡೆಸುಬ ಪದ್ಧತಿಯೂ ಇದೆ.
ನಾಗಾರಾಧನೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಜಪಾನ್, ಚೀನಾ, ಈಜಿಪ್ಟ್, ಗ್ರೀಸ್ ಮುಂತಾದ ಪುರಾತನ ಸಂಸ್ಕೃತಿಯ ಜನತೆಯೂ ನಾಗನನ್ನು ಪೂಜಿಸಿಕೊಂಡು ಬಂದಿದೆ. ಭಾರತದ ಇತಿಹಾಸದಲ್ಲಿ ಹಿಂದಿನಿಂದಲೂ ನಾಗವಂಶಗಳಿದ್ದವು. ಇತ್ತೀಚೆಗೆ ನಾಗ ಜನಾಂಗದ ಒಂದು ಪ್ರತ್ಯೇಕ ಪ್ರಾಂತವೇ ಏರ್ಪಟ್ಟಿದೆ. ನಾಗವಂಶೀಯರು ಕೇರಳ, ಅಸ್ಸಾಂ, ನಾಗಾಲ್ಯಾಂಡ್‌ಗಳಲ್ಲಿ ಇದ್ದಾರೆ.
ನಾಗರ ಪಂಚಮಿ ಆಚರಣೆ ಹೇಗೆ?
ಶ್ರಾವಣ ಶುದ್ಧ ಪಂಚಮಿಯ ದಿನ, ಗೋಮಯದಿಂದ ಬಾಗಿಲು ಸಾರಿ, ನಾಗನ ಚಿತ್ರಗಳನ್ನು ಬರೆದು ನೇಮನಿಷ್ಠೆಯಿಂದ ಪೂಜೆ ಮಾಡುತ್ತಾರೆ. ಕೆಲವರು ಪ್ರತಿ ಷಷ್ಠಿ ದಿನ ಸುಬ್ರಹ್ಮಣ್ಯನ ಪೂಜೆಮಾಡಿ ಹಾಲೆರೆಯುತ್ತಾರೆ. ಶ್ವೇತಾಂಬರ ಜೈನರು ಶ್ರಾವಣ ಶುದ್ಧ ಪಂಚಮಿಯಲ್ಲಿ ನಾಗಪಂಚಮಿ ವ್ರತವನ್ನೂ, ಮಾರ್ಗಶಿರ ಶುದ್ಧ ಪಂಚಮಿಯಲ್ಲಿ ನಾಗರ ದೀಪಾವಳಿಯನ್ನೂ ಆಚರಿಸುತ್ತಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬತ್ತೀಸ ಶಿರಾಳ್ ಗ್ರಾಮದಲ್ಲಿ ನಾಗರ ಪಂಚಮಿ ದಿನ ಜೀವಂತ ನಾಗರಹಾವುಗಳನ್ನು ಪೂಜಿಸುತ್ತಾರೆ. ಸರ್ಪ ಕುಂಡಲಿನಿ ಶಕ್ತಿಯ ಸಂಕೇತ. ಸರ್ಪದ ಮಂಡಲಾಕಾರವು ಪೂರ್ಣವೃತ್ತ ಅಥವಾ ಶೂನ್ಯ. ಈ ಪೂರ್ಣದಲ್ಲಿ ಪೂರ್ಣವನ್ನು ಕಳೆದರೆ ಶೇಷವೂ ಪೂರ್ಣ. ಈ ಶೇಷನೇ ಆದಿಶೇಷನೆಂದೂ ಹೇಳುವರು. ಆದ್ದರಿಂದ ಅನಂತನೆಂಬ ಪೂರ್ಣವೃತ್ತದಲ್ಲಿ ಶೇಷಶಾಯಿ ವಿಷ್ಣುವಿರುವನು. ಅನಂತನೇ ಶೇಷ, ಶೇಷನೇ ಅನಂತ, ಶೂನ್ಯವು ಕೇವಲ ಶೂನ್ಯವಲ್ಲ. ಅದರ ಮಧ್ಯೆ ಸಚ್ಚಿದಾನಂದ ಸ್ವರೂಪದ ಕುಂಡಲಿನಿ ಶಕ್ತಿಯಿಂದಾವೃತವಾದ ವಿಭುವಿರುವನು ಎಂಬ ದಿವ್ಯ ಬೋಧೆನೆಯನ್ನು ನಾಗಪೂಜೆಯು ತಿಳಿಸುತ್ತದೆ. ಇದನ್ನೂ ಓದಿ: Naga Panchami: ಚಂದನವನದಲ್ಲಿ ನಾಗಾರಾಧನೆ: ಹಿರಿತೆರೆಗೂ ಹರಿದು ಬಂದ ಹಾವು!
ಈ ದಿನ ಭಯ ಭಕ್ತಿಯಿಂದ ಪೂಜೆ ಮಾಡುವವರಿಗೆ ಯಾವುದೇ ಭಯವಿಲ್ಲ. ಭೂಮಿ, ಅಂತರಿಕ್ಷಗಳಲ್ಲೂ, ಅಶ್ವತ್ಥ ವೃಕ್ಷಗಳಲ್ಲೂ ವಾಸಿಸುವ ಸರ್ಪಗಳಿಗೆ ಸಾಷ್ಟಾಂಗ ನಮಸ್ಕಾರ ಎಂಬರ್ಥದ ಶ್ಲೋಕ ಕೃಷ್ಣ ಯಜುರ್ವೇದ ಸಂಹಿತೆಯಲ್ಲಿ ಬರುತ್ತದೆ.
ನಾಗಪಂಚಮಿ ಹೆಣ್ಣುಮಕ್ಕಳ ಹಬ್ಬ ಎಂದು ಆಚರಿಸಲಾಗುತ್ತದೆ. ಅದು ಅವರಿಗೆ ಮಾಂಗಲ್ಯಪ್ರದ ಎಂದೂ ಸಂತಾನ ಪ್ರದ ಎಂದೂ ನಂಬಿಕೆ. ಈ ಹಬ್ಬ ತವರಿನ ಸೌಹಾರ್ದ ಸೂಚಕವೂ ಆಗಿದೆ. ಅಣ್ಣತಮ್ಮಂದಿರನ್ನು ಕರೆದು ಬೆನ್ನನ್ನು ಹಾಲಿನಿಂದ ಸವರಿ ಒಳ್ಳೆಯದಾಗಲಿ ಎಂದು ಪ್ರೀತಿಯಿಂದ ಹಾರೈಸುತ್ತಾರೆ.
ಉತ್ತರ ಕರ್ನಾಟಕದಲ್ಲಿ ಇದನ್ನು ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಅಂದು ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸುತ್ತಾರೆ. ಪಂಜಾಬಿನಲ್ಲಿ ಸರ್ಪದೇವತೆಯ ಸೂಚಕವಾಗಿ ಗೋಡೆಯ ಮೇಲೆ ಕಪ್ಪು ಚಿತ್ರ ಬರೆಯುತ್ತಾರೆ. ಇದರಿಂದ ಮನೆಗೆ ಸರ್ಪಬಾಧೆಯಿಲ್ಲ ಎಂಬುದು ನಂಬಿಕೆ. ಆಸ್ತಿಕ ಋಷಿಯ ಹೆಸರು ಬರೆಯುವುದರಿಂದ ಸರ್ಪ ಒಳಗೆ ಬರುವುದಿಲ್ಲ ಎಂಬ ಭಾವನೆ ಸರ್ವತ್ರ ಭಾರತದಲ್ಲಿ ಪ್ರಚಲಿತವಿದೆ.
Web Stories