ಆಷಾಢಮಾಸ ಕಳೆದ ಶ್ರಾವಣ ಬಂದಿತು ಎಂದರೆ ಹಬ್ಬಗಳ ಸಾಲು ಆರಂಭವಾಯಿತು ಎಂದೇ ಅರ್ಥ. ಶ್ರಾವಣಮಾಸದ ಆರಂಭದ ಹಿಂದಿನ ದಿನ, ಎಂದರೆ ಅಮಾವಾಸ್ಯೆಯ ದಿನ ‘ಭೀಮೇಶ್ವರವ್ರತ’ವನ್ನು ಆಚರಿಸುತ್ತೇವೆ. ಈ ವ್ರತದ ಉದ್ದೇಶವೇ ದಾಂಪತ್ಯದ ಆದರ್ಶವನ್ನು ಎತ್ತಿ ಹಿಡಿಯುವುದು. ಬಳಿಕ ಬರುವ ಮುಖ್ಯ ಪರ್ವವೇ ನಾಗರ ಪಂಚಮಿ (Nagara Panchami). ಭೀಮನ ಅಮಾವಾಸ್ಯೆ ಗಂಡ-ಹೆಂಡತಿಯರ ಪ್ರೇಮಕ್ಕೆ ಸಂಕೇತ. ನಾಗರ ಪಂಚಮಿ ಸಹೋದರ-ಸಹೋದರಿಯರ ಕಾಳಜಿಗೆ ಸಂಕೇತವಾಗಿದೆ.
ನಾಗರ ಪಂಚಮಿಯಂದು ನಾಗದೇವತೆಯನ್ನು ಪೂಜಿಸುವುದು ವಾಡಿಕೆ. ಹಳ್ಳಿಗಳಲ್ಲಿ ಹುತ್ತಗಳಿಗೆ ಹೆಣ್ಣುಮಕ್ಕಳು ಪೂಜೆ ಮಾಡುವುದು, ಹಾಲನ್ನು ತನಿ ಎರೆಯುವುದು ಉಂಟು. ನಾಗಕಲ್ಲುಗಳಿಗೂ ಹೀಗೆಯೇ ಪೂಜಿಸಿ, ತನಿ ಎರೆಯಲಾಗುತ್ತದೆ. ತನಿ ಎರೆದ ಹಾಲನ್ನು ಹೆಣ್ಣುಮಕ್ಕಳು ಅವರ ಅಣ್ಣತಮ್ಮಂದಿರ ಬೆನ್ನಿಗೆ ಎರೆಯುತ್ತಾರೆ. ಇದರ ತಾತ್ಪರ್ಯ, ಒಡಹುಟ್ಟಿದವರು ತಂಪಾಗಿರಲಿ ಎಂಬ ಆಶಯ. ಇದನ್ನೂ ಓದಿ: ನಾಗರ ಪಂಚಮಿ – ಹಬ್ಬದ ಸಂಭ್ರಮದ ನಡುವೆ ಹೂ, ಹಣ್ಣು ಬೆಲೆ ಏರಿಕೆ ಬಿಸಿ
Advertisement
Advertisement
ನಾಗರ ಪಂಚಮಿಯನ್ನು ದೇಶಾದ್ಯಂತ ಹಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಅಂತೆಯೇ ಕರ್ನಾಟಕದಲ್ಲೂ ಒಂದೊಂದು ಭಾಗದಲ್ಲೂ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಮನೆಯನ್ನು ಶುಚಿಗೊಳಿಸಿ, ಅಲಂಕರಿಸುತ್ತಾರೆ. ಹಲವೆಡೆ ಹುತ್ತಗಳಿಗೆ ಪೂಜೆ ಮಾಡಿ ತನಿ ಎರೆಯುತ್ತಾರೆ. ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿ ಇಷ್ಟಾರ್ಥಗಳು ಈಡೇರುವಂತೆ ಬೇಡಿಕೊಳ್ಳುತ್ತಾರೆ. ಅಲ್ಲದೇ ನಾಗದೋಷ ದೂರವಾಗುವಂತೆ ಹರಕೆ ಕಟ್ಟಿಕೊಳ್ಳುವವರೂ ಇದ್ದಾರೆ. ನಾಗರ ಪಂಚಮಿಯಂದು ಭಕ್ತರು ಭೇಟಿ ಕೊಡಬಹುದಾದ ಹಲವಾರು ನಾಗ ಕ್ಷೇತ್ರಗಳು ಕರ್ನಾಟಕದಲ್ಲಿವೆ. ಅವುಗಳ ಪೈಕಿ 10 ಪ್ರಮುಖ ನಾಗ ಕ್ಷೇತ್ರಗಳು ಇವೆ ನೋಡಿ.
Advertisement
1) ಮುಕ್ತಿ ನಾಗಕ್ಷೇತ್ರ
ಬೆಂಗಳೂರಿನ ರಾಮೋಹಳ್ಳಿಯಲ್ಲಿ ಮುಕ್ತಿ ನಾಗ ಕ್ಷೇತ್ರವಿದೆ. ಹೆಸರಿಗೆ ತಕ್ಕಂತೆ ನಾಗ ದೇವರ ಸಂಬಂಧಿತ ಎಲ್ಲಾ ದೋಷಗಳಿಗೆ ಮುಕ್ತಿ ದೊರಕಿಸಿಕೊಡುವ ತಾಣ ಎಂದೇ ನಂಬಲಾಗಿದೆ. ಈ ದೇವಾಲಯ ನವಸುಬ್ರಹ್ಮಣ್ಯ ದೇವಸ್ಥಾನವೆಂದೂ ಪ್ರಸಿದ್ಧಿಯಾಗಿದೆ. ಇಲ್ಲಿ ವಿಶಾಲವಾದ ಮುಖ ಮಂಟಪ ನಿರ್ಮಿಸಿ, ಅದರಲ್ಲಿ ಎತ್ತರದ ಅಧಿಷ್ಠಾನವುಳ್ಳ ವೇದಿಕೆ ರಚಿಸಲಾಗಿದೆ. ವೇದಿಕೆಯ ಮೇಲೆ ಭವ್ಯವಾದ ಸಪ್ತಫಣಾವಳಿಯುಳ್ಳ ಆದಿಶೇಷನು ಮಂಡಲಾಕಾರವಾಗಿ ಹೆಡೆ ಬಿಚ್ಚಿ ಕುಳಿತಿರುವಂತೆ ಬಿಡಿಸಿರುವ ಶಿಲ್ಪವಿದೆ. ನಾಗ ದೇವರಿಗೆ ಸಂಬಂಧಪಟ್ಟ ಎಲ್ಲ ಪೂಜಾ ಕೈಂಕರ್ಯ ಇಲ್ಲಿ ನಡೆಯುತ್ತದೆ. ನಿತ್ಯವೂ ಸಾವಿರಾರು ಮಂದಿ ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. 16 ಅಡಿಯ ಏಳು ಹೆಡೆಯುಳ್ಳ ನಾಗಮೂರ್ತಿ ಇಲ್ಲಿರುವುದು ಮತ್ತೊಂದು ವಿಶೇಷ.
Advertisement
2) ಸೀಮಿ ನಾಗನಾಥ ಕ್ಷೇತ್ರ
ಬೀದರ್ ಜಿಲ್ಲೆಯಲ್ಲಿರುವ ಸುಪ್ರಸಿದ್ಧ ದೇವಸ್ಥಾನ ಸೀಮಿ ನಾಗನಾಥ ಕ್ಷೇತ್ರ ಭಕ್ತರು ಆಕರ್ಷಣೀಯ ಕೇಂದ್ರವಾಗಿದೆ. ಹುಮನಾಬಾದ್ ತಾಲೂಕಿನ ಹಳ್ಳಿಖೇದ ಗ್ರಾಮದಲ್ಲಿರುವ ಈ ದೇಗುಲ ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದೆ ಎಂಬುದು ಭಕ್ತರ ನಂಬಿಕೆ. ಈ ನಾಗರನಿಗೆ ನಾಗರ ಪಂಚಮಿಯಂದು ಮಹಿಳೆಯರಿಂದ ವಿಶೇಷ ಪೂಜೆ ಸಲ್ಲಿಕೆಯಾಗುತ್ತದೆ. ಈ ದೇವಸ್ಥಾನದಲ್ಲಿ ಮಾಲಧಾರಿ ಸ್ವಾಮಿಗಳ ಪ್ರಾರ್ಥನೆ ಮತ್ತು ಸತ್ಸಂಗ ಭಕ್ತಿಯಿಂದ ನೆರವೇರುತ್ತದೆ. ಇದನ್ನೂ ಓದಿ: Nagara Panchami: ಮಹಾರಾಷ್ಟ್ರದಲ್ಲಿ ನಾಗರಪಂಚಮಿ ಆಚರಣೆ ಹೇಗೆ?
3) ಮತ್ತಿತಾಳೇಶ್ವರ ನಾಗಕ್ಷೇತ್ರ
ಈ ದೇವಾಲಯಕ್ಕೆ ಭಕ್ತಿಯಿಂದ ಬೇಡಿಕೊಂಡರೆ ಸಾಕು ಭಕ್ತಾದಿಗಳ ಬೇಡಿಕೆ ನೆರವೇರುತ್ತದೆ ಎಂಬ ನಂಬಿಕೆ ಇದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಕಸಬಾ ಹೋಬಳಿ ಕಲ್ಲುವೀರನಹಳ್ಳಿ ಗ್ರಾಮದ ಮತ್ತಿ ತಾಳೇಶ್ವರ ದೇವಾಲಯ ಪ್ರಸಿದ್ಧ ಯಾತ್ರಾ ಸ್ಥಳ ಆಗಿದೆ. ಈ ದೇವಾಲಯ ಇರುವ ಜಾಗದಲ್ಲಿ ಈ ಹಿಂದೆ ಒಂದು ಮರವಿದ್ದು ಋಷಿವಿನ ತಪಸ್ಸು ಮಾಡಿ ಇದೆ ಜಾಗದಲ್ಲಿ ಐಕ್ಯವಾಗಿ ಈ ಗುಡಿಯ ಮೇಲೆ ಬೃಹದಾಕಾರದ ಹುತ್ತಗಳು ಇರುವುದರಿಂದ ಈ ಹುತ್ತಕ್ಕೆ ಬಂದು ಹಸುವು ಹಾಲು ಕರೆಯುತ್ತ ಇದ್ದರಿಂದ ಈ ಗ್ರಾಮದ ಭಕ್ತರು ಈ ಹುತ್ತವನ್ನ ಅಗೆದು ನೋಡಿದಾಗ ಅದರಲ್ಲಿ ಒಂದು ಲಿಂಗವು ಒಡೆದು ಹೋಗಿರುವುದು ಗೋಚರ ಆಗುತ್ತದೆ. ಈ ಹಿನ್ನೆಲೆಯಲ್ಲಿ ದೇವರು ಅಲ್ಲಿನ ಭಕ್ತಾದಿಗಳ ಕನಸಿನಲ್ಲಿ ಇರುವಂತೆ ಪ್ರತಿ ಗುರುವಾರ ಮತ್ತು ಭಾನುವಾರ ಇಲ್ಲಿರುವ ಕೊಳದಲ್ಲಿ ಸ್ನಾನ ಮಾಡಿ ಅಡುಗೆ ಮಾಡಿ ಊಟ ಮಾಡಿದರೆ ರೋಗ ರುಜಿನಗಳು ವಾಸಿ ಆಗುತ್ತದೆ ಎಂದು ಪ್ರತೀತಿ ಇದ್ದು ಈ ದೇವರು ಬಹಳ ನಂಬಿಕೆಯಿಂದ ಪುರಾಣ ಪ್ರಸಿದ್ಧವಾಗಿದೆ ಈಗಲೂ ಸಹ ಈ ಪದ್ದತಿ ಮುಂದುವರೆಯುತ್ತಾ ಬಂದಿದೆ ಮತ್ತು ಈ ಮರದ ಕೆಳಗೆ ಋಷಿ ಮುನಿಗಳು ತಪಸ್ಸು ಮಾಡಿರುವುದರಿಂದ ಈ ಸ್ಥಳಕ್ಕೆ ಮತ್ತಿ ತಾಳೇಶ್ವರ ಎಂದು ಕರೆಯುತ್ತಾರೆ.
4) ನಾಗರ ನವಿಲೆ ನಾಗಕ್ಷೇತ್ರ
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಬಳಿ ಶ್ರೀಕ್ಷೇತ್ರ ನಾಗರನವಿಲೆ ಇದೆ. ಸರ್ಪ ಸಂಬಂಧಕ್ಕೆ ಕುರಿತಂತೆ ಏನೇ ಸಮಸ್ಯೆಗಳಿದ್ದರೂ ನಾಗರನವಿಲೆಗೆ ಕಾಲಿಟ್ಟರೆ ಎಲ್ಲವೂ ನಿವಾರಣೆಯಾಗುತ್ತದೆ. ಹೀಗಾಗಿ ಪ್ರತಿನಿತ್ಯವೂ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಸರ್ಪದೋಷ, ಕಂಕಣ ಭಾಗ್ಯ, ಪುತ್ರ ಸಂತಾನ ಭಾಗ್ಯಕ್ಕಾಗಿ ವಿಶೇಷ ಪೂಜೆ ಇಲ್ಲಿ ಸಲ್ಲಿಸುತ್ತಾರೆ. ಇಲ್ಲಿ ಪೂಜೆ ಸಲ್ಲಿಸಿ ಹರಕೆ ಹೊತ್ತರೆ ಅಂದುಕೊಂಡಿದ್ದು ಆಗುತ್ತದೆ ಎಂಬುದು ಭಕ್ತರ ನಂಬಿಕೆ.
5) ವಿದುರಾಶ್ವತ್ಥ ನಾಗಕ್ಷೇತ್ರ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಿಂದ 6 ಕಿಮೀ ದೂರದಲ್ಲಿ ವಿದುರಾಶ್ವತ್ಥ ಕ್ಷೇತ್ರ ನೆಲಸಿದೆ. ಮಹಾಭಾರತದಲ್ಲಿ ವಿಧುರನಿಂದ ಸ್ಥಾಪನೆಯಾದ ಅಶ್ವತ್ಥಮರ ಇಲ್ಲಿ ಇದ್ದುದರಿಂದ ಈ ಪ್ರದೇಶಕ್ಕೆ ವಿದುರಾಶ್ವತ್ಥ ಎಂದು ಕರೆಯಲಾಗುತ್ತದೆ. ಇಲ್ಲಿ ಅಶ್ವತ್ಥನಾರಾಯಣ ದೇವಾಲಯವಿದೆ. ದೇಗುಲದ ಸುತ್ತ ನೂರಾರು ನಾಗರ ಕೆತ್ತನೆಯ ಕಲ್ಲುಗಳಿವೆ. ನಾಗದೋಷ ನಿವಾರಣೆ ಪೂಜೆಗೆ ಭಕ್ತರ ದಂಡೇ ಇಲ್ಲಿಗೆ ಆಗಮಿಸುತ್ತದೆ.
6) ಕುಡುಪು ಅನಂತ ಪದ್ಮನಾಭ ನಾಗಕ್ಷೇತ್ರ
ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ. ಈ ಕ್ಷೇತ್ರ ಮಂಗಳೂರಿನಿಂದ 10 ಕಿಮೀ ದೂರದಲ್ಲಿದೆ. ದೇವಾಲಯದ ಹಿಂಭಾಗ ನಾಗಬನವಿದ್ದು ಅಲ್ಲಿ 300 ಕ್ಕೂ ಹೆಚ್ಚು ನಾಗಪ್ರತಿಮೆಗಳಿವೆ. ಆಶ್ಲೇಷ ಬಲಿ ಇಲ್ಲಿನ ಮುಖ್ಯ ಸೇವೆಯಾಗಿದೆ. ನಾಗದೋಷ ಪರಿಹಾರಕ್ಕಾಗಿ ಭಕ್ತರು ಇಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ನಾಗರ ಪಂಚಮಿಯಂದು ಇಲ್ಲಿ ಉತ್ಸವ ಮಾಡಲಾಗುತ್ತದೆ. ಉತ್ಸವಕ್ಕೆ ಇಲ್ಲಿ ವಿಶೇಷ ಮಹತ್ವವಿದೆ. ಇದನ್ನೂ ಓದಿ: Nagara Panchami : ವಾಸುಕಿಯನ್ನು ಹಿಡಿದು ಎಳೆದಾಡಿದ ದೇವತೆಗಳು, ರಾಕ್ಷಸರು!
7) ಮುಗ್ವಾ ಸುಬ್ರಹ್ಮಣ್ಯ ನಾಗಕ್ಷೇತ್ರ
ಶ್ರೀ ಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯ ದೇವರು. ಈ ಪವಾಡ ಸದೃಶ ದೇಗುಲ ಇರುವುದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿ. ಇಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ದೇವರ ಬಿಂಬವನ್ನು ಸ್ವತಃ ನಾರದ ಮಹರ್ಷಿಗಳೇ ಪ್ರತಿಷ್ಠಾಪಿಸಿದರೆಂದು ಪುರಾಣ ಹೇಳುತ್ತದೆ. ಈ ಕ್ಷೇತ್ರವನ್ನು ದಕ್ಷಿಣ ನಾಸಿಕಾ ಕ್ಷೇತ್ರ ಅಂದರೆ ಮೂಗುತಿ ಕ್ಷೇತ್ರ ಎಂದು ಸಹ ಪುರಾಣಗಳು ಸಾರುತ್ತವೆ. ಸುಬ್ರಹ್ಮಣ್ಯ ಸ್ವಾಮಿಯ ಈ ದಿವ್ಯ ಕ್ಷೇತ್ರದಲ್ಲಿ ಮಾಡಿದ ಹರಕೆ ತೀರದ ಉದಾಹರಣೆ ಇಲ್ಲ. ಭಕ್ತಿಯಿಂದ ಮಾಡಿದ ಸೇವೆ ನಂಬಿ ಮಾಡಿದ ಪ್ರಾರ್ಥನೆ ಇಲ್ಲಿ ವ್ಯರ್ಥ ಆದ ಇತಿಹಾಸವೇ ಇಲ್ಲ.
8) ನಾಗಲ ಮಡಿಕೆ ನಾಗಕ್ಷೇತ್ರ
ಅಂತ್ಯ ಸುಬ್ರಹ್ಮಣ್ಯ ಎಂದೇ ಜನಪ್ರಿಯವಾಗಿರುವ ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ಬರುತ್ತಾರೆ. ಚರ್ಮವ್ಯಾದಿ, ಕಣ್ಣು, ಮೂಗು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ಸುಬ್ರಹ್ಮಣ್ಯನ ಅನುಗ್ರಹವೇ ಪರಿಹಾರ ಎಂಬ ನಂಬಿಕೆ ಭಕ್ತರದ್ದು. ಉತ್ತರ ಪಿನಾಕಿನಿ ನದಿ ತಟದಲ್ಲಿರುವ ಈ ದೇಗುಲಕ್ಕೆ ಇತರೆ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ನಾಗದೋಷ ನಿವಾರಣೆಗಾಗಿ ಇಲ್ಲಿಗೆ ಬರುವವರೇ ಹೆಚ್ಚು. ಈ ದೇಗುಲಕ್ಕೆ 500 ವರ್ಷಗಳ ಇತಿಹಾಸವಿದೆ ಎಂದು ಹಿರಿಯರು ಹೇಳುತ್ತಾರೆ.
9) ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇಗುಲ
ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಎಸ್‌ಎಸ್ ಘಾಟಿ ಪೋಸ್ಟ್ನಲ್ಲಿರುವ 600 ವರ್ಷಗಳಷ್ಟು ಹಳೆಯದಾದ ದೇವಾಲಯವಾಗಿದೆ. ಈ ದೇವಾಲಯಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಈ ದೇವಾಲಯವನ್ನು ಸಂಡೂರ ರಾಜವಂಶದ ಘೋರ್ಪಡೆ ನಿರ್ಮಿಸಿದ. ರಾಜನ ಕನಿಸಿನಲ್ಲಿ ಭಗವಂತ ಕಾಣಿಸಿಕೊಂಡ ಮತ್ತು ಅವನು ಇರುವ ಸ್ಥಳವನ್ನು ಬಹಿರಂಗಪಡಿಸುತ್ತಾನೆ ಎನ್ನುವ ನಂಬಿಕೆ ಇದೆ. ಸರ್ಪದೋಷ ಹೊಂದಿರುವ ಜನರು ಪ್ರಾರ್ಥನೆ ಮತ್ತು ಹರಕೆ ಸಲ್ಲಿಸಿದ ನಂತರ ಭಗವಂತನ ಆಶೀರ್ವಾದ ಪಡೆಯಲು ಇಲ್ಲಿಗೆ ಬರುತ್ತಾರೆ. ಇದನ್ನೂ ಓದಿ: Naga Panchami 2023: ಬಾಯಲ್ಲಿ ನೀರೂರಿಸುವ ಅಳ್ಳಿಟ್ಟು, ಅರಿಶಿನ ಎಲೆ ಕಡುಬು ಮಾಡಿ ನೋಡಿ
10) ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ನಾಗಕ್ಷೇತ್ರ
ಕುಕ್ಕೆ ಸುಬ್ರಹ್ಮಣ್ಯವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ಹಿಂದೂ ದೇವಾಲಯ. ನಾಗದೋಷಕ್ಕೆ ಸಂಬಂಧಿಸಿದ ಆಚರಣೆಗಳಿಗೆ ಈ ದೇವಾಲಯ ಹೆಸರುವಾಸಿಯಾಗಿದೆ. ಈ ದೇವಾಲಯವು ಶಿವ ಪಾರ್ವತಿಯ ಪುತ್ರ ಕಾರ್ತಿಕೇಯನಿಗೆ ಸಮರ್ಪಿತವಾಗಿದ್ದು, ಇಲ್ಲಿ ಕಾರ್ತಿಕೇಯನನ್ನು ಸುಬ್ರಹ್ಮಣ್ಯ ಎಂದು ಪೂಜಿಸಲಾಗುತ್ತದೆ. ದೈವಿಕ ಸರ್ಪ ವಾಸುಕಿ ಮತ್ತು ಇತರೆ ಸರ್ಪಗಳು ಗರುಡನಿಂದ ಬೆದರಿಕೆಗೆ ಒಳಗಾದಾಗ ಸುಬ್ರಹ್ಮಣ್ಯನ ಆಶೀರ್ವಾದದೊಂದಿಗೆ ಆಶ್ರಯ ಪಡೆದಿರುವ ಕಥೆಯನ್ನು ಇದು ಹೇಳುತ್ತದೆ. ಕುಕ್ಕೆ ಸುಬ್ರಹ್ಮಣ್ಯವು ನಾಗದೋಷಕ್ಕೆ ಸಂಬಂಧಿಸಿದ ಪೂಜೆಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಅವುಗಳಲ್ಲಿ ಮುಖ್ಯವಾಗಿ ಆಶ್ಲೇಷ ಬಲಿ ಪೂಜೆ ಮತ್ತು ಸರ್ಪ ಸಂಸ್ಕಾರ ಈ 2 ಪೂಜೆಯನ್ನು ವಿಶೇಷವಾಗಿ ನೆರವೇರಿಸಲಾಗುತ್ತದೆ.
Web Stories