ನಮ್ಮ ಮಕ್ಳನ್ನು ಬಿಟ್ಬಿಡಿ – ನಾಗಮಂಗಲ ಪೊಲೀಸ್ ಠಾಣೆಯ ಮುಂದೆ ಮಹಿಳೆಯರ ಹೈಡ್ರಾಮಾ

Public TV
1 Min Read
NAGAMANGALA

ಮಂಡ್ಯ: ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದವರ ಕುಟುಂಬಸ್ಥರು ಠಾಣೆಯ ಮುಂದೆ ಹೈಡ್ರಾಮಾ ಮಾಡಿದ್ದಾರೆ.

ನಾಗಮಂಗಲ ನಗರ ಪೊಲೀಸ್ ಠಾಣೆ ಎದುರು ನೂರಾರು ಮಂದಿ ಮಹಿಳೆಯರು ತಮ್ಮ ಮಕ್ಕಳನ್ನು ವಶಕ್ಕೆ ಪಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳನ್ನು ತೋರಿಸಿ, ಅವರನ್ನು ಬಿಡುಗಡೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಮಹಿಳೆಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಪೊಲೀಸ್ ಠಾಣೆ ಎದುರು ಮಹಿಳೆಯರಿಂದ ದಿಢೀರ್ ಪ್ರತಿಭಟನೆ ನಡೆದಿದ್ದು, ಠಾಣೆಯ ಎದುರಿನ ರಸ್ತೆಯಲ್ಲಿ ಧರಣಿ ಕುಳಿತಿದ್ದಾರೆ. ಬಳಿಕ ಮಹಿಳೆಯರಿಗೆ ಇನ್ಸ್‍ಪೆಕ್ಟರ್ ನಿರಂಜನ್ ಕಾನೂನು ಪಾಠ ಮಾಡಿದ್ದಾರೆ. ವಿಚಾರಣೆ ಮಾಡಲು ಕರೆತಂದಿದ್ದೇವೆ. ಯಾರು ತಪ್ಪು ಮಾಡಿಲ್ಲ ಅವರನ್ನು ಬಿಟ್ಟು ಕಳುಹಿಸುತ್ತೇವೆ. 144 ಸೆಕ್ಷನ್ ಜಾರಿಯಾಗಿದ್ದು, ಗುಂಪುಗೂಡದೆ ಮನೆಗೆ ತೆರಳಿ ಎಂದು ಮಹಿಳೆಯರನ್ನು ಕಳಿಸಿದ್ದಾರೆ.

ಪ್ರಕರಣ ಸಂಬಂಧ 46 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬುಧವಾರ ರಾತ್ರಿಯಿಂದ ಸೆ.14ರ ವರೆಗೆ ನಾಗಮಂಗಲದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇಂದು ಪಟ್ಟಣದ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಅನ್ಯಕೋಮಿನ ಯುವಕರ ಕೃತ್ಯ ಖಂಡಿಸಿ ವಿಶ್ವಹಿಂದೂ ಪರಿಷತ್, ಭಜರಂಗ ದಳ ಹಾಗೂ ಇತರೆ ಹಿಂದೂಪರ ಸಂಘಟನೆಗಳಿಂದ ನಾಗಮಂಗಲ ಬಂದ್‍ಗೆ ಕರೆ ನೀಡಲಾಗಿದೆ.

Share This Article