Nag Panchami: ವರ್ಷಕೊಮ್ಮೆ ನಾಗಪಂಚಮಿಯಂದು ಮಾತ್ರ ತೆರೆಯುತ್ತೆ ನಾಗಚಂದ್ರೇಶ್ವರ ದೇವಾಲಯ

Public TV
2 Min Read
Nagchandreshwar temple in Ujjain

ದೇಶಾದ್ಯಂತ ನಾಗಪಂಚಮಿ (Nagara Panchami) ಹಬ್ಬದ ಸಂಭ್ರಮ ಮನೆ ಮಾಡಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗಪಂಚಮಿ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಸರ್ಪಗಳನ್ನು ಶಿವನ ಆಭರಣ ಎಂದು ಪರಿಗಣಿಸಲಾಗಿದೆ. ನಾಗದೇವರಿಗೆ ಭಕ್ತರು ಹಾಲೆರೆದು, ಪೂಜೆ-ಪುನಸ್ಕಾರಗಳ ಮೂಲಕ ಹಬ್ಬ ಆಚರಿಸುತ್ತಾರೆ. ಶಿವಲಿಂಗ ಪೂಜೆ ಕೂಡ ನೆರವೇಸುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿ-ಭಾವ ಮೆರೆಯುತ್ತಾರೆ. ಭಾರತದಲ್ಲಿ ಅನೇಕ ಸರ್ಪ ದೇವಾಲಯಗಳಿವೆ. ಅವುಗಳಲ್ಲಿ ಒಂದು ಉಜ್ಜಯಿನಿಯ (Ujjain) ನಾಗಚಂದ್ರೇಶ್ವರ ದೇವಾಲಯ (Nagchandreshwar Temple). ಇದು ಪ್ರಸಿದ್ಧ ಮಹಾಕಾಳ ದೇವಾಲಯದ ಮೂರನೇ ಮಹಡಿಯಲ್ಲಿದೆ. ಈ ದೇವಾಲಯವು ವರ್ಷಕ್ಕೊಮ್ಮೆ ನಾಗಪಂಚಮಿಯಂದು ಮಾತ್ರ 24 ಗಂಟೆಗಳ ಕಾಲ ತೆರೆದಿರುತ್ತದೆ.

ಈ ದೇವಾಲಯದಲ್ಲಿ ನಾಗರಾಜ ತಕ್ಷಕ ಸ್ವತಃ (ನಾಗರ ರಾಜ) ವಾಸಿಸುತ್ತಾನೆ ಎಂದು ನಂಬಲಾಗಿದೆ. ನಾಗಚಂದ್ರೇಶ್ವರ ದೇವಾಲಯದಲ್ಲಿ 11 ನೇ ಶತಮಾನದ ಅದ್ಭುತ ಪ್ರತಿಮೆಯಿದೆ. ಇದರಲ್ಲಿ ಶಿವ ಮತ್ತು ಪಾರ್ವತಿಯರು ಹೆಡೆ ಬಿಚ್ಚಿದ ಹಾವಿನ ಆಸನದ ಮೇಲೆ ಕುಳಿತಿರುವ ಭಂಗಿ ಇದೆ. ಈ ಪ್ರತಿಮೆಯನ್ನು ನೇಪಾಳದಿಂದ ಇಲ್ಲಿಗೆ ತರಲಾಗಿದೆ ಎಂದು ಹೇಳಲಾಗುತ್ತದೆ. ಉಜ್ಜಯಿನಿ ಹೊರತುಪಡಿಸಿ, ಜಗತ್ತಿನಲ್ಲಿ ಎಲ್ಲಿಯೂ ಅಂತಹ ಪ್ರತಿಮೆ ಇಲ್ಲ. ಅದರ ದರ್ಶನಕ್ಕಾಗಿ, ಸೋಮವಾರ ರಾತ್ರಿ 12 ಗಂಟೆಗೆ ದೇವಾಲಯದ ದ್ವಾರಗಳನ್ನು ತೆರೆಯಲಾಗುತ್ತದೆ. ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ, ದೇವಾಲಯದ ಬಾಗಿಲುಗಳನ್ನು ಮತ್ತೆ ಒಂದು ವರ್ಷದವರೆಗೆ ಮುಚ್ಚಲಾಗುತ್ತದೆ. ಇದನ್ನೂ ಓದಿ: ನಾಗಮಂಡಲ ಎಂದರೇನು? ಇದರ ಆಚರಣೆ, ಮಹತ್ವವೇನು?

Nagchandreshwar temple in Ujjain 1

ಸರ್ಪ ರಾಜ ತಕ್ಷಕನು ತೀವ್ರ ತಪಸ್ಸು ಮಾಡಿದನು. ಭೋಲೆನಾಥನು ಅವನ ತಪಸ್ಸಿನಿಂದ ಸಂತಸಗೊಂಡು ಹಾವುಗಳ ರಾಜ ತಕ್ಷಕ ನಾಗನಿಗೆ ಅಮರತ್ವದ ವರವನ್ನು ನೀಡಿದನು. ಅಂದಿನಿಂದ ತಕ್ಷಕ ರಾಜನು ಭಗವಂತನ ಸಹವಾಸದಲ್ಲಿ ವಾಸಿಸಲು ಪ್ರಾರಂಭಿಸಿದನು ಎಂದು ನಂಬಲಾಗಿದೆ. ಆದರೆ ಮಹಾಕಾಳ ಕಾಡಿನಲ್ಲಿ ವಾಸಿಸುವ ಮೊದಲು, ಅವನ ಏಕಾಂತತೆಯಲ್ಲಿ ಯಾವುದೇ ತೊಂದರೆ ಉಂಟಾಗಬಾರದು ಎಂಬುದು ಅವನ ಉದ್ದೇಶವಾಗಿತ್ತು. ಆದ್ದರಿಂದ ಅವನು ನಾಗಪಂಚಮಿಯ ದಿನದಂದು ಮಾತ್ರ ದರ್ಶನಕ್ಕೆ ಲಭ್ಯವಿರುತ್ತಾನೆ ಎಂಬುದು ನಂಬಿಕೆಯಾಗಿದೆ.

4 ಲಕ್ಷ ಭಕ್ತರು ಭೇಟಿ
ಮಂಗಳವಾರ ನಾಗಪಂಚಮಿಯ ಸಂದರ್ಭದಲ್ಲಿ 4 ಲಕ್ಷಕ್ಕೂ ಹೆಚ್ಚು ಭಕ್ತರು ನಾಗಚಂದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಮಧ್ಯರಾತ್ರಿ 12 ಗಂಟೆಗೆ ದೇವಾಲಯದ ದ್ವಾರಗಳು ತೆರೆದವು. ಭಕ್ತರು ಪೂಜೆ ಸಲ್ಲಿಸಿದ್ದರು. ಇಂದು ರಾತ್ರಿ 12 ಗಂಟೆಯವರೆಗೆ ದೇವಾಲಯವು ದರ್ಶನಕ್ಕಾಗಿ ತೆರೆದಿರುತ್ತದೆ. ಮಂಗಳವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸುಮಾರು 4 ಲಕ್ಷ ಭಕ್ತರು ಇಲ್ಲಿ ದರ್ಶನ ಪಡೆದಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆಗೆ ಬಾಗಿಲು ಮುಚ್ಚುವ ಹೊತ್ತಿಗೆ ಕನಿಷ್ಠ 10 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ. ಇದನ್ನೂ ಓದಿ: ಮಲೆನಾಡು – ಪ್ರಕೃತಿಯ ಆರಾಧನೆಯ ಭಾಗವಾಗಿ ನಾಗರ ಪಂಚಮಿ

ಶಿವ, ಪಾರ್ವತಿ ಮತ್ತು ಸರ್ಪ ದೇವರು ಒಟ್ಟಿಗೆ ಕುಳಿತಿರುವ ದೇವಾಲಯದ ವಿಶಿಷ್ಟ ವಿಗ್ರಹವು ಭಕ್ತರಿಗೆ ಪ್ರಬಲ ಆಕರ್ಷಣೆಯ ಕೇಂದ್ರವಾಗಿದೆ. ದೇವಾಲಯದಲ್ಲಿ ಪೂಜೆ ಮಾಡುವುದರಿಂದ ಜಾತಕದಲ್ಲಿನ ಕಾಳಸರ್ಪ ದೋಷ ಮತ್ತು ಇತರ ಸರ್ಪ ದೋಷಗಳಿಂದ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ.

Share This Article