ಬಳ್ಳಾರಿ: ಅಪ್ರಾಪ್ತ ಬಾಲಕಿಯ ಮೇಲೆ ಬಿಜೆಪಿ ಮುಖಂಡನೊಬ್ಬ ನಿರಂತರವಾಗಿ ಅತ್ಯಾಚಾರ ಮಾಡಿದ ಪ್ರಕರಣ ಇತ್ತೀಚೆಗೆ ಹೊಸಪೇಟೆ ತಾಲೂಕಿನಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ಸಂತ್ರಸ್ತೆಯನ್ನು ಭೇಟಿ ಮಾಡಿದ್ದಾರೆ.
ನಾಗಲಕ್ಷ್ಮಿ ಬಾಯಿ ಅವರು ಸಂತ್ರಸ್ತೆಯ ಮನೆಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಜೊತೆಗೆ ಸಂತ್ರಸ್ತೆಯ ಬಳಿ ಘಟನೆಯ ವಿವರದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಚಂದ್ರಶೇಖರ ತಲೆಮರೆಸಿಕೊಂಡಿದ್ದನು. ಶನಿವಾರ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ?
ಪೋಷಕರು ನಡೆಸುತ್ತಿದ್ದ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯು ತಾಪಂ ಮಾಜಿ ಸದಸ್ಯ ಚಂದ್ರಶೇಖರನ ಮನೆಗೆ ಟೀ ಕಾಫಿ ಹಾಗೂ ಸಣ್ಣ ಪುಟ್ಟ ವಸ್ತುಗಳನ್ನ ತಂದುಕೊಟ್ಟು ಹೋಗುತ್ತಿದ್ದಳು.
ಈ ವೇಳೆ 14 ವರ್ಷ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದನು. ಬಾಲಕಿ ಗರ್ಭಿಣಿಯಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಚಂದ್ರಶೇಖರನ ಮೇಲೆ ಪೋಕ್ಸೋ ಕಾಯ್ದೆಯ ಅಡಿ ದೂರು ದಾಖಲಾಗಿತ್ತು. ದೂರು ದಾಖಲಾದ ನಂತರ ಇಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.