ನಾಗರ ಪಂಚಮಿ ಹಬ್ಬವನ್ನು (Naga Panchami Festival) ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನದಂದು ವಿಶೇಷವಾಗಿ ಹಾವುಗಳನ್ನು (Snake) ಪೂಜಿಸಲಾಗುತ್ತದೆ. ಈ ಹಬ್ಬವನ್ನು ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ನಮ್ಮ ಪೂರ್ವಜರು ಹಾವುಗಳನ್ನು ದೇವತೆಗಳಿಗೆ ಹೋಲಿಸಿ ‘ನಾಗದೇವತೆ’ ಎಂದು ಕರೆದಿದ್ದಾರೆ. ಹಾವುಗಳ ಪರಂಪರೆ ಕುರಿತು ಅನೇಕ ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖವಾಗಿದೆ. ಈ ಹಿನ್ನೆಲೆಯಿಂದ ಬಂದ ಅನೇಕ ಆಚರಣೆಗಳೂ ಜಾರಿಯಲ್ಲಿವೆ. ಆದರೆ ನಾಗ, ಫಲವನ್ನು ನೀಡುವ ದೇವರು ಎಂಬುದು ತುಂಬಾ ಹಿಂದಿನಿಂದ ನಡೆದುಕೊಂಡು ಬಂದ ನಂಬಿಕೆ. ಸಂತಾನ ಪ್ರಾಪ್ತಿಗಾಗಿ ನಾಗ ದೇವರ ಆರಾಧನೆ ನಮ್ಮಲ್ಲಿ ಬಹಳ ಜನಪ್ರಿಯ. ನಮ್ಮ ಭೂಮಿಯನ್ನು ಆದಿಶೇಷ ತನ್ನ ಹೆಡೆಯಲ್ಲಿ ಧರಿಸಿದ್ದಾನೆ ಎಂದು ಪುರಾಣಗಳು ಹೇಳುತ್ತವೆ. ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲಾಗಿದೆ. ಏಕೆಂದರೆ ಆಹಾರ ಪದಾರ್ಥಗಳನ್ನು ನಾಶ ಮಾಡುವ ಇತರ ಜಂತುಗಳನ್ನ ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ನಾಗನ ಮಹಿಮೆಗಳನ್ನು ಸಾರುವ ಅನೇಕ ಸಿನಿಮಾಗಳೂ ಕನ್ನಡ ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಮೂಡಿಬಂದಿವೆ. ಅವುಗಳತ್ತ ಒಮ್ಮೆ ಚಿತ್ತ ಹಾಯಿಸೋಣ….
Advertisement
ನಾಗಕನ್ಯೆ:
1975ರಲ್ಲಿ ಬಂದ ಸಿನಿಮಾ ‘ನಾಗಕನ್ಯೆ’. ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಚೊಚ್ಚಲ ನಿರ್ದೇಶನದ ಸಿನಿಮಾವಿದು. ಡಾ ವಿಷ್ಣುವರ್ಧನ್, ರಾಜಶ್ರೀ, ಭವಾನಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸತ್ಯಂ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ನಾಗಕನ್ಯೆಯ ಸಂಗೀತ ಅನೇಕ ವರ್ಷಗಳ ಕಾಲ ಇಂತಹ ಚಿತ್ರಗಳಿಗೆ ಮಾದರಿ ಆಗಿತ್ತು. ಇದನ್ನೂ ಓದಿ: ನಾಗಭೂಷಣ್, ಅಮೃತಾ ನಟನೆಯ ‘ಟಗರು ಪಲ್ಯ’ ಟೈಟಲ್ ಟ್ರ‍್ಯಾಕ್ ರಿಲೀಸ್
Advertisement
ಗರುಡರೇಖೆ:
1982ರಲ್ಲಿ ಬಂದ ಸಿನಿಮಾ ‘ಗರುಡರೇಖೆ’. ಶ್ರೀನಾಥ್, ಮಾಧವಿ, ಅಂಬಿಕಾ, ವಜ್ರಮುನಿ, ಟೈಗರ್ ಪ್ರಭಾಕರ್ ಸೇರಿದಂತೆ ಹಲವು ನಟಿಸಿದ್ದರು. ನಾಗಮುತ್ತು ಕಥಾಹಂದರವನ್ನಾಗಿಸಿ ತಯಾರಿಸಿದ್ದ ಚಿತ್ರ. ಪಿ.ಎಸ್. ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ಗರುಡ ರೇಖೆಯ ಮಹತ್ವವನ್ನು ತಿಳಿಸಲಾಗಿತ್ತು. ಗರುಡರೇಖೆ ಹೊಂದಿರುವ ವ್ಯಕ್ತಿಯ ಕಥೆಯನ್ನೂ ಇದು ಒಳಗೊಂಡಿತ್ತು.
Advertisement
Advertisement
ಬೆಳ್ಳಿನಾಗ:
1986ರಲ್ಲಿ ಮೂಡಿ ಬಂದಿದ್ದ ಸಿನಿಮಾ ‘ಬೆಳ್ಳಿನಾಗ’. ಟೈಗರ್ ಪ್ರಭಾಕರ್, ನಳಿನಿ, ದಿನೇಶ್, ಸುದರ್ಶನ್, ರಾಜಾನಂದ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಎನ್.ಎಸ್ ಧನಂಜಯ್ ಅವರ ನಿರ್ದೇಶನ ಈ ಚಿತ್ರಕ್ಕಿದ್ದು, ವಿ.ಲಕ್ಷ್ಮಣ ಅವರ ಸಿನಿಮಾಟೋಗ್ರಫಿಯಲ್ಲಿ ನಾಗನನ್ನು ಅದ್ಭುತವಾಗಿ ತೋರಿಸಲಾಗಿತ್ತು. ಇದನ್ನೂ ಓದಿ: ಮೊದಲು ಪ್ರಪೋಸ್ ಮಾಡಿದ್ದು ಯಾರು? ಲವ್ ಸ್ಟೋರಿ ಬಿಚ್ಚಿಟ್ಟ ಹರ್ಷಿಕಾ-ಭುವನ್ ಜೋಡಿ
ನಾಗಿಣಿ:
1991ರಲ್ಲಿ ಬಂದಿದ್ದ ನಾಗಿಣಿ ಚಿತ್ರ ನೆನಪಿರಬಹುದು. ಶಂಕರ್ ನಾಗ್, ಅನಂತ್ ನಾಗ್, ದೇವರಾಜ್, ತಾರಾ, ಗೀತಾ, ರಂಜನಿ ಸೇರಿದಂತೆ ಹಲವು ನಟಿಸಿದ್ದ ಚಿತ್ರ. ಈ ಚಿತ್ರ ಸೇಡಿನ ಕಥೆಯನ್ನ ಒಳಗೊಂಡಿದೆ. ನಾಗರಾಜನನ್ನ ಕೊಂದವರ ವಿರುದ್ಧ ನಾಗಿಣಿ ಸೇಡು ತೀರಿಸಿಕೊಳ್ಳುವ ರೋಚಕ ಕಥೆ. ಗೀತಾ ಈ ಸಿನಿಮಾದಲ್ಲಿ ನಾಗಿಣಿಯಾಗಿ ನಟಿಸಿದ್ದರು. ಶ್ರೀಪ್ರಿಯ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿತ್ತು.
ಶಿವನಾಗ:
1992ರಲ್ಲಿ ಬಿಡುಗಡೆಯಾದ ಚಿತ್ರ ‘ಶಿವನಾಗ’. ಅರ್ಜುನ್ ಸರ್ಜಾ ಮತ್ತು ಮಾಲಾಶ್ರೀ ಅಭಿನಯಿಸಿದ್ದ ಸಿನಿಮಾ ಮನೆದೇವರು ನಾಗದೇವತೆ ಒಂದು ಕುಟುಂಬವನ್ನ ಹೇಗೆ ಕಾಯುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿತ್ತು. ಕೆಎಸ್‌ಆರ್ ದಾಸ್ ಈ ಚಿತ್ರ ನಿರ್ದೇಶಿಸಿದ್ದರು. ಈ ಸಿನಿಮಾ ನೋಡಿದ ಅದೆಷ್ಟೂ ಅಭಿಮಾನಿಗಳು ಶಿವನಾಗ ಪೂಜೆಯನ್ನು ಕೈಗೊಂಡಿದ್ದು ಇತಿಹಾಸ.
ಖೈದಿ:
ವಿಷ್ಣುವರ್ಧನ್, ಆರತಿ, ಮಾಧವಿ, ಜಯಮಾಲಿನಿ ನಟಿಸಿರುವ ಖೈದಿ ಸಿನಿಮಾದ ಹಾಡೊಂದು ಇಂದಿಗೂ ಬಹಳ ಜನಪ್ರಿಯವಾಗಿದೆ. ನಾಗರಾಜ ಮತ್ತು ನಾಗಿಣಿಯ ರೂಪ ತಾಳಿ ನೃತ್ಯ ಮಾಡುವ ‘ತಾಳೆ ಹೂವು ಪೊದೆಯಿಂದ…’ ಹಾಡು ಇದಾಗಿದ್ದು, ಇಂತಹ ವಿಶೇಷ ಸಂದರ್ಭದಲ್ಲಿ ಮೊದಲು ನೆನಪಾಗುತ್ತದೆ. ಈ ಸಿನಿಮಾ ಬಿಡುಗಡೆಯಾದ ವೇಳೆಯಲ್ಲಿ ಶಾಲಾ ಕಾಲೇಜು ಸಮಾರಂಭದಲ್ಲಿ ಅತೀ ಹೆಚ್ಚು ಮಕ್ಕಳು ಡಾನ್ಸ್ ಮಾಡಿದ ಹಾಡು ಇದಾಗಿತ್ತು.
ನಾಗಮಂಡಲ:
ಗಿರೀಶ್ ಕಾರ್ನಾಡ್ ಅವರ ನಾಟಕವನ್ನು ಆಧರಿಸಿ ತಯಾರಾದ ಚಿತ್ರ ‘ನಾಗಮಂಡಲ’. ಟಿ.ಎಸ್ ನಾಗಾಭರಣ ನಿರ್ದೇಶಿಸಿದ ಈ ಚಿತ್ರಕ್ಕೆ 5 ರಾಜ್ಯ ಪ್ರಶಸ್ತಿ ಲಭಿಸಿತ್ತು. ಹಾವು ಮತ್ತು ಮಹಿಳೆ ನಡುವಿನ ಪ್ರೀತಿ ಮತ್ತು ಸರಸದ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಎರಡು ಬಗೆಯ ಪಾತ್ರ ಮಾಡಿದ್ದರು. ಒಂದು ಮನುಷ್ಯನ ಪಾತ್ರವಾದರೆ, ಮತ್ತೊಂದು ಹಾವಿನ ಪಾತ್ರ. ಅಣ್ಣಪ್ಪನ ಹೆಂಡತಿಯನ್ನು ಹಾವಾಗಿ ಬಂದು ಮೋಹಿಸುವ ಕಥೆಯನ್ನು ಇದು ಒಳಗೊಂಡಿತ್ತು. ವಿಜಯಲಕ್ಷ್ಮಿ ಈ ಸಿನಿಮಾದ ನಾಯಕಿ. 1997ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ನಾಗ ಪೂಜೆಗಾಗಿಯೇ ಈ ಸಿನಿಮಾದಲ್ಲಿ ವಿಶೇಷ ಗೀತೆಯೊಂದನ್ನು ಸಂಯೋಜನೆ ಮಾಡಿದ್ದರು ಸಿ.ಅಶ್ವತ್ಥ್.
ನಾಗದೇವತೆ:
2000ನೇ ವರ್ಷದಲ್ಲಿ ತೆರೆಗೆ ಬಂದ ಸಿನಿಮಾ ನಾಗದೇವತೆ. ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ತಯಾರಾಗಿದ್ದ ಈ ಚಿತ್ರದಲ್ಲಿ ಪ್ರೇಮ, ಚಾರುಲತಾ, ಸೌಂದರ್ಯ, ಸಾಯಿ ಕುಮಾರ್ ಸೇರಿದಂತೆ ಹಲವರು ನಟಿಸಿದ್ದರು. ಸೌಂದರ್ಯ ನಾಗದೇವತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ನಾಗ ದೇವತೆಯನ್ನು ಪೂಜಿಸುವುದರಿಂದ ಆಗುವ ಲಾಭದ ಕುರಿತಾದ ಸಿನಿಮಾ ಇದಾಗಿತ್ತು.
ಶ್ರೀನಾಗಶಕ್ತಿ:
ಭಕ್ತಿ ಪ್ರಧಾನ ಕಥೆಗಳಿಗೆ ಹೆಸರುವಾಸಿವಾಗಿರುವ ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಬಂದ ಸಿನಿಮಾ ಶ್ರೀನಾಗಶಕ್ತಿ. ಶ್ರುತಿ, ರಾಮ್ ಕುಮಾರ್ ಹಾಗೂ ಚಂದ್ರಿಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಚಂದ್ರಿಕಾ ಈ ಸಿನಿಮಾದಲ್ಲಿ ಹಾವಿನ ಪಾತ್ರ ಮಾಡಿದ್ದರು. ಚಂದ್ರಿಕಾ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟ ಸಿನಿಮಾ ಕೂಡ ಇದಾಗಿದೆ. 2011ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು.
ಹಾವಿನ ಮಹಿಮೆ ಸಾರುವ ಕನ್ನಡ ಸಿನಿಮಾಗಳು:
ನಾಗದೇವತೆ-ನಾಗರಹಾವಿನ ಮಹಿಮೆ, ಮಹತ್ವ ಸಾರುವ ಸಿನಿಮಾಗಳ ನಡುವೆ ಹಾವಿನ ಹೆಸರಿನಲ್ಲಿ ಬಂದ ಅನೇಕ ಸಿನಿಮಾಗಳು ತೆರೆಯಲ್ಲಿ ಮಿಂಚಿವೆ. 1972ರಲ್ಲಿ ವಿಷ್ಣುವರ್ಧನ್, 2002ರಲ್ಲಿ ಉಪೇಂದ್ರ ಹಾಗೂ 2016ರಲ್ಲಿ ರಮ್ಯಾ-ದಿಗಂತ್ ನಟಿಸಿದ ಚಿತ್ರಕ್ಕೆ ʻನಾಗರಹಾವುʼಎಂದು ಹೆಸರಿಡಲಾಗಿತ್ತು. ರುದ್ರನಾಗ, ನಾಗರಹೊಳೆ, ನಾಗ ಕಾಳ ಭೈರವ, ಹಾವಿನ ಹೆಡೆ, ಹಾವಿನ ದ್ವೇಷ, ಬಳ್ಳಾರಿ ನಾಗ, ಕಾಳಿಂಗ ಹೀಗೆ ಹಲವು ಚಿತ್ರಗಳು ಗಮನ ಸೆಳೆದಿವೆ.
ಕೇವಲ ಬೆಳ್ಳಿತೆರೆಯಲ್ಲಿ ಮಾತ್ರವಲ್ಲ ಕಿರುತೆರೆಯಲ್ಲೂ ನಾಗದೇವತೆ ಕುರಿತಾದ ಧಾರಾವಾಹಿಗಳು ಬಂದಿವೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಜನಪ್ರಿಯವಾದ ಧಾರಾವಾಗಿ ಎಂದರೆ ಅದು ‘ನಾಗಿಣಿ’. ಇತ್ತೀಚೆಗೆ ನಾಗಿಣಿಯ ಕಥಾ ಹಂದರವನ್ನು ಹೊಂದಿರುವ ಸಾಕಷ್ಟು ಧಾರಾವಾಹಿಗಳು ಕಿರಿತೆರೆಯಲ್ಲಿ ಪ್ರಸಾರವಾಗುತ್ತಿವೆ. ಹಾವಿನ ಟ್ರೆಂಡ್ ಇದೀಗ ಕಿರುತೆರೆಯಲ್ಲಿ ಜನಪ್ರಿಯ.
Web Stories