– ನಿಷೇಧಾಜ್ಞೆ ತೆರವು, ಗಣೇಶ ವಿಸರ್ಜನೆಗೆ ಅವಕಾಶ
ಮಂಡ್ಯ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ನಿಗಿನಿಗಿ ಕೆಂಡವಾಗಿದ್ದ ನಾಗಮಂಗಲ (Nagamangala Violence) ಈಗ ಸಹಜ ಸ್ಥಿತಿಗೆ ಮರಳಿದೆ. ಎರಡೂ ಸಮುದಾಯದ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವನಾರಾಯಣಸ್ವಾಮಿ (Chaluvarayaswamy) ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿದೆ. ಅಲ್ಲದೇ ಭಾನುವಾರ (ಇಂದು) ನಿಷೇಧಾಜ್ಞೆ ಮುಕ್ತಾಯವಾಗಲಿದ್ದು, ಇಂದಿನಿಂದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಗೆ ಅವಕಾಶ ನೀಡಲಾಗಿದೆ.
ಬುಧವಾರ ರಾತ್ರಿ ನಾಗಮಂಗಲದಲ್ಲಿ ಗಣೇಶ ಮೂರ್ತಿ (Ganesha Idol) ವಿಸರ್ಜನೆ ವೇಳೆ ಕಲ್ಲು ತೂರಾಟದಿಂದಾಗಿ ಗಲಭೆ ಉಂಟಾಗಿ ಅಂದು ರಾತ್ರಿ ಜಾರಿಗೊಳಿಸಿದ್ದ ನಿಷೇಧಾಜ್ಞೆ ತೆರವಾಗಲಿದೆ. ನಿನ್ನೆ ನಾಗಮಂಗಲದ ಸಮುದಾಯ ಭವನದಲ್ಲಿ ಉಭಯ ಸಮುದಾಯದ ಮುಖಂಡರೊಂದಿಗೆ ಸಚಿವ ಚಲುವರಾಯಸ್ವಾಮಿ ಶಾಂತಿಸಭೆ ನಡೆಸಿದ್ರು. ಘಟನೆಗೆ ಕಾರಣವಾದ ಕಿಡಿಗೇಡಿಗಳನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಿದ ಅಮಾಯಕರನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ರು. ಅಲ್ಲದೇ ನಾಗಮಂಗಲದ ಉಳಿದ ಗಣೇಶ್ ಮೂರ್ತಿಗಳನ್ನು ಶಾಂತಿಯುವಾಗಿ ವಿಸರ್ಜನೆ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದ್ರು.
ಶಾಂತಿಸಭೆ ಯಶಸ್ವಿಯ ಬಳಿಕ ಇಂದಿನಿಂದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಗೆ ಅವಕಾಶ ನೀಡಲಾಯಿತು. ಎಂದಿನಂತೆ ಸಂಭ್ರಮದಿಂದ ಆಚರಣೆಗೆ ಅನುಮತಿ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ವೇಳೆ ಬಿಗಿ ಭದ್ರತೆಗೆ ಸೂಚಿಸಲಾಗಿದೆ. ಈ ಹಿಂದೆ ನಡೆಯುತ್ತಿದ್ದ ರಸ್ತೆಗಳಲ್ಲಿ 7 ಗಣಪತಿಗಳ ವಿಸರ್ಜನೆ ಮೆರವಣಿಗೆ ಅನುವು ಮಾಡಿಕೊಡಬೇಕೆಂದು ಎರಡು ಸಮುದಾಯದ ಮುಖಂಡರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಎಲ್ಲಾ ಮುಖಂಡರು ಸಮ್ಮತಿದ್ದಾರೆ.
ಗಣೇಶ ವಿಸರ್ಜನೆ ಮೆರವಣಿಗೆ ಬಳಿಕ ಪ್ರತಿವರ್ಷದಂತೆ ಸೌಮ್ಯಕೇಶ್ವರ ದೇವಸ್ಥಾನದ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅದ್ರೆ ನಾಳೆ ಈದ್ ಮಿಲಾದ್ ಹಬ್ಬ ಆಚರಣೆ ಇದ್ದ ಕಾರಣ ಅಂದು ಮಾತ್ರ ಗಣಪತಿ ವಿಸರ್ಜನೆ ಮಾಡಲು ಅನುಮತಿ ನೀಡಿಲ್ಲ. ಎರಡು ಕೋಮುಗಳ ಮಧ್ಯೆ ಮತ್ತೆ ಘರ್ಷಣೆ ಆಗೋ ಸಾಧ್ಯತೆ ಇರುತ್ತೆ ಅನ್ನೋ ಕಾರಣದಿಂದ ಶಾಂತಿ ಸುವ್ಯವಸ್ಥೆ ಕಾರಣಕ್ಕೆ ಅನುಮತಿ ಕೊಟ್ಟಿಲ್ಲ.
ಒಟ್ಟಿನಲ್ಲಿ ಗಲಭೆಯಿಂದ ಸಹಜಸ್ಥಿತಿಯತ್ತ ಮರಳಿದ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಯಾವುದೇ ಅವಘಡ ನಡೆಯದಂತೆ ಪೊಲೀಸರು ಮುನ್ನಚ್ಚೆರಿಕೆ ಬಿಗಿ ಭದ್ರತೆ ಮಾಡಿದ್ದಾರೆ.